ಛತ್ತೀಸ್‌ಗಡ ಎನ್‌ಕೌಂಟರ್‌ನಲ್ಲಿ ಸತ್ತವರು ಆದಿವಾಸಿಗಳು, ಅವರಲ್ಲಿ ಮಕ್ಕಳೂ ಇದ್ದರು

Update: 2018-08-28 12:56 GMT

ಗೊಂಪಾಡ್,ಆ.28: ಛತ್ತೀಸ್‌ಗಡದ ದಕ್ಷಿಣ ಸುಕ್ಮಾದ ನಲ್ಕಾಟಂಗ್ ಗ್ರಾಮದಲ್ಲಿಯ ‘ನಕ್ಸಲರ ಶಿಬಿರ’ದ ಮೇಲೆ ಆ.6ರಂದು ಬೆಳಿಗ್ಗೆ ದಾಳಿ ನಡೆಸಿದ ಭದ್ರತಾ ಪಡೆಗಳು ಯದ್ವಾತದ್ವಾ ಗುಂಡುಗಳನ್ನು ಹಾರಿಸಿ 15 ‘ಮಾವೋವಾದಿ’ಗಳನ್ನು ಕೊಂದು ಹಾಕಿವೆ. ವಾಸ್ತವವನ್ನು ತಿಳಿಯಲು ವಿವಿಧ ಮಾನವ ಹಕ್ಕು ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಪತ್ರಕತರನ್ನೊಳಗೊಂಡ 16 ಜನರ ಸತ್ಯಶೋಧನಾ ತಂಡವೊಂದು ನಲ್ಕಾಟಂಗ್ ಮತ್ತು ಸಮೀಪದ ಗೊಂಪಾಡ್ ಗ್ರಾಮಗಳಿಗೆ ಭೇಟಿ ನೀಡಿದಾಗ ಎನ್‌ಕೌಂಟರ್ ಹಿಂದಿನ ಕರಾಳ ಸತ್ಯ ಬಯಲಾಗಿದೆ. ಅಪ್ರಾಪ್ತ ವಯಸ್ಕ ಬಾಲಕರು ಸೇರಿದಂತೆ ಹತ್ಯೆಯಾದ ಎಲ್ಲ 15 ಜನರೂ ನಕ್ಸಲರಾಗಿರಲಿಲ್ಲ,ಅಮಾಯಕ ಆದಿವಾಸಿಗಳಾಗಿದ್ದರು ಎಂದು ತಂಡವನ್ನು ಭೇಟಿಯಾದ ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ.

ತಂಡವು ಗ್ರಾಮಕ್ಕೆ ಭೇಟಿ ನೀಡುತ್ತಿದೆ ಎಂಬ ಸುಳಿವು ಪಡೆದಿದ್ದ ಭದ್ರತಾ ಪಡೆಗಳು ಎರಡು ದಿನಗಳ ಮೊದಲೇ ನಲ್ಕಾಟಂಗ್ ಗ್ರಾಮಸ್ಥರನ್ನು ಬಲವಂತದಿಂದ ಅವರ ಮನೆಗಳಿಂದ ಹೊರದಬ್ಬಿದ್ದವು ಮತ್ತು ಮೂರು ದಿನಗಳ ಕಾಲ ಗ್ರಾಮದಿಂದ ದೂರವಿರುವಂತೆ ಬೆದರಿಕೆಯನ್ನೊಡ್ಡಿದ್ದವು ಎಂದು ಆರೋಪಿಸಲಾಗಿದೆ.

ಆ.18ರಂದು ಸಂಜೆ ಸತ್ಯಶೋಧನಾ ತಂಡವು ಗೊಂಪಾಡ್ ಗ್ರಾಮವನ್ನು ತಲುಪಿದಾಗ ಎಲ್ಲಡೆ ಭೀತಿ ಮತ್ತು ನೀರವ ಮೌನ ಮಡುಗಟ್ಟಿತ್ತು. 19ರ ಬೆಳಿಗ್ಗೆ ತಂಡವನ್ನು ಭೇಟಿಯಾಗಲು ಸ್ಥಳೀಯ ಅಂಗನವಾಡಿ ಕೇಂದ್ರದಲ್ಲಿ ಸೇರುವಂತೆ ಎನ್‌ಕೌಂಟರ್ ಬಲಿಪಶುಗಳ ಕುಟುಂಬಿಕರು ಮತ್ತು ಎನ್‌ಕೌಂಟರ್‌ನಲ್ಲಿ ಬದುಕುಳಿದವರನ್ನು ಕೋರಲಾಗಿತ್ತು. ಮೊದಲಿಗೆ ಹಿಂಜರಿದಿದ್ದರಾದರೂ ಕ್ರಮೇಣ ಅವರೆಲ್ಲ ಒಬ್ಬೊಬ್ಬರಾಗಿ ಅಲ್ಲಿಗೆ ಬರತೊಡಗಿದ್ದರು ಮತ್ತು ಎನ್‌ಕೌಂಟರ್‌ನ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದರು.

ಗ್ರಾಮಸ್ಥರು ಹೇಳುವಂತೆ ಆ.4ರಂದು ಭದ್ರತಾ ಸಿಬ್ಬಂದಿಗಳ ದೊಡ್ಡ ದಂಡೇ ಗ್ರಾಮಕ್ಕೆ ಆಗಮಿಸಿತ್ತು. ಮಾಮೂಲಿನಂತೆ ಗ್ರಾಮದ ಸದೃಢ ಪುರುಷರೆಲ್ಲ ಮನೆಗಳನ್ನು ತೊರೆದು ತಮ್ಮ ಹೊಲಗಳಲ್ಲಿಯ ತಾತ್ಕಾಲಿಕ ಬಿಡಾರಗಳಲ್ಲಿ ಆಶ್ರಯ ಪಡೆದುಕೊಂಡಿದ್ದರು. ಕೆಲವರು ನುಲ್ಕಾಟಂಗ್‌ನಲ್ಲಿಯ ತಮ್ಮ ಸಂಬಂಧಿಕರ ಮನೆಗಳನ್ನು ಸೇರಿಕೊಂಡಿದ್ದರು. ರಾತ್ರಿ ಊಟದ ಬಳಿಕ ಅವರೆಲ್ಲ ಮಲಗಲು ಸಮೀಪದ ಹೊಲಗಳಲ್ಲಿಯ ಜೋಪಡಿಗಳನ್ನು ಸೇರಿಕೊಳ್ಳುತ್ತಿದ್ದರು. ಎನ್‌ಕೌಂಟರ್ ನಡೆದ ನತದೃಷ್ಟ ದಿನ ಗೊಂಪಾಡ್ ಮಾತ್ರವಲ್ಲ,ಸಮೀಪದ ವೆಲ್ಪೋಚಾ,ಎಟಿಗಟ್ಟಾ ಮತ್ತು ಕಿಂದ್ರೆಲಪಾಡ್ ಗ್ರಾಮಗಳ ಜನರೂ ಅಲ್ಲಿ ಆಶ್ರಯ ಪಡೆದಿದ್ದರು.

 ಆ.6ರಂದು ಬೆಳಿಗ್ಗೆ ಈ ಜೋಪಡಿಗಳನ್ನು ಸುತ್ತುವರಿದಿದ್ದ ಭದ್ರತಾ ಸಿಬ್ಬಂದಿಗಳು ನಿದ್ರೆಯಲ್ಲಿದ್ದ ಸುಮಾರು 30 ಆದಿವಾಸಿಗಳ ಮೆಲೆ ಗುಂಡಿನ ಮಳೆಗರೆದಿದ್ದರು. ಆರು ಅಪ್ರಾಪ್ತ ವಯಸ್ಕ ಬಾಲಕರು ಮತ್ತು ಹದಿಹರೆಯದ ಯುವಕರು ಸೇರಿದಂತೆ 15 ಜನರು ಸ್ಥಳದಲ್ಲಿಯೇ ಅಸು ನೀಗಿದ್ದರು. ಇತರರು ಗಂಭಿರವಾಗಿ ಗಾಯಗೊಂಡಿದ್ದರು. ಸತ್ತವರಲ್ಲಿ ಓರ್ವ ಪಂಚಾಯತ್ ಸದಸ್ಯನೂ ಸೇರಿದ್ದಾನೆ.

 ಭದ್ರತಾ ಸಿಬ್ಬಂದಿಗಳು ಗ್ರಾಮಕ್ಕೆ ಬಂದಾಗಲೆಲ್ಲ ತಮ್ಮನ್ನು ಮನೆಗಳಿಂದ ಹೊರದಬ್ಬಿ ತಾವು ವಾಸವಾಗಿರುತ್ತಾರೆ ಮತ್ತು ಮನೆಯಲ್ಲಿಯ ಆಹಾರ ಸಾಮಗ್ರಿಗಳೆಲ್ಲವನ್ನು ಖಾಲಿ ಮಾಡಿ ದಬ್ಬಾಳಿಕೆಯನ್ನು ಮೆರೆಯುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

ಬಹುತೇಕ ಆದಿವಾಸಿಗಳೇ ವಾಸವಿರುವ ಈ ಗ್ರಾಮಗಳಲ್ಲಿ ಶಾಲೆಗಳಿಲ್ಲ, ಪ್ರತಿಯೊಂದಕ್ಕೂ ಇಲ್ಲಿಯ ಜನರು ಅರಣ್ಯಗಳ ಮೂಲಕ 20 ಕಿ.ಮೀ.ದೂರದ ಕೊಂಟಾಕ್ಕೆ ನಡೆದುಕೊಂಡು ಹೋಗಬೇಕಿದೆ. ನಲ್ಕಾಟಂಗ್‌ನಲ್ಲಿ ಐದು ಕೊಳವೆ ಬಾವಿಗಳಿವೆಯಾದರೂ ಒಂದು ಮಾತ್ರ ಕಾರ್ಯಾಚರಿಸುತ್ತಿದೆ. ಅಂಗನವಾಡಿ ಕಾರ್ಯಕರ್ತೆ ವಾರಕ್ಕೊಮ್ಮೆ ಬಂದು,ಕೆಲವೊಮ್ಮೆ ಒಂದು ವಾರ ಕಾಲ ಉಳಿಯುತ್ತಾಳೆ. 2002-03ರಲ್ಲಿ ಶಾಲೆಯೊಂದು ಆರಂಭಗೊಂಡಿತ್ತಾದರೂ ಐದೇ ವರ್ಷಗಳಲ್ಲಿ ಅದು ಮುಚ್ಚಿತ್ತು.

ಈ ಅಮಾನವೀಯ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ತೆಲಂಗಾಣ ಸಿವಿಲ್ ಲಿಬರ್ಟಿಸ್ ಕಮಿಟಿಯ ನಾರಾಯಣ ರಾವ್ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದು,ಅದು ಆ.29ರಂದು ವಿಚಾರಣೆಗೆ ಬರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News