ಸಾ.ರಾ.ಮಹೇಶ್ ಕ್ಷಮೆಯಾಚನೆಗೆ ಬಿಎಸ್‌ವೈ ಆಗ್ರಹ

Update: 2018-08-25 13:34 GMT

ಬೆಂಗಳೂರು, ಆ. 25: ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಕೂಡಲೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ರವರ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಒತ್ತಾಯಿಸಿದ್ದಾರೆ.

ಶನಿವಾರ ನಗರದ ಡಾಲರ್ ಕಾಲನಿಯಲ್ಲಿನ ತನ್ನ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಕ್ಷಣಾ ಸಚಿವೆ ಕೊಡಗು ಜಿಲ್ಲೆಗೆ ಬಂದು ಪೂರ್ವನಿಗದಿ ಸಭೆಯಲ್ಲಿ ಭಾಗವಹಿಸಿ, ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಅನುದಾನಕ್ಕೆ ಕೇಂದ್ರಕ್ಕೆ ಮನವಿ ಮಾಡುವುದಾಗಿಯೂ ತಿಳಿಸಿದ್ದಾರೆ. ಆದರೆ, ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಮಾತನಾಡುವ ಮೂಲಕ ಎಲ್ಲ ರಾಜ್ಯಸಭಾ ಸದಸ್ಯರಿಗೆ ಅವಮಾನ ಮಾಡಿದ್ದಾರೆ. ಮೊದಲು ಅವರು ಸಚಿವರಾಗಿದ್ದರು ಅನ್ನುವುದನ್ನು ಮನವರಿಕೆ ಮಾಡಿಕೊಳ್ಳಬೇಕು ಎಂದರು.

ಸಚಿವನಾಗಿದ್ದೇನೆ ಎನ್ನುವ ಹುಮ್ಮಸ್ಸಿನಲ್ಲಿ ಯಾರ ಜೊತೆ ಮಾತನಾಡುತ್ತಿದ್ದೇವೆ ಎಂಬುದನ್ನು ಮೊದಲು ತಿಳಿದುಕೊಂಡು ಮಾತನಾಡಬೇಕು ಎಂದು ಸಲಹೆ ಮಾಡಿದ ಬಿಎಸ್‌ವೈ, ಕೂಡಲೇ ಕೇಂದ್ರ ಸಚಿವರಿಗೆ ಕ್ಷಮಾಪಣೆ ಕೋರಬೇಕು ಎಂದು ಆಗ್ರಹಿಸಿದರು.

ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲಮನ್ನಾ ವಿಷಯದಲ್ಲಿ ರೈತರಿಗೆ ಋಣಮುಕ್ತ ಪ್ರಮಾಣ ಪತ್ರಗಳನ್ನು ಸರಕಾರ ಕೊಡುವುದಿಲ್ಲ. ಅವುಗಳನ್ನು ಬ್ಯಾಂಕುಗಳೇ ನೀಡಬೇಕು. ನನ್ನ ಅನುಭವದಲ್ಲಿ ಸರಕಾರ ಋಣಮುಕ್ತ ಪತ್ರ ನೀಡಿದ ಮಾಹಿತಿ ಇಲ್ಲ. ಸಾಲಮನ್ನಾ ಹೇಗೆ ಕಾರ್ಯರೂಪಕ್ಕೆ ಬರುತ್ತದೆ ಎನ್ನುವುದನ್ನು ನೋಡುತ್ತಿದ್ದೇನೆ. ಸಾಲಮನ್ನಾ ಹೇಗೆ ರೈತರಿಗೆ ಅನುಕೂಲ ಆಗಲಿದೆ ಎಂಬುದನ್ನು ಕಾದು ನೋಡಬೇಕು ಎಂದು ಹೇಳಿದರು.

ರಾಷ್ಟ್ರೀಕೃತ ಬ್ಯಾಂಕುಗಳ ಸಾಲಮನ್ನಾವನ್ನು ಈವರೆಗೂ ಯಾವುದೇ ಬ್ಯಾಂಕುಗಳು ಸ್ಪಷ್ಟಪಡಿಸಿಲ್ಲ. ಸರಕಾರ ಹೇಳಿರುವ ಹಾಗೆ ತಾನು ನಾಲ್ಕು ಕಂತುಗಳಲ್ಲಿ ಹಣ ಜಮಾ ಮಾಡುವ ಬಗ್ಗೆಯೂ ಮಾಹಿತಿ ಇಲ್ಲ. ರಾಷ್ಟ್ರೀಯ ಬ್ಯಾಂಕುಗಳ ಸಾಲಮನ್ನಾ ಸ್ವಾಗತ ಮಾಡುತ್ತೇನೆ. ಆದರೆ, ಸರಕಾರ ಇದನ್ನು ಯಾವ ರೀತಿ ಕಾರ್ಯರೂಪಕ್ಕೆ ತರುತ್ತದೆ ಎಂಬುದನ್ನು ಗಮನಿಸುವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News