ಅವರು ಗಾಂಧೀಜಿಯನ್ನೂ ಬಂಧಿಸುತ್ತಿದ್ದರು: ರಾಮಚಂದ್ರ ಗುಹಾ

Update: 2018-08-28 15:21 GMT

ಹೊಸದಿಲ್ಲಿ, ಆ.28: ದೇಶಾದ್ಯಂತ ಮಾನವಹಕ್ಕು ಹೋರಾಟಗಾರರ ಮೇಲಿನ ದಾಳಿಯನ್ನು ಖಂಡಿಸಿರುವ ಪ್ರಸಿದ್ಧ ಲೇಖಕ ಇತಿಹಾಸಕಾರ ರಾಮಚಂದ್ರ ಗುಹಾ ಇದು “ಕ್ರೂರ, ಸರ್ವಾಧಿಕಾರಿ, ದಬ್ಬಾಳಿಕೆಯ, ಅನಿಯಂತ್ರಿತ ಹಾಗು ಅಕ್ರಮ ಕ್ರಮ” ಎಂದಿದ್ದಾರೆ.

ಖಾಸಗಿ ಸುದ್ದಿವಾಹಿನಿ ಎನ್ ಡಿಟಿವಿ ಜೊತೆ ಮಾತನಾಡಿದ ಗುಹಾ, ಆಡಳಿತದ ಸರಕಾರದ ಕಾರ್ಪೊರೇಟ್ ಆಪ್ತರನ್ನು ದೂರಿದರು. “ಬುಡಕಟ್ಟುಗಳ ಜಾಗವನ್ನು ಕಬಳಿಸಲು, ಕಾಡು ಹಾಗು ಖನಿಜ ಸಂಪನ್ಮೂಲಗಳನ್ನು ದೋಚಲು ಇವರು ಮುಂದಾಗಿದ್ದಾರೆ. ಹೋರಾಟಗಾರರ ಬಂಧನವು ಬುಡಕಟ್ಟುಗಳಿಗೆ ಪ್ರತಿನಿಧಿಗಳು ಇಲ್ಲದಂತೆ ಮಾಡುವುದು ಹೊರತು ಇನ್ನೇನಲ್ಲ” ಎಂದವರು ಹೇಳಿದರು.

ಬಂಧನಕ್ಕೊಳಗಾದವರಲ್ಲಿ ಕೆಲವರ ಪರಿಚಯ ತನಗಿದೆ ಎಂದ ಗುಹಾ ಎಲ್ಲಾ ವಿಷಯದಲ್ಲೂ ತಾನು ಅವರೊಂದಿಗೆ ಸಹಮತ ಹೊಂದಿರಲಿಲ್ಲ ಎಂದರು. “ಹಿಂಸೆಯ ಬಗ್ಗೆ ಅವರು ಪ್ರಚೋದನೆಯೂ ನೀಡಿರಲಿಲ್ಲ. ಹಿಂಸೆಯಲ್ಲಿ ತೊಡಗಿರಲಿಲ್ಲ” ಎಂದರು.

“ಆದಿವಾಸಿ ನೆಲವಾದ ಭಾರತದಲ್ಲಿ ಏನು ನಡೆಯುತ್ತಿದೆ?. ಕೊಲೆ, ಅತ್ಯಾ ಚಾರ, ಇವರು ಬುಡಕಟ್ಟು ಜನರನ್ನು ಪ್ರತಿನಿಧಿಸುತ್ತಿದ್ದ ವಕೀಲರು. ಇವರ ಬಂಧನವು ಆದಿವಾಸಿಗಳನ್ನು ಕೋರ್ಟ್ ನಲ್ಲಿ ಪ್ರತಿನಿಧಿಸುವವರಿಲ್ಲದಂತೆ ಮಾಡುತ್ತದೆ” ಎಂದು ಗುಹಾ ಹೇಳಿದ್ದಾರೆ.

“ಇಂದು ಮಹಾತ್ಮಾ ಗಾಂಧಿ ಬದುಕಿದ್ದರೆ, ಸುಧಾ ಭಾರದ್ವಾಜ್ ರನ್ನು ಅವರು ನ್ಯಾಯಾಲಯದಲ್ಲಿ ಬೆಂಬಲಿಸುತ್ತಿದ್ದರು ಎಂದು ನಾನು ಗಾಂಧೀಜಿಯ ಆತ್ಮಚರಿತ್ರೆಕಾರನಾಗಿ ಹೇಳಬಲ್ಲೆ. ಆದರೆ ಮೋದಿ ಸರಕಾರ ಅವರನ್ನೂ ವಶಕ್ಕೆ ಪಡೆದು ಬಂಧಿಸುತ್ತಿರಲಿಲ್ಲವೇ ಎಂದು ಊಹಿಸುತ್ತಿದ್ದೆ” ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News