ವೃತ್ತಿ ತರಬೇತಿಗಿಂತ ಕೌಶಲ್ಯಾಭಿವೃದ್ಧಿಯ ಕಲ್ಪನೆ ಮುಖ್ಯ: ಅನಂತಕುಮಾರ್ ಹೆಗಡೆ

Update: 2018-08-25 13:37 GMT

ಬೆಂಗಳೂರು, ಆ.25: ಮಕ್ಕಳಿಗೆ ವೃತ್ತಿ ತರಬೇತಿಗಿಂತ ಕೌಶಲ್ಯಾಭಿವೃದ್ಧಿಯ ಕಲ್ಪನೆ ನೀಡುವುದು ಮುಖ್ಯ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.

ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಶಿಕ್ಷಣ ಇಲಾಖೆ ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ ವಿಷಯ ತಜ್ಞರೊಂದಿಗೆ ಸಮಾಲೋಚನಾ ಮತ್ತು ವೃತ್ತಿ ಶಿಕ್ಷಣದ ಕುರಿತು ಕಾರ್ಯಾಗಾರ ಉದ್ಫಾಟಿಸಿ ಅವರು ಮಾತನಾಡಿದರು. ಪ್ರಸ್ತುತ ನಮ್ಮ ದೇಶದಲ್ಲಿ ಮಕ್ಕಳನ್ನು ಕಾರ್ಮಿಕ ವ್ಯವಸ್ಥೆಗೆ ದೂಡುವಂತಹ ಶಿಕ್ಷಣ ವ್ಯವಸ್ಥೆ ಇದೆ. ಎಲ್ಲಿಯ ತನಕ ಸ್ವಂತಿಕೆಯ ಮೇಲೆ ವ್ಯಕ್ತಿತ್ವ ರೂಪುಗೊಳ್ಳುವುದಿಲ್ಲವೋ ಅಲ್ಲಿಯ ತನಕ ಈ ಕಾರ್ಮಿಕ ವ್ಯವಸ್ಥೆಯಿಂದ ಹೊರಬರಲು ಸಾಧ್ಯವಿಲ್ಲ ಎಂದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಮಾತನಾಡಿ, ಖಾಸಗಿ ಕಂಪೆನಿಗಳು ತಮ್ಮ ಸಾಮಾಜಿಕ ಜವಾಬ್ದಾರಿಯ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮದಡಿ ಕೈಗೊಳ್ಳುವ ಕಾರ್ಯಗಳು ಬೆಂಗಳೂರನ್ನು ಹೊರತುಪಡಿಸಿ ರಾಜ್ಯದ ಇತರೆ ಜಿಲ್ಲೆಗಳಿಗೂ ಸಹ ವಿಸ್ತರಿಸಬೇಕು ಎಂದು ಹೇಳಿದರು.

ಗ್ರಾಮಾಂತರ ಪ್ರದೇಶದ ಮಕ್ಕಳ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಶಾಲೆ ಮನೆಯ ಮುಂದುವರೆದ ಭಾಗವಾಗಿರಬೇಕು. ಮಕ್ಕಳಿಗೆ ಆತ್ಮವಿಶ್ವಾಸ ತುಂಬಿಸಿ ಕಲಿಸುವ ಕೌಶಲ್ಯ ಕೊನೆಯವರೆಗೂ ಉಳಿಯುತ್ತದೆ. ಪ್ರೌಢ ಶಿಕ್ಷಣದಿಂದಲೇ ಕೌಶಲ್ಯಾಧಾರಿತ ಶಿಕ್ಷಣ ಆರಂಭವಾಗಬೇಕು ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕ ಸಿ.ಶಿಖಾ, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಡಾ.ಪಿ.ಸಿ.ಜಾಫರ್ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News