ವಿದ್ಯಾರ್ಥಿಗಳು ಕಲೆ, ವಿಜ್ಞಾನ ಕೋರ್ಸ್‌ಗಳತ್ತ ಆಸಕ್ತಿ ವಹಿಸಲಿ: ಬಸವರಾಜ ಹೊರಟ್ಟಿ

Update: 2018-08-28 13:02 GMT

ಬೆಂಗಳೂರು, ಆ.28: ವಿದ್ಯಾರ್ಥಿಗಳು ಕೇವಲ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಸೀಮಿತಗೊಳ್ಳದೆ, ಕಲೆ ಹಾಗೂ ವಿಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದ ಕೋರ್ಸ್‌ಗಳಿಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆಶಿಸಿದರು.

ಮಂಗಳವಾರ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ದಿ.ಎಚ್.ಕೆ.ಕೇಜ್ರಿವಾಲ್ ಸ್ಮರಣಾರ್ಥ ಆಯೋಜಿಸಿದ್ದ ಗಂಜೀಫಾ ಕಲಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲೆ ಹಾಗೂ ವಿಜ್ಞಾನ ಕ್ಷೇತ್ರಗಳು ದೇಶವನ್ನು ಸರ್ವತೋಮುಖವಾಗಿ ಅಭಿವೃದ್ಧಿ ಪಡಿಸುವಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತವೆ. ಈ ವಿಷಯಗಳ ಮಹತ್ವ ಕುರಿತು ಪೋಷಕರು ಹಾಗೂ ವಿದ್ಯಾರ್ಥಿಗಳು ಅರಿಯಬೇಕು ಎಂದು ತಿಳಿಸಿದರು.

ಚಿತ್ರಕಲೆ, ಸಂಗೀತ ಸೇರಿದಂತೆ ಯಾವುದೆ ಕಲಾ ಪ್ರಕಾರಗಳು ಸಮಾಜವನ್ನು ಮಾನವೀಯಗೊಳಿಸುತ್ತವೆ. ಕಲೆಗಳು ದೇಶದ ಹಾಗೂ ರಾಜ್ಯ ಸಂಸ್ಕೃತಿಯ ಪ್ರತೀಕವಾಗಿವೆ. ಹಾಗೆಯೆ ದೇಶದ ಪ್ರಗತಿಗೆ ವಿಜ್ಞಾನ ಬೆಳಗಣಿಗೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಕುಟುಂಬದಲ್ಲೂ ಒಬ್ಬರನ್ನು ವಿಜ್ಞಾನ ಕ್ಷೇತ್ರದಲ್ಲಿ ತೊಡಗುವಂತೆ ಪ್ರೇರೇಪಿಸಬೇಕಾಗಿದೆ ಎಂದು ಅವರು ಹೇಳಿದರು.

ಸಮಾಜಕ್ಕಾಗಿ ಶ್ರಮಿಸಿದವರು, ಅವರ ಜೀವನಾದರ್ಶಗಳಿಂದ ಮರಣದ ನಂತರವು ಜೀವಂತವಾಗಿರುತ್ತಾರೆ. ಅಂತಹ ಸಾಲಿನಲ್ಲಿ ನಿಲ್ಲುವವರು ಕರ್ನಾಟಕ ಚಿತ್ರಕಲಾ ಪರಿಷತ್ತನ್ನು ಕಟ್ಟಿ ಬೆಳೆಸಿದ ಆರ್ಯಮೂರ್ತಿ ಹಾಗೂ ಎಚ್.ಕೆ.ಕೇಜ್ರಿವಾಲ್. ಇಂತಹ ಮಹಾನ್ ಸಾಧಕರಿಂದ ಯುವ ಸಮುದಾಯ ಪ್ರೇರಣೆ ಪಡೆಯಬೇಕು ಎಂದು ಅವರು ಹೇಳಿದರು.

ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, ಕರ್ನಾಟಕ ಚಿತ್ರಕಲಾ ಪರಿಷತ್ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದೆ. ವಿದೇಶಿ ಕಲಾವಿದರು ಇಲ್ಲಿ ನಡೆಯುವ ಶಿಬಿರದಲ್ಲಿ ಭಾಗವಹಿಸಿ, ಚಿತ್ರಕಲಾ ಪರಿಷತ್‌ನ ಮಹತ್ವವನ್ನು ತಮ್ಮ ದೇಶಗಳಲ್ಲಿ ಪ್ರಸರಿಸಿದ್ದಾರೆ ಎಂದು ತಿಳಿಸಿದರು.

ಸಂಜೆ ಕಾಲೇಜು ದೇಶದಲ್ಲೆ ಪ್ರಥಮ: ಕರ್ನಾಟಕ ಚಿತ್ರಕಲಾ ಪರಿಷತ್ ವಿನೂತನ ಯೋಜನೆಗಳನ್ನು ಹಾಕಿಕೊಳ್ಳುವಲ್ಲಿ ಹೆಸರುವಾಸಿಯಾಗಿದೆ. ಈಗ ದೇಶದಲ್ಲೆ ಮೊದಲ ಬಾರಿಗೆ ಸಂಜೆ ಕಾಲೇಜು ಆರಂಭಿಸಿದ್ದು, ಚಿತ್ರಕಲೆ ಕೋರ್ಸ್‌ನ್ನು ಅಭ್ಯಾಸ ಮಾಡುವವರಿಗೆ ಹೆಚ್ಚಿನ ಅವಕಾಶ ಮಾಡಿಕೊಟ್ಟಿದೆ. ಇದನ್ನು ರಾಜ್ಯದ ಜನತೆ ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿದರು.

ರಾಜಾಜಿನಗರದಲ್ಲಿ 14 ಎಕರೆ ಜಾಗದಲ್ಲಿ ಚಿತ್ರಕಲಾ ಪರಿಷತ್‌ನ ಹೊಸ ಕಟ್ಟಡವು ನಿರ್ಮಾಣವಾಗುತ್ತಿದ್ದು, ಮೊದಲ ಹಂತದ ಕ್ಯಾಂಪಸ್ ಮುಂದಿನ ಅಕ್ಟೋಬರ್‌ನಲ್ಲಿ ಉದ್ಘಾಟನೆಯಾಗಲಿದೆ. ಈ ಕ್ಯಾಂಪಸ್‌ನಲ್ಲಿ ಸುಸಜ್ಜಿತವಾದ ಸಭಾಂಗಣ, ಕಲಾಕೃತಿಗಳಿಗೆ ಸಂಬಂಧಿಸಿದ ಮ್ಯೂಸಿಯಂ, ಕಲಾಕೃತಿಗಳ ಪ್ರದರ್ಶನಕ್ಕೆ ಅಗತ್ಯವಾದ ಸ್ಥಳಾವಕಾಶ ಸೇರಿದಂತೆ ಅಂತರ್‌ರಾಷ್ಟ್ರೀಯ ಗುಣಮಟ್ಟದಲ್ಲಿ ಚಿತ್ರಕಲಾ ಪರಿಷತ್‌ನ ಕ್ಯಾಂಪಸ್‌ನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದರು.

ಕರ್ನಾಟಕ ಚಿತ್ರಕಲಾ ಪರಿಷತ್ತನ್ನು ಕಟ್ಟಿ ಬೆಳೆಸಿದ ಪರಿಷತ್‌ನ ಸ್ಥಾಪಕ ಅಧ್ಯಕ್ಷ ಆರ್ಯ ಮೂರ್ತಿ, ಪರಿಷತ್‌ನ ಬೆಳವಣಿಗೆಗೆ ಅವಿರತ ಶ್ರಮಿಸಿದ ಎಚ್.ಕೆ.ಕೇಜ್ರಿವಾಲ್ ಹಾಗೂ ಪರಿಷತ್‌ನ ಕಟ್ಟಡ ನಿರ್ಮಾಣಕ್ಕೆ 3ಎಕರೆ ಜಾಗ ನೀಡಿದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಹೆಸರಿನಲ್ಲಿ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಮುಂದಿನ ಜನವರಿಯಲ್ಲಿ ನಡೆಯುವ ಚಿತ್ರಸಂತೆಯಲ್ಲಿ ಮೂರು ಮಂದಿ ಕಲಾವಿದರನ್ನು ಆಯ್ಕೆ ಮಾಡಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

-ಬಿ.ಎಲ್.ಶಂಕರ್, ಅಧ್ಯಕ್ಷ ಕರ್ನಾಟಕ ಚಿತ್ರಕಲಾ ಪರಿಷತ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News