ಚಿತ್ರಕಲೆ, ಯಕ್ಷಗಾನದ ನಡುವೆ ಅವಿನಾಭಾವ ಸಂಬಂಧವಿದೆ: ಪ್ರೊ.ಎಂ.ಎಂ.ಹೆಗಡೆ

Update: 2018-08-28 13:03 GMT

ಬೆಂಗಳೂರು, ಆ.28: ಎಲ್ಲ ಕಲೆಗಳ ಮೂಲ ಚಿತ್ರಕಲೆಯಾಗಿದ್ದು, ಯಕ್ಷಗಾನ ಹಾಗೂ ಚಿತ್ರಕಲೆ ನಡುವೆ ಅವಿನಾಭಾವ ಸಂಬಂಧವಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎಂ. ಹೆಗಡೆ ಅಭಿಪ್ರಾಯಿಸಿದರು.

ಮಂಗಳವಾರ ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ಕನ್ನಡ ಭವನದ ಆರ್ಟ್ ಗ್ಯಾಲರಿಯಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ ತಿಂಗಳ ಚಿತ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅತ್ಯಂತ ಪುರಾತನವಾದ ಕಲೆ ಚಿತ್ರಕಲೆಯಾಗಿದೆ. ಮನುಷ್ಯನ ಹುಟ್ಟಿನೊಂದಿಗೆ ಈ ಕಲೆಯೂ ಹುಟ್ಟಿದೆ ಎಂದರೆ ತಪ್ಪಾಗಲಾರದು ಎಂದು ಅಭಿಪ್ರಾಯಿಸಿದರು.

ಯಕ್ಷಗಾನದವರಿಗೆ ಚಿತ್ರಕಲೆಯ ಅಗತ್ಯವಿದೆ. ಚಿತ್ರಕಲಾವಿದರಿಗೂ ಯಕ್ಷಗಾನ ಕಲೆ ಬೇಕು. ಇವೆರಡು ಒಂದಕ್ಕೊಂದು ಪೂರಕವಾಗಿರುವಂತಹದು. ಯಕ್ಷಗಾನ ಹಾಗೂ ಚಿತ್ರಕಲೆಗಳ ಅವಿನಾಭಾವ ಸಂಬಂಧದ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ ಎಂದು ಅವರು ತಿಳಿಸಿದರು.

ಪದಗಳಲ್ಲಿ ವಿವರಿಸಲಾರದ ಭಾವಗಳು ಚಿತ್ರಕಲೆಯಿಂದ ಹೊರಗೆಡಬಹುದು. ಮಾತಿನ ಮೂಲಕ ಅಭಿವ್ಯಕ್ತಗೊಳಿಸಲಾಗದ ಮನದ ಅಂತರಾಳವನ್ನು ಚಿತ್ರಕಲೆಯ ಮೂಲಕ ಜಗತ್ತಿಗೆ ತಿಳಿಸಬಹುದು. ಕಲಾವಿದರಿಗೆ ಚಿತ್ರಕಲೆಯ ಕುರಿತು ವಿಶೇಷ ಒಲವಿರುವುದರೊಂದಿಗೆ ಸೃಜನಶೀಲತೆ ಅಗತ್ಯವಾಗಿ ಇರಬೇಕು ಎಂದು ಅವರು ಹೇಳಿದರು.

ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷೆ ಪ್ರೊ.ಎಂ.ಜೆ.ಕಮಲಾಕ್ಷಿ ಮಾತನಾಡಿ, ಚಿತ್ರಕಲೆ ಸಂಬಂಧಿಸಿದಸ ಕೋರ್ಸ್‌ಗಳನ್ನು ಮುಗಿಸಿ ನೂರಾರು ಮಂದಿ ಹೊರಬರುತ್ತಿದ್ದಾರೆ. ಅವರಿಗೆ ಸೂಕ್ತ ಅವಕಾಶಗಳನ್ನು ಒದಗಿಸಿಕೊಡಬೇಕು. ಯುವ ಕಲಾವಿದರು ಮುಂದೆ ಬರುವಂತಹ ಅವಕಾಶಗಳನ್ನು ಹಿರಿಯ ಕಲಾವಿದರು ನಿರ್ಮಿಸಬೇಕು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ರಿಜಿಸ್ಟ್ರಾರ್ ಎಚ್.ವಿ.ಇಂದ್ರಮ್ಮ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News