ಮೋದಿ ಸರಕಾರಕ್ಕೆ ಪಾಠ ಕಲಿಸುತ್ತೇವೆ: ಎಂ.ಕೆ. ಸ್ಟಾಲಿನ್

Update: 2018-08-28 14:42 GMT

ಚೆನ್ನೈ, ಆ.28: ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಮಂಗಳವಾರದಂದು ಪಕ್ಷದ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದು ಈ ವೇಳೆ ಪಕ್ಷದ ಕಾರ್ಯರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲದಕ್ಕೂ ಧಾರ್ಮಿಕ ಬಣ್ಣವನ್ನು ಬಳಿಯುವವರ ವಿರುದ್ಧ ಹೋರಾಡುವುದೇ ನನ್ನ ಕನಸಾಗಿದೆ. ನರೇಂದ್ರ ಮೋದಿ ಸರಕಾರಕ್ಕೆ ನಾವು ಪಾಠ ಕಲಿಸಲಿದ್ದೇವೆ ಎಂದು ಗುಡುಗಿದ್ದಾರೆ.

ತಂದೆ ಕರುಣಾನಿಧಿಯ ನಿಧನದ ಮೂರು ವಾರಗಳ ನಂತರ ಪಕ್ಷದ ಮುಖ್ಯಸ್ಥನಾಗಿ ಆಯ್ಕೆಯಾದ ಸ್ಟಾಲಿನ್, ತಮಿಳು ನಾಡಿನಲ್ಲಿ ಅಧಿಕಾರದಲ್ಲಿರುವ ಭ್ರಷ್ಟ ಸರಕಾರವನ್ನು ಎಸೆಯುವಂತೆ ಕಾರ್ಯಕರ್ತರಿಗೆ ತಿಳಿಸಿದ್ದಾರೆ.

ನಾನೆಂದೂ ಪಕ್ಷದ ನೇತೃತ್ವ ವಹಿಸುತ್ತೇನೆ ಎಂದು ಯೋಚಿಸಿರಲಿಲ್ಲ. ಇದೊಂದು ಬಹಳ ದೊಡ್ಡ ಜವಾಬ್ದಾರಿ. ನಾನು ಮುನ್ನಡೆಸುತ್ತೇನೆ ಎಂದು ನಾನು ಹೇಳುವುದಿಲ್ಲ. ನಾವೆಲ್ಲ ಜೊತೆಯಾಗಿ ಆ ಕೆಲಸ ಮಾಡೋಣ. ಎಲ್ಲರ ಜೊತೆಗೆ ನಮ್ಮನ್ನೂ ಪ್ರಶ್ನಿಸುವ ಗುಣ ಬೆಳೆಸುವ ಎಂದು ಸ್ಟಾಲಿನ್ ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ಎಐಎಡಿಎಂಕೆ ಮತ್ತು ಡಿಎಂಕೆ ಆವರ್ತನದಂತೆ ಅಧಿಕಾರ ಅನುಭವಿಸುತ್ತಲೇ ಬಂದಿದೆ. ಆದರೆ ಇದೀಗ ಡಿಎಂಕೆ ಮತ್ತು ಸ್ಟಾಲಿನ್ ರಾಷ್ಟ್ರ ರಾಜಕೀಯದತ್ತ ದೃಷ್ಟಿ ನೆಟ್ಟಿದ್ದು ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ವಿರೋಧ ಪಕ್ಷಗಳು ರೂಪಿಸಿರುವ ಮೈತ್ರಿಕೂಟದ ಜೊತೆ ಕೈಜೋಡಿಸಿದ್ದಾರೆ. ಸ್ಟಾಲಿನ್ ಡಿಎಂಕೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ರಾಹುಲ್ ಗಾಂದಿ, ಮಮತಾ ಬ್ಯಾನರ್ಜಿ ಮುಂತಾದ ರಾಜಕೀಯ ಗಣ್ಯರು ಈ ಸಂದರ್ಭದಲ್ಲಿ ಸ್ಟಾಲಿನ್ ಶುಭಾಶಯ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News