ಪರ್ಯಾಯ ಭೂಮಿಯನ್ನು ಸೆ.19ರೊಳಗೆ ಮಂಜೂರು ಮಾಡಲು ಹೈಕೋರ್ಟ್ ಆದೇಶ

Update: 2018-08-28 16:57 GMT

ಬೆಂಗಳೂರು, ಆ.28: ರುದ್ರಭೂಮಿ ಅಭಿವೃದ್ಧಿಗೆ ಸ್ವಾಧೀನಪಡಿಸಿಕೊಂಡ ಬೆಂಗಳೂರು ಉತ್ತರ ತಾಲೂಕಿನ ಸಿಂಗಾಪುರ ಗ್ರಾಮದ ನಿವಾಸಿ ಯೋಗೇಶ್ವರ್‌ಗೆ ಸೇರಿದ್ದ 24 ಗುಂಟೆ ಜಾಗಕ್ಕೆ ಪರ್ಯಾಯ ಭೂಮಿಯನ್ನು ಸೆ.19ರೊಳಗೆ ಮಂಜೂರು ಮಾಡಬೇಕು. ತಪ್ಪಿದರೆ ಸರಕಾರದ ಮುಖ್ಯಕಾರ್ಯದರ್ಶಿ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ಹೈಕೋರ್ಟ್ ತಾಕೀತು ಮಾಡಿದೆ.

ಹೈಕೋರ್ಟ್ ಆದೇಶದ ಹೊರತಾಗಿಯೂ ಪರ್ಯಾಯ ಜಮೀನು ನೀಡಲು ಸರಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಯೋಗೇಶ್ವರ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಘವೇಂದ್ರ ಚೌವ್ಹಾಣ್ ಮತ್ತು ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ, ಪರ್ಯಾಯ ಜಮೀನು ಮಂಜೂರು ಮಾಡದ ಸರಕಾರದ ಧೋರಣೆಯನ್ನು ತರಾಟೆಗೆ ತೆಗೆದುಕೊಂಡು ಈ ನಿರ್ದೇಶನ ನೀಡಿದೆ.

ಇದಕ್ಕೂ ಮುನ್ನ ಅರ್ಜಿದಾರ ಪರ ವಕೀಲರು ವಾದ ಮಂಡಿಸಿ, ಪರ್ಯಾಯ ಜಮೀನು ಮಂಜೂರಾತಿ ಪ್ರಕ್ರಿಯೆ ಒಂದು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಸರಕಾರಕ್ಕೆ ಹೈಕೋರ್ಟ್ ಜುಲೈ 24ರಂದು ನಿರ್ದೇಶಿಸಿತ್ತು. ಆದರೆ ಯೋಗೇಶ್ವರ್‌ಗೆ ಈವರೆಗೂ ಜಮೀನು ಮಂಜೂರು ಮಾಡಿಲ್ಲ ಎಂದು ದೂರಿದರು.

ಇದರಿಂದ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಪೀಠ, ಅರ್ಜಿದಾರರಿಗೆ ಪರ್ಯಾಯ ಜಮೀನು ಮಂಜೂರು ಮಾಡಲು ಒಂದು ತಿಂಗಳಲ್ಲಿ ಸಚಿವ ಸಂಪುಟದ ಅನುಮೋದನೆ ಪಡೆಯುವುದಾಗಿ ಸರಕಾರ ಕಳೆದ ಜುಲೈ 24ರಂದು ಕೋರ್ಟ್‌ಗೆ ಭರವಸೆ ನೀಡಿತ್ತು. ಆದರೆ, ಇನ್ನೂ ಸಚಿವ ಸಂಪುಟದ ಅನುಮೋದನೆ ಪಡೆದುಕೊಳ್ಳದಿರುವುದು ನ್ಯಾಯಸಮ್ಮತವಾಗಿಲ್ಲ ಎಂದು ಟೀಕಿಸಿತು.

ಅಲ್ಲದೆ, ಸರಕಾರಿ ಪ್ರಾಧಿಕಾರಿಗಳು ಸಾಮಾನ್ಯ ಜನರ ಜಮೀನನ್ನು ಅಕ್ರಮವಾಗಿ ವಶಪಡಿಸಿಕೊಳ್ಳುತ್ತವೆ. ಪರ್ಯಾಯ ಜಮೀನು ನೀಡದೆ ಸತಾಯಿಸಲಾಗುತ್ತದೆ. ಜಮೀನು ವಶಪಡಿಸಿಕೊಳ್ಳುವಾಗ ತೋರುವ ಆಸಕ್ತಿ ಪರ್ಯಾಯ ಜಮೀನು ಮಂಜೂರು ಮಾಡಲು ತೋರುವುದಿಲ್ಲ. ಇಂತಹ ಧೋರಣೆಗಳಿಂದ ಜನ ಹೈಕೋರ್ಟ್‌ಗೆ ಬರಬೇಕಾಗುತ್ತದೆ. ಹೈಕೋರ್ಟ್ ಆದೇಶ ನೀಡಿದರೂ ಪಾಲಿಸುವುದಿಲ್ಲ. ಕೋರ್ಟ್ ಆದೇಶಗಳಿಗೂ ಬೆಲೆ ಕೊಡುವುದಿಲ್ಲ. ಈ ವೈಖರಿಯನ್ನು ಕೋರ್ಟ್ ಸಹಿಸುವುದಿಲ್ಲ ಎಂದು ನ್ಯಾಯಪೀಠ ಕಿಡಿಕಾರಿತು.

ಅಂತಿಮವಾಗಿ ಅರ್ಜಿಯ ಮುಂದಿನ ವಿಚಾರಣೆಯೊಳಗೆ ಅರ್ಜಿದಾರರಿಗೆ ಪರ್ಯಾಯ ಜಮೀನು ಮಂಜೂರು ಮಾಡಬೇಕು. ತಪ್ಪಿದರೆ ಸರಕಾರದ ಮುಖ್ಯ ಕಾರ್ಯದರ್ಶಿಯು ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ತಾಕೀತು ಮಾಡಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಸೆ.19ಕ್ಕೆ ಮುಂದೂಡಿತು.

ಪ್ರಕರಣವೇನು: ಬೆಂಗಳೂರು ಉತ್ತರ ತಾಲೂಕಿನ ಸಿಂಗಾಪುರ ಗ್ರಾಮದಲ್ಲಿ ತಮಗೆ ಸೇರಿದ್ದ 24 ಗುಂಟೆ ಜಾಗವನ್ನು ಸ್ಮಶಾನ ಭೂಮಿ ವಿಸ್ತರಣೆಗೆಂದು ನಗರ ಜಿಲ್ಲಾಡಳಿತವು ಯಾವುದೇ ಆದೇಶ ಹೊರಡಿಸದೆ ವಶಪಡಿಸಿಕೊಂಡಿದೆ. ಹೀಗಾಗಿ, ಪರ್ಯಾಯ ಜಮೀನು ಕಲ್ಪಿಸುವಂತೆ ಹೈಕೋರ್ಟ್ ಆದೇಶಿಸಿ ಒಂದು ವರ್ಷ ಕಳೆದರೂ ಜಮೀನು ನೀಡಿಲ್ಲ ಎಂದು ಯೋಗೇಶ್ವರ್ ಅರ್ಜಿಯಲ್ಲಿ ದೂರಿದ್ದರು. ಅರ್ಜಿಯನ್ನು ಈ ಹಿಂದೆ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಯೋಗೇಶ್ವರ್‌ಗೆ ನೀಡಲು ಪರ್ಯಾಯ ಜಮೀನು ಗುರುತಿಸುವಂತೆ ನಗರ ಜಿಲ್ಲಾಧಿಕಾರಿಗೆ ನಿರ್ದೇಶಿಸಿತ್ತು. ಆದರೂ ಜಮೀನು ನೀಡದ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News