ಮತದಾನಕ್ಕೆ ಒಂದೇ ಪೆನ್ ಬಳಸುವ ನಿಯಮಗಳಿಗೆ ತಿದ್ದುಪಡಿ ಕೋರಿದ್ದ ಅರ್ಜಿ ಹೈಕೋರ್ಟ್‌ನಲ್ಲಿ ವಜಾ

Update: 2018-08-28 15:32 GMT

ಹೊಸದಿಲ್ಲಿ,ಆ.28: ಮತದಾನದ ವೇಳೆ ಮತಪತ್ರದಲ್ಲಿ ಗುರುತು ಮಾಡಲು ಚುನಾವಣಾ ಆಯೋಗವು ನೀಡಿದ ಪೆನ್ ಮಾತ್ರ ಬಳಸಬೇಕು ಎಂಬ ಚುನಾವಣಾ ನಿಯಮಗಳನ್ನು ಪ್ರಶ್ನಿಸಿದ್ದ ಅರ್ಜಿಯೊಂದನ್ನು ದಿಲ್ಲಿ ಉಚ್ಚ ನ್ಯಾಯಾಲಯವು ಮಂಗಳವಾರ ವಜಾಗೊಳಿಸಿದೆ.

ಈ ನಿಯಮವು ಸಕಾರಣವಾಗಿರುವಂತಿದೆ ಮತ್ತು ತಿದ್ದುಪಡಿಯ ಅಗತ್ಯವಿಲ್ಲ ಎಂದು ನ್ಯಾಯಾಲಯವು ಹೇಳಿತು.

ಚುನಾವಣಾ ಆಯೋಗವು ನೀಡುವ ಪೆನ್ನನ್ನು ಸುಲಭವಾಗಿ ಬದಲಿಸಬಹುದಾಗಿದೆ ಎಂದು ತನ್ನ ಅರ್ಜಿಯಲ್ಲಿ ಹೇಳಿದ್ದ ನ್ಯಾಯವಾದಿ ಅಮಿತ್ ಸಾಹ್ನಿ ಅವರು,ಈ ನಿಯಮಗಳನ್ನು ದುರುಪಯೋಗ ಮಾಡಿಕೊಳ್ಳಬಹುದಾಗಿದೆ ಮತ್ತು ಇದನ್ನು ತಿದ್ದುಪಡಿಗೊಳಿಸಬೇಕು ಎಂದು ವಾದಿಸಿದ್ದರು.

ಮತವನ್ನು ಚಲಾಯಿಸುವ ವ್ಯಕ್ತಿಯ ಉದ್ದೇಶಕ್ಕೆ ಮಹತ್ವ ನೀಡಬೇಕೇ ಹೊರತು ಯಾವುದೇ ಅಭ್ಯರ್ಥಿಯ ಒತ್ತಾಸೆಯ ಮೇಲೆ ಬದಲಿಸಬಹುದಾದ ಪೆನ್ನಿಗಲ್ಲ ಎಂದೂ ಅವರು ಪ್ರತಿಪಾದಿಸಿದ್ದರು.

ನಿಯಮದ ದುರುಪಯೋಗದ ನಿದರ್ಶನವೊಂದನ್ನು ಉಲ್ಲೇಖಿಸಿದ್ದ ಸಾಹ್ನಿ,2016ರಲ್ಲಿ ಹರ್ಯಾಣದಲ್ಲಿ ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗವು ನೀಡಿದ್ದ ಪೆನ್ನನ್ನು ಬದಲಿಸಲಾಗಿತ್ತು ಮತ್ತು ಇದು ತೀರ್ಪಿನ ಬದಲಾವಣೆಗೆ ಕಾರಣವಾಗಿತ್ತು ಎಂದು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News