ಅಗತ್ಯ ಬಿದ್ದರೆ ಸನಾತನ ಸಂಸ್ಥೆಯನ್ನು ನಿಷೇಧಿಸಿ: ಕೇಂದ್ರ ಸಚಿವ

Update: 2018-08-28 07:19 GMT

ಮುಂಬೈ, ಆ.28: ಅಗತ್ಯ ಬಿದ್ದರೆ ಬಲಪಂಥೀಯ ಸಂಘಟನೆಯಾದ ಸನಾತನ ಸಂಸ್ಥೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅಟಾವಳೆ ಆಗ್ರಹಿಸಿದ್ದಾರೆ.

ಸನಾತನ ಸಂಸ್ಥೆ ತನ್ನ ಹಿಂಸಾತ್ಮಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು. ಡಾ.ನರೇಂದ್ರ ದಾಬೋಲ್ಕರ್ ಹಾಗೂ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣಗಳಲ್ಲಿ ಇದು ಶಾಮೀಲಾಗಿದ್ದರೆ, ಅದರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಾಧ್ಯವಾದಷ್ಟು ಬೇಗ ತಪ್ಪಿತಸ್ಥರನ್ನು ಬಂಧಿಸಬೇಕು. ಅಗತ್ಯಬಿದ್ದರೆ ಸಂಸ್ಥೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಆಗ್ರಹಿಸಿದರು.

ದಾಬೋಳ್ಕರ್ ಹಾಗೂ ಗೌರಿ ಲಂಕೇಶ್ ಹತ್ಯೆಯಲ್ಲಿ ತನ್ನ ಪಾತ್ರ ಇಲ್ಲ ಎಂದು ಸನಾತನ ಸಂಸ್ಥೆ ಹೇಳಿಕೆ ನೀಡಿದ ಬೆನ್ನಲ್ಲೇ ಸಚಿವರ ಈ ಹೇಳಿಕೆ ವಿಶೇಷ ಮಹತ್ವ ಪಡೆದಿದೆ.

"ಇತ್ತೀಚೆಗೆ ಬಂಧಿತರಾದ ಒಂಬತ್ತು ಮಂದಿ ಸನಾತನ ಸಂಸ್ಥೆಗೆ ಸೇರಿದವರಲ್ಲ. ಈ ಹಂತದಲ್ಲಿ ಸಂಸ್ಥೆಯನ್ನು ಅನಗತ್ಯವಾಗಿ ದೂರಲಾಗುತ್ತಿದೆ. ಈ ಪೈಕಿ ಐದು ಮಂದಿಯ ಹೆಸರು ತಿಳಿದಿರುವುದೇ ಮಾಧ್ಯಮಗಳ ಮೂಲಕ. ಸನಾತನ ಸಂಸ್ಥೆಯ ಕಾರ್ಯಕರ್ತರು ಎಂದು ಹೇಳುತ್ತಿರುವುದು ಸರಿಯಲ್ಲ. ನಮ್ಮ ಸಂಘಟನೆಯ ಯಾರೂ ಇದರಲ್ಲಿ ಪಾಲ್ಗೊಂಡಿಲ್ಲ'' ಎಂದು ಸಂಸ್ಥೆಯ ವಕ್ತಾರ ಚೇತನ್ ರಾಜ್‌ಹನ್ಸ್ ಹೇಳಿದ್ದಾರೆ. ಸನಾತನ ಸಂಸ್ಥೆಗೆ ಭೇಟಿ ಕೊಟ್ಟ ಮಾತ್ರಕ್ಕೆ ಇವರು ಸಂಘಟನೆಯ ಕಾರ್ಯಕರ್ತರೆಂದು ಹೇಳುವುದು ಸರಿಯಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News