ಕೊಡಗು ಜಿಲ್ಲೆಯಲ್ಲಿ ಪುನರ್ವಸತಿಗಾಗಿ 42 ಎಕರೆ ಭೂಮಿ ಗುರುತು: ಸಚಿವ ಯು.ಟಿ.ಖಾದರ್

Update: 2018-08-27 12:33 GMT

ಬೆಂಗಳೂರು, ಆ.27: ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ನೆರೆ ಹಾವಳಿಯಿಂದ ಮನೆಗಳನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು 42 ಎಕರೆ ಭೂಮಿಯನ್ನು ಗುರುತಿಸಲಾಗಿದೆ ಎಂದು ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದರು.

ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಪೈಕಿ 24 ಎಕರೆ ಭೂಮಿಗೆ ಸಂಬಂಧಿಸಿದಂತೆ ಸರ್ವೆ ನಂಬರ್ ಗುರುತಿಸಲಾಗಿದೆ. ಉಳಿದ ಭೂಮಿಯ ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ದೇಶಕ್ಕೆ ಮಾದರಿಯಾಗುವಂತಹ ವ್ಯವಸ್ಥೆಯನ್ನು ಕಲ್ಪಿಸಲು ಸರಕಾರ ತೀರ್ಮಾನ ಮಾಡಿದೆ ಎಂದರು.

ಕೊಡಗು ಜಿಲ್ಲೆಯನ್ನು ಪುನರ್ ನಿರ್ಮಾಣ ಮಾಡಲು ಮುಂದಾಗಿದ್ದೇವೆ. ವಸತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಇಂದು ವರದಿ ಸಲ್ಲಿಸಿದ್ದಾರೆ. 758 ಕುಟುಂಬಗಳು ಸೂರು ಕಳೆದುಕೊಂಡಿದ್ದು, ಅವರಿಗೆ ಮಾದರಿ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು. ಈ ಸಂಬಂಧ ಮುಖ್ಯಮಂತ್ರಿ ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ. ಸದ್ಯಕ್ಕೆ ಆಶ್ರಯ ಕೇಂದ್ರಗಳಲ್ಲಿ ಅವರಿಗೆ ನೆರವು ಕಲ್ಪಿಸಲಾಗಿದೆ ಎಂದು ಖಾದರ್ ತಿಳಿಸಿದರು.

ಗುಡ್ಡಗಾಡು ಪ್ರದೇಶದಲ್ಲಿ ಮನೆ ಕಟ್ಟುವುದೇ ಸವಾಲಿನ ಕೆಲಸ. ಎಲ್ಲರಿಗೂ ಒಂದೇ ಮಾದರಿಯ ಮನೆಗಳನ್ನು ನಿರ್ಮಿಸಿಕೊಡಲಾಗುವುದು. ಎರಡು, ಮೂರು ಮಾದರಿಯ ಯೋಜನೆಯನ್ನು ಸಿದ್ಧಮಾಡಿಟ್ಟುಕೊಂಡಿದ್ದೇವೆ. ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿದ ಬಳಿಕ ಎಲ್ಲವನ್ನೂ ಅಂತಿಮಗೊಳಿಸಲಾಗುವುದು ಎಂದು ಅವರು ಹೇಳಿದರು.

ರಾಜೀವ್‌ಗಾಂಧಿ ವಸತಿ ನಿಗಮ, ಆಶ್ರಯ ಮನೆಗಳು ಇಡೀ ರಾಜ್ಯಕ್ಕೆ ಅನ್ವಯವಾಗುವ ಯೋಜನೆಗಳು. ಕೊಡಗು ಜಿಲ್ಲೆಯಲ್ಲಿ ಸಂಭವಿಸಿರುವುದು ಪ್ರಕೃತಿ ವಿಕೋಪ. ಆದುದರಿಂದ, ಈ ಜಿಲ್ಲೆಯಲ್ಲಿ ಕಟ್ಟುವ ಮನೆಗಳಿಗೆ ಪ್ರತ್ಯೇಕವಾದ ಅನುದಾನ ಬಳಕೆಯಾಗಲಿದೆ ಎಂದು ಖಾದರ್, ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಹೊಸ ಮನೆಗಳಿಗೆ ಹೋಗುವವರಿಗೆ ರಾಜ್ಯ ಸರಕಾರದಿಂದ ಉಡುಗೊರೆ ಕಿಟ್ ಅನ್ನು ನೀಡಲು ಉದ್ದೇಶಿಸಲಾಗಿದೆ. ಅದರಲ್ಲಿ ಗೃಹ ಬಳಕೆಗೆ ಒಂದು ತಿಂಗಳಿಗೆ ಅಗತ್ಯವಿರುವಷ್ಟು ಸಾಮಗ್ರಿಗಳು ಸೇರಿದಂತೆ ಇನ್ನಿತರ ವಸ್ತುಗಳು ಇರಲಿವೆ ಎಂದು ಅವರು ಹೇಳಿದರು.

ಕೊಡಗಿನ ಅನಾಹುತಕ್ಕೆ ಅವೈಜ್ಞಾನಿಕ ಪ್ರಗತಿ ಕಾರಣ ಎನ್ನಲಾಗ್ತಿದೆ. ಈ ಸಂಬಂಧ ತಜ್ಞರ ಸಲಹೆ ಪಡೆಯುತ್ತೇವೆ. ಗುಡ್ಡಗಾಡು ಪ್ರದೇಶಗಳಲ್ಲಿ ಕಟ್ಟಡಗಳ ನಿರ್ಮಾಣವನ್ನು ವೈಜ್ಞಾನಿಕವಾಗಿ ಮಾಡುತ್ತೇವೆ. ಅದಕ್ಕಾಗಿ ಅಗತ್ಯ ಮಾನದಂಡಗಳನ್ನು ರೂಪಿಸಲಾಗುವುದು ಎಂದು ಖಾದರ್ ಹೇಳಿದರು.

ಕೊಡಗು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಳೆಯಿಂದ ಉಂಟಾದ ಅನಾಹುತದ ಸಂದರ್ಭದಲ್ಲಿ ಜನರ ನೋವಿಗೆ ಸರಕಾರ ಉತ್ತಮವಾಗಿ ಸ್ಪಂದಿಸುತ್ತಿದೆ. ಕೊಡಗಿನ ಜನರ ಸಂಕಷ್ಟಕ್ಕೆ ಅಪಾರ ಮಂದಿ ನೆರವು ಕೊಟ್ಟಿದ್ದಾರೆ. ಕೊಡಗು ಪುನರ್ ನಿರ್ಮಾಣದಲ್ಲಿ ವಸತಿ ಇಲಾಖೆಯ ಪಾತ್ರ ದೊಡ್ಡದು ಎಂದು ಅವರು ತಿಳಿಸಿದರು. ಕೊಡಗಿನ ಜನರಿಗೆ ವಸತಿ ಕಲ್ಪಿಸಲು ಕನಿಷ್ಠ 6 ತಿಂಗಳು ಬೇಕು. ಅಲ್ಲಿಯವರೆಗೆ ಸಂತ್ರಸ್ತರಿಗೆ ತಾತ್ಕಾಲಿಕವಾಗಿ ವಸತಿ ಸೌಲಭ್ಯ ಕಲ್ಪಿಸುವ ಸಂಬಂಧ ಚರ್ಚೆಗಳು ನಡೆಯುತ್ತಿವೆ. ನೆರೆ ಹಾವಳಿಯಿಂದ ಹಾನಿಯಾಗಿರುವ ಮನೆಗಳಿಗೆ ಜಿಲ್ಲಾಧಿಕಾರಿ ಮೂಲಕ ಪರಿಹಾರ ಒದಗಿಸಲಾಗುವುದು ಎಂದು ಖಾದರ್ ಹೇಳಿದರು.

49 ಸಾವಿರ ಮನೆ ನಿರ್ಮಾಣ: ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ನಿರ್ಮಾಣ ಯೋಜನೆಯಡಿಯಲ್ಲಿ ಮೊದಲ ಹಂತದಲ್ಲಿ 49 ಸಾವಿರ ಮನೆಗಳನ್ನು ನಿರ್ಮಿಸಲಾಗುವುದು. ಮೂರು ತಿಂಗಳಲ್ಲಿ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಗುವುದು. ಒಂದು ಮನೆಗೆ 6 ಲಕ್ಷ ರೂ.ವೆಚ್ಚವಾಗಲಿದೆ. ಈ ಪೈಕಿ ಸರಕಾರ 2.75 ಲಕ್ಷ ರೂ. ನೀಡಲಿದ್ದು, ಹಾಗೂ ಉಳಿದ ಮೊತ್ತವನ್ನು ಫಲಾನುಭವಿಗಳು ಬ್ಯಾಂಕ್ ಲೋನ್ ಮೂಲಕ ಪಾವತಿಸಬೇಕು ಎಂದು ಅವರು ತಿಳಿಸಿದರು.

ಮನೆಗಳ ನಿರ್ಮಾಣಕ್ಕಾಗಿ ವಿವಿಧ ಇಲಾಖೆಗಳಿಂದ ಅನುಮತಿ ಪಡೆಯಬೇಕಿದೆ. ಇದರಿಂದ, ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಆದುದರಿಂದ, ಮನೆಗಳ ನಿರ್ಮಾಣಕ್ಕಾಗಿ ಅನುಮತಿ ಪಡೆಯಲು ಏಕಗವಾಕ್ಷಿ ಯೋಜನೆ ಜಾರಿಗೆ ತರಲಾಗುವುದು ಎಂದು ಖಾದರ್ ಹೇಳಿದರು.

‘ಸ್ಪಂದನ’ ಕಾಲ್ ಸೆಂಟರ್ ಆರಂಭ

ವಸತಿ ಇಲಾಖೆಯ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗದರ್ಶನ ನೀಡಲು ‘ಸ್ಪಂದನ’ ಕಾಲ್ ಸೆಂಟರ್(ಟೋಲ್ ಫ್ರೀ ನಂಬರ್-2311 8888) ಅನ್ನು ಸೆ.1ರಂದು ಬೆಳಗ್ಗೆ 10 ಗಂಟೆಗೆ ನಗರದ ಕಾವೇರಿ ಭವನದಲ್ಲಿರುವ ರಾಜೀವ್‌ ಗಾಂಧಿ ವಸತಿ ನಿಗಮದ ಕಚೇರಿಯಲ್ಲಿ ಚಾಲನೆ ನೀಡಲಾಗುವುದು. ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳನ್ನು ಸಹಾಯವಾಣಿಗೆ ಸಂಪರ್ಕಿಸಿ ವಿವರಗಳನ್ನು ಪಡೆದುಕೊಳ್ಳಬಹುದು. ಫಲಾನುಭವಿಗಳು ಹಾಗೂ ಇಲಾಖೆಯ ನಡುವೆ ನೇರ ಸಂಪರ್ಕಕ್ಕಾಗಿ ಈ ಸಹಾಯವಾಣಿ ಪ್ರಾರಂಭ ಮಾಡುತ್ತಿದ್ದೇವೆ.

-ಯು.ಟಿ.ಖಾದರ್, ವಸತಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News