ಕೊಡಗಿನ ಪಾಲಿನ ಒಳಗಿನವರು-ಹೊರಗಿನವರು

Update: 2018-08-27 18:38 GMT

ನೆರೆಯಿಂದ ತತ್ತರಿಸಿದ ಕೊಡಗನ್ನು ವೀಕ್ಷಿಸಲು ಇತ್ತೀಚೆಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಆಗಮಿಸಿದ್ದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ಸಭೆಗೆ ಆಗಮಿಸಿದಾಗ ಅವರನ್ನು ಪರಿಸರ ತಜ್ಞರ ತಂಡವೊಂದು ಭೇಟಿ ಮಾಡಿತು. ಈ ಪರಿಸರವಾದಿಗಳಲ್ಲಿ ನಿವೃತ್ತ ಸೇನಾಧಿಕಾರಿಗಳು ಇದ್ದರು ಎನ್ನುವುದು ಬಹುಮುಖ್ಯ ಅಂಶ. ಸಭೆಗೆ ನೇರವಾಗಿ ಆಗಮಿಸುವ ಬದಲು ಸಚಿವೆ, ಈ ಪರಿಸರವಾದಿಗಳ ಜೊತೆಗೆ ಮಾತುಕತೆ ನಡೆಸತೊಡಗಿದರು. ಅಭಿವೃದ್ಧಿಯ ಹೆಸರಿನಲ್ಲಿ ಕೊಡಗಿನಲ್ಲಿ ಇತ್ತೀಚೆಗೆ ನಡೆಯುತ್ತಿರುವ ಯದ್ವಾತದ್ವಾ ಪರಿಸರ ನಾಶ, ಗುಡ್ಡಗಳ ಗಣಿಗಾರಿಕೆ ಇತ್ಯಾದಿಗಳು ಹೇಗೆ ಕೊಡಗಿಗೆ ಮಾರಕವಾಯಿತು ಎನ್ನುವುದನ್ನು ಅವರು ಸಚಿವೆಗೆ ವಿವರಿಸಿ ಮನವಿ ಅರ್ಪಿಸಲು ಬಯಸಿದ್ದರು. ಯಾವಾಗ ರಕ್ಷಣಾ ಸಚಿವೆ, ಪರಿಸರವಾದಿಗಳ ಜೊತೆಗೆ ಗಂಭೀರವಾಗಿ ಮಾತಿಗೆ ತೊಡಗಿದರೋ, ಬಿಜೆಪಿ ಮತ್ತು ಕಾಂಗ್ರೆಸ್‌ನ ಜನಪ್ರತಿನಿಧಿಗಳು ಒಂದಾಗಿ ಸಚಿವೆಯ ಮೇಲೆ ಬಿದ್ದರು.

‘ಸಚಿವೆಗಾಗಿ ಸಭೆಯಲ್ಲಿ ಅಧಿಕಾರಿಗಳು ಕಾಯುತ್ತಿದ್ದಾರೆ’ ‘ಸಭೆ ತಡವಾಗುತ್ತದೆ’ ಎಂಬಿತ್ಯಾದಿ ನೆಪಗಳನ್ನು ಮುಂದೊಡ್ಡಿ ಮಾತುಕತೆಗೆ ಅಡ್ಡಿ ಮಾಡಲು ಯತ್ನಿಸಿದರು. ಇದು ರಕ್ಷಣಾ ಸಚಿವೆಗೆ ಸಹಜವಾಗಿಯೇ ಸಿಟ್ಟು ತರಿಸಿತ್ತು ‘‘ನಾನಿಲ್ಲಿ ಮಾಜಿ ಸೈನಿಕರ ಜೊತೆಗೆ ಮಾತನಾಡುತ್ತಿದ್ದೇನೆ....’’ ಎಂದು ಹೇಳಿದರೂ, ಬಿಜೆಪಿಯ ಮುಖಂಡ ಕೆ.ಜಿ. ಬೋಪಯ್ಯ ಅವರು ‘‘ಸರಿ, ಹಾಗಾದರೆ ನಿಮಗೆ ತೋಚಿದಂತೆ ಮಾಡಿ’’ ಎಂದು ಉದ್ಧಟತನದ ಪ್ರತಿಕ್ರಿಯೆಯನ್ನು ನೀಡಿದರು. ಈ ಸಂದರ್ಭವನ್ನು ಜಿಲ್ಲಾ ಉಸ್ತುವಾರಿ ಸಚಿವರೂ ಪೂರಕವಾಗಿ ಬಳಸಿಕೊಂಡು ಬಿಜೆಪಿಗೆ ಇರಿಸು ಮುರಿಸು ಉಂಟು ಮಾಡಲು ಯತ್ನಿಸಿದರು. ಎಲ್ಲದರ ಪರಿಣಾಮವಾಗಿ, ರಕ್ಷಣಾ ಸಚಿವೆ ಅಸಮಾಧಾನದಿಂದಲೇ ಕೊಡಗು ಜಿಲ್ಲೆಯಿಂದ ನಿರ್ಗಮಿಸುವಂತಾಯಿತು. ಕೊಡಗಿನ ಜನಪ್ರತಿನಿಧಿಗಳಿಗೆ ಪರಿಸರವಾದಿಗಳು ಮತ್ತು ಪರಿಸರ ತಜ್ಞರ ಬಗ್ಗೆ ಇರುವ ಫೋಬಿಯಾ ಇಂದು ನಿನ್ನೆಯದಲ್ಲ. ರಕ್ಷಣಾ ಸಚಿವೆಯ ಜೊತೆಗೆ ಪರಿಸರವಾದಿಗಳು ಮಾತನಾಡಲೇ ಬಾರದು ಎಂದು ರಕ್ಷಣಾ ಸಚಿವೆಗೆ ಆದೇಶ ನೀಡಲು ಕೊಡಗಿನ ಬಿಜೆಪಿ ಮುಖಂಡರಿಗೆ ಇರುವ ಅಧಿಕಾರವಾದರೂ ಏನು? ಪರಿಸರವಾದಿಗಳು ತಮ್ಮ ಅಭಿಪ್ರಾಯಗಳನ್ನು ಸಚಿವೆಯ ಜೊತೆಗೆ ಮಂಡಿಸಿದರೆ, ಇವರಿಗೇನು ತೊಂದರೆ? ವಿಶ್ವವೇ ಇಂದು ಪರಿಸರದ ಕುರಿತಂತೆ ಗಂಭೀರವಾಗಿ ಮಾತನಾಡುತ್ತಿರುವಾಗ, ಕೊಡಗಿನಂತಹ ಸೂಕ್ಷ್ಮ ಪ್ರದೇಶಗಳ ಕುರಿತಂತೆ ಪರಿಸರವಾದಿಗಳು ಕಾಳಜಿಯ ಮಾತನಾಡಿದಾಕ್ಷಣ, ಅದನ್ನು ಇವರು ಕೊಡಗಿನ ವಿರುದ್ಧ ಎಂದು ಯಾಕೆ ತಿಳಿಯಬೇಕು?

ಪರಿಸರವಾದಿಗಳು ಕೊಡಗಿನ ಮರಗಿಡ, ಬೆಟ್ಟ, ಗುಡ್ಡ, ಕಾಡು, ಪ್ರಾಣಿಗಳ ಕುರಿತಂತೆ ಕಾಳಜಿಯ ಮಾತನಾಡುತ್ತಿದ್ದಂತೆಯೇ, ‘‘ಕೊಡಗಿನ ಅಭಿವೃದ್ಧಿಯ ವಿರೋಧಿಗಳು’’ ಎಂದು ಜನಪ್ರತಿನಿಧಿಗಳು ಅವರಿಗೆ ತಲೆಬರಹ ಕಟ್ಟಿ ಬಿಡುತ್ತಾರೆ. ಕೊಡಗಿನಲ್ಲಿ ಹಲವು ಬಾರಿ ಪರಿಸರವಾದಿಗಳ ಮೇಲೆ, ಸ್ಥಳೀಯರ ಮೂಲಕ ರಾಜಕೀಯ ನಾಯಕರು ಹಲ್ಲೆಗಳನ್ನೂ ನಡೆಸಿದ್ದಾರೆ. ಪರಿಸರವಾದಿಗಳಿಗೆ ‘ಹೊರಗಿನವರು’ ಎಂಬ ಹಣೆಪಟ್ಟಿಗಳನ್ನು ಕಟ್ಟಿದ್ದಾರೆ. ‘ಹೊರಗಿನವರಿಗೆ ಕೊಡಗಿನಲ್ಲೇನು ಕೆಲಸ’ ಎಂಬ ಪ್ರಶ್ನೆಗಳನ್ನು ತಮ್ಮ ಹಿತಾಸಕ್ತಿಗಳಿಗೆ ಧಕ್ಕೆ ಬಂದಾಗ ರಾಜಕಾರಣಿಗಳು, ಕೊಡಗಿನ ಭೂಮಾಲಕರು ಪದೇ ಪದೇ ಕೇಳುತ್ತಾರೆ. ನೆರೆಯಿಂದ ಕೊಡಗು ತತ್ತರಿಸಿದ ಸಂದರ್ಭದಲ್ಲೂ, ಹೊರಗಿನಿಂದ ಬಂದ ನೆರೆ ಪರಿಹಾರವನ್ನು ಅರ್ಹ ಜನರಿಗೆ ತಲುಪಿಸಲು ಪ್ರಯತ್ನಿಸಿದಾಗ ಕೆಲವು ರಾಜಕೀಯ ಸಂಘಟನೆಗಳು ಇಂತಹದೇ ಪದವನ್ನು ಬಳಸಿ ಅದನ್ನು ತಡೆಯಲು ಯತ್ನಿಸಿತ್ತು. ಪರಿಸರದ ಮಟ್ಟಿಗೆ ಕೊಡಗು ಬಹಳ ಸೂಕ್ಷ್ಮ ಪ್ರದೇಶ.

ಸಾಂಸ್ಕೃತಿಕವಾಗಿಯೂ ಅದು ತನ್ನದೇ ಆದ ವಿಶೇಷ ಅಸ್ಮಿತೆಯನ್ನು ಹೊಂದಿದೆ. ಈ ಕಾರಣದಿಂದಲೇ, ಹೊರಗಿನ ಜನರನ್ನು ಸದಾ ಅನುಮಾನದಿಂದ ನೋಡುತ್ತಾ ಬಂದಿದೆ. ಹೊರಗಿನವರನ್ನು ಸುಲಭವಾಗಿ ಸ್ವೀಕರಿಸುವ ಮುಕ್ತ ಮನಸ್ಥಿತಿಯನ್ನು ಅದು ಇನ್ನೂ ಹೊಂದಿಲ್ಲ. ಇದನ್ನು ಕೆಲವು ಮೂಲಭೂತವಾದಿ ಜನರು ತಮಗೆ ಪೂರಕವಾಗಿ ಬಳಸಿಕೊಂಡು ಬಂದಿದ್ದಾರೆ. ಇಂದು ಕೊಡಗಿನಿಂದ ಸಾವಿರಾರು ಜನರು ಬೆಂಗಳೂರಿನಂತಹ ನಗರಗಳಿಗೆ ವಲಸೆ ಹೋಗಿದ್ದಾರೆ. ಇವರನ್ನು ಅಲ್ಲಿ ಯಾರೂ ಪರಕೀಯರು ಎಂದು ಭಾವಿಸಿ ತಿರಸ್ಕರಿಸಿಲ್ಲ. ಅನ್ಯ ಭಾವನೆಯಿಂದ ನೋಡಿಯೂ ಇಲ್ಲ. ಇದೇ ಸಂದರ್ಭದಲ್ಲಿ ಕೊಡಗೇತರ ಜಿಲ್ಲೆಗಳಿಂದ ಬಂದ ಮುಖ್ಯವಾಗಿ ಮಲಯಾಳಂ ಮಾತನಾಡುವ ಕೇರಳಿಗರ ಕುರಿತಂತೆ ಸಂಕುಚಿತಭಾವನೆಯನ್ನು ಹೊಂದಿರುವ ಕೆಲವು ನಿರ್ದಿಷ್ಟ ಸಂಘಟನೆಗಳಿವೆ. ತಮ್ಮೆಲ್ಲ ತಪ್ಪುಗಳನ್ನು ಮುಚ್ಚಿಟ್ಟುಕೊಂಡು, ಆದ ಅನಾಹುತಗಳಿಗೆಲ್ಲ ಹೊರಗಿನ ಜನರನ್ನು ಹೊಣೆ ಮಾಡುತ್ತಾ ಬಂದಿವೆ. ಕೊಡಗಿನಲ್ಲಿ ಸಂಘಪರಿವಾರ ಬಲವಾಗಿ ಬೇರೂರಿದ ಬಳಿಕ ‘ಹೊರಗಿನವರು-ಒಳಗಿನವರು’ ಎನ್ನುವ ಭೇದ ಹೆಚ್ಚಿದೆ. ರಾಜಕೀಯ ಹಿತಾಸಕ್ತಿಗಾಗಿ ಇದನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪರಿಸರವಾದಿಗಳನ್ನೂ ಇದೇ ಅಸ್ಮಿತೆಯ ಆಧಾರದಲ್ಲಿ ದೂರ ಇಡಲು ಕೊಡಗಿನ ಕೆಲವು ಶಕ್ತಿಗಳು ಹವಣಿಸುತ್ತಿವೆ. ಆದುದರಿಂದಲೇ, ಗಾಡ್ಗೀಳ್ ಅಥವಾ ಕಸ್ತೂರಿ ರಂಗನ್ ವರದಿಗಳ ಪ್ರಸ್ತಾಪವಾಗುತ್ತಿದ್ದಂತೆಯೇ ಇವರು ದೆವ್ವ ಕಂಡಂತಾಡುತ್ತಾರೆ. ಕನಿಷ್ಠ ಮುಕ್ತ ಚರ್ಚೆಗೂ ಅವರು ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ಸರಕಾರವೇನಾದರೂ ಪೂರಕವಾಗಿ ಮಾತನಾಡಿದರೆ ‘ಪ್ರತ್ಯೇಕ ರಾಜ್ಯ’ದ ಗುಮ್ಮನನ್ನು ಮುಂದಿಡುತ್ತಾರೆ.

    ಈ ಬಾರಿ ಕೊಡಗಿನಲ್ಲಿ ನಡೆದಿರುವ ಅನಾಹುತಗಳಿಗೆ ಕೇವಲ ಮಳೆ ಕಾರಣ ಖಂಡಿತ ಅಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಬೆಟ್ಟ, ಗುಡ್ಡಗಳ ಮೇಲೆ ನಡೆದಿರುವ ಹಸ್ತಕ್ಷೇಪ ತನ್ನದೇ ಆದ ಪರಿಣಾಮವನ್ನು ಬೀರಿದೆ. ಕೇರಳ ಮತ್ತು ಕೊಡಗಿನಲ್ಲಿ ಕಾಣಿಸಿಕೊಂಡಿರುವ ಭಾರೀ ಮಳೆ ಮತ್ತು ನೆರೆಗೆ ಹವಾಮಾನ ಬದಲಾವಣೆ ಕಾರಣ ಎಂದು ತಜ್ಞರು ತಿಳಿಸಿದ್ದಾರೆ. ಪಶ್ಚಿಮ ಘಟ್ಟಗಳು ಮತ್ತು ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ನಡೆದಿರುವ ಕೆಟ್ಟ ಅಭಿವೃದ್ಧಿ ಪದ್ಧತಿ, ದೂರ ದೃಷ್ಟಿಯಿಲ್ಲದ ಯೋಜನೆಗಳು ನೆರೆಯ ವಿಕೋಪವನ್ನು ಹೆಚ್ಚಿಸಿತು ಎಂದೂ ಅವರು ತಿಳಿಸಿದ್ದಾರೆ. ಸರಕಾರವೇ ಹೇಳುವಂತೆ, ಕೇರಳದಲ್ಲಿ ನೆರೆಯ ಹಾನಿಯ ಪ್ರಮಾಣ ಹೆಚ್ಚಲು ಮುಖ್ಯ ಕಾರಣ ಮುಲ್ಲಾ ಪೆರಿಯಾರ್ ಅಣೆಕಟ್ಟಿನಿಂದ ಹೊರಬಿಟ್ಟಿರುವ ನೀರು. ಈ ಅಣೆಕಟ್ಟು, ಕೇರಳವನ್ನು ಸದಾ ಭಯಭೀತಗೊಳಿಸುತ್ತಲೇ ಇದೆ.

ಒಂದಲ್ಲ ಒಂದು ದಿನ ಈ ಅಣೆಕಟ್ಟು ಕೇರಳವನ್ನು ನಾಶ ಮಾಡಲಿದೆ ಎನ್ನುವುದನ್ನು ಪರಿಸರ ತಜ್ಞರು ಭವಿಷ್ಯ ನುಡಿದಿದ್ದಾರೆ. ಈ ಅಣೆಕಟ್ಟಿನ ಎತ್ತರವನ್ನು ತಗ್ಗಿಸದೇ ಇದ್ದರೆ, ಇಡೀ ಕಟ್ಟೆ ಒಂದು ದಿನ ಒಡೆದು ಹೋಗಲಿದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಆದರೆ ಪರಿಸರ ತಜ್ಞರ ಎಲ್ಲ ಮಾತುಗಳೂ, ವ್ಯವಸ್ಥೆಯ ಪಾಲಿಗೆ ಕಹಿ ಗುಳಿಗೆಗಳಾಗಿವೆ. ಕೊಡಗಿಗೆ ಸಂಬಂಧಪಟ್ಟಂತೆ, ಪರಿಸರವಾದಿಗಳನ್ನು ಸಂಪೂರ್ಣ ತಿರಸ್ಕರಿಸುವುದು ಜಿಲ್ಲೆಯ ಪಾಲಿಗೆ ಅಪಾಯಕಾರಿ. ಗಾಡ್ಗೀಳ್ ವರದಿ ಪಕ್ಕಕ್ಕಿರಲಿ, ಕನಿಷ್ಠ ಕಸ್ತೂರಿ ರಂಗನ್ ವರದಿಯ ಅನುಷ್ಠಾನದ ಅಗತ್ಯವನ್ನಾದರೂ ಕೊಡಗಿನ ಜನರು ಮನಗಾಣಬೇಕಾಗಿದೆ. ಕೊಡಗಿನ ಜನರೂ ಅಭಿವೃದ್ಧಿಯನ್ನು ಕಾಣಬೇಕು ಮತ್ತು ಎಲ್ಲರಂತೆ ಬದುಕಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇದೇ ಸಂದರ್ಭದಲ್ಲಿ, ಮನುಷ್ಯರ ಅಗತ್ಯಕ್ಕಾಗಿಯೇ ಕೊಡಗಿನ ಹಸಿರು ಉಳಿಯಬೇಕಾಗಿದೆ. ಪರಿಸರದೊಂದಿಗೆ ಚೆಲ್ಲಾಟ ಅಂತಿಮವಾಗಿ ಮನುಷ್ಯರ ಬದುಕನ್ನೇ ಆಹುತಿ ತೆಗೆದುಕೊಳ್ಳಬಹುದು. ಈ ನಿಟ್ಟಿನಲ್ಲಿ ಅಭಿವೃದ್ಧಿ ಮತ್ತು ಪರಿಸರದ ನಡುವೆ ಒಂದು ಸಮನ್ವಯತೆಯನ್ನು ಕಂಡುಕೊಳ್ಳಬೇಕು. ಕೊಡಗಿನ ನೆಲ ಜಲದ ಕುರಿತಂತೆ ಕಾಳಜಿಯಿರುವವರೆಲ್ಲ ಕೊಡಗಿನವರೇ ಆಗಿದ್ದಾರೆ. ಇದೇ ಸಂದರ್ಭದಲ್ಲಿ, ಕೊಡಗನ್ನು ತಮ್ಮ ಸ್ವಾರ್ಥಕ್ಕಾಗಿ ಆಹುತಿ ತೆಗೆದುಕೊಳ್ಳುವವರು ಒಳಗಿದ್ದೂ ಕೊಡಗಿನ ಹಿತ ಶತ್ರುಗಳಾಗಿದ್ದಾರೆ. ಇಂತಹ ಜನರ ಕುರಿತಂತೆ ಕೊಡಗಿನ ಜನರು ಎಚ್ಚರಿಕೆಯನ್ನು ವಹಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News