1997ರಿಂದ ಪಾಕ್ ಜೈಲಿಗೆ ರಾಖಿ ಕಳುಹಿಸುತ್ತಿರುವ ಭಾರತದ ಮಹಿಳೆ

Update: 2018-08-26 09:12 GMT

ಅಹ್ಮದಾಬಾದ್, ಆ.26: ಭಾರತದ ಮಹಿಳೆಯೊಬ್ಬರು 1997ರಿಂದ ಪಾಕಿಸ್ತಾನದ ಕೋಟ್ ಲಖ್ಪತ್ ನಲ್ಲಿರುವ ಜೈಲಿಗೆ ವರ್ಷಂಪ್ರತಿ ರಕ್ಷಾಬಂಧನ ದಿನ ರಾಖಿ ಕಳುಹಿಸುತ್ತಿದ್ದಾರೆ.

ಭಾರತದ ಪರ ಗೂಢಚರ್ಯೆ ನಡೆಸಿದ ಆರೋಪದಲ್ಲಿ ಪಾಕಿಸ್ತಾನವು 1994ರಲ್ಲಿ ಕುಲ್ ದೀಪ್ ಯಾದವ್ ರನ್ನು ಜೈಲಿಗಟ್ಟಿದೆ. ಇವರ ಸಹೋದರಿ ರೇಖಾ ಯಾದವ್ ಅಹ್ಮದಾಬಾದ್ ನ ಚಂದ್ ಖೇಡಾದಲ್ಲಿ ವಾಸಿಸುತ್ತಿದ್ದಾರೆ. ಕುಲ್ ದೀಪ್ ಜೈಲಿನಲ್ಲಿರುವ ವಿಚಾರ 1997ರಲ್ಲಿ ಕುಟುಂಬಸ್ಥರಿಗೆ ತಿಳಿದುಬಂದಿತ್ತು. ಅವರಿಗೆ 25 ವರ್ಷ ಜೈಲುಶಿಕ್ಷೆ ವಿಧಿಸಲಾಗಿತ್ತು.

 “ಜೈಲಿನಿಂದಲೇ ಅವರ ಪತ್ರಗಳು ನಮಗೆ ಬರುತ್ತಿತ್ತು. ಕೊನೆಯ ಬಾರಿ 2011ರಲ್ಲಿ ಅಣ್ಣನ ಪತ್ರ ಲಭಿಸಿತ್ತು” ಎಂದು ಹೇಳುತ್ತಾರೆ ರೇಖಾ. ಆನಂತರ ಯಾವುದೇ ಪತ್ರಗಳು ಬಂದಿಲ್ಲದ ಕಾರಣ ಕುಟುಂಬಸ್ಥರಲ್ಲಿ ಆತಂಕವಿದೆ. ಕುಲ್ ದೀಪ್ ಬದುಕಿದ್ದಾರೆ ಎನ್ನುವುದು ತಿಳಿದರೆ ಅಷ್ಟೇ ಸಾಕು ಎನ್ನುತ್ತಾರೆ ಕುಟುಂಬಸ್ಥರು.

ಕೇಂದ್ರ ಸರಕಾರ ತಮ್ಮೊಂದಿಗೆ ಮಾತುಕತೆ ನಡೆಸಿತ್ತು. 2021 ಸೆಪ್ಟಂಬರ್ 10ರಂದು ಜೈಲುಶಿಕ್ಷೆಯ ಅವಧಿ ಕೊನೆಗೊಳ್ಳಲಿದೆ ಎಂದು ತಿಳಿಸಿತ್ತು ಎಂದು ರೇಖಾ ಹೇಳುತ್ತಾರೆ. “ನಾವು ವರ್ಷಗಳ ಕಾಲ ಅವನಿಗಾಗಿ ಕಾದೆವು. 2021ರವರೆಗೆ ನಾವು ಖುಷಿಯಿಂದಲೇ ಕಾಯುತ್ತೇವೆ. ಆದರೆ ಅವನು ಬದುಕಿದ್ದಾನೆ ಎನ್ನುವ ಬಗ್ಗೆ ನನಗೆ ತಿಳಿಯಬೇಕು” ಎಂದವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News