ಮಾಸಿಕ ಪಿಂಚಣಿ ಯೋಜನೆ ರದ್ಧತಿಗೆ ಆಗ್ರಹಿಸಿ ಧರಣಿ

Update: 2018-08-28 17:33 GMT

ಬೆಂಗಳೂರು, ಆ.28: ಅಸಂಘಟಿತ ವಲಯಕ್ಕೆ ಸಾಮಾಜಿಕ ಭದ್ರತೆ ನೀಡದ ಮಾಸಿಕ ಪಿಂಚಣಿ ಯೋಜನೆ ರದ್ದುಗೊಳಿಸಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪಿಂಚಣಿ ಪರಿಷತ್ ವತಿಯಿಂದ ನಗರದ ಮೌರ್ಯ ವೃತ್ತದ ಬಳಿ ಧರಣಿ ನಡೆಸಲಾಯಿತು.

ಅನಂತರ ಇಲ್ಲಿನ ಸ್ವಾತಂತ್ರ ಉದ್ಯಾನವನದವರೆಗೂ ಬೃಹತ್ ಮೆರವಣಿಗೆ ನಡೆಸಿ ಸರಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಅಸಂಘಟಿತ ವಲಯದಲ್ಲಿರುವ ಎಲ್ಲರ ಸಾಮಾಜಿಕ ಭದ್ರತೆ ಮತ್ತು ಘನತೆಯ ಬದುಕಿನ ರಕ್ಷಣೆಗೆ ಬೇಕಾದಷ್ಟು ಮೊತ್ತದ ಮಾಸಿಕ ಪಿಂಚಣಿ ಯೋಜನೆಯನ್ನು ಸರಕಾರವು ಜಾರಿಗೊಳಿಸಬೇಕು ಹಾಗೂ ಮನಸ್ವಿನಿ ಮತ್ತು ಮೈತ್ರಿ ಎರಡು ಪಿಂಚಣಿ ಯೋಜನೆಗಳನ್ನು ಜಾರಿ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ದೇಶದಲ್ಲಿ ಶೇ.84 ರಷ್ಟು ಜನರು ಅಸಂಘಟಿತ ವಲಯದಲ್ಲಿ ಶ್ರಮಿಸುತ್ತಿದ್ದಾರೆ. ಆದರೆ, ಅವರಿಗೆ ಯಾವುದೇ ಭದ್ರತೆ ಸಿಗುತ್ತಿಲ್ಲ. ಪಿಂಚಣಿ, ಇಎಸ್‌ಐ ಸೇರಿದಂತೆ ಹಲವು ಸೌಲಭ್ಯಗಳಿಂದಲೂ ಅವರು ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಸಾಮಾಜಿಕ ಭದ್ರತೆಯ ಭಾಗವಾದ ಪಿಂಚಣಿ ಸೌಲಭ್ಯವನ್ನು ಸಾರ್ವತ್ರಿಕರಣಗೊಳಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಮುಖಂಡ ಪ್ರಭಾನಂದ ಹೆಗಡೆ, ಪಿಂಚಣಿ ಮೊತ್ತವು ಕಾರ್ಮಿಕರ ವೇತನದ ಅರ್ಧದಷ್ಟಿರಬೇಕು ಅಥವಾ ಕನಿಷ್ಠ ಎರಡು ಸಾವಿರ ರೂಪಾಯಿಯಾಗಿರಬೇಕು. 50 ವರ್ಷ ತುಂಬಿದ ಎಲ್ಲ ಮಹಿಳೆಯರು ಮತ್ತು 55 ವರ್ಷ ತುಂಬಿದ ಎಲ್ಲ ಪುರುಷರಿಗೂ ಪಿಂಚಣಿ ಕಡ್ಡಾಯವಾಗಿ ದೊರೆಯಬೇಕು. ಅಲ್ಲದೆ, ಪಿಂಚಣಿಯನ್ನು ಪಡೆಯಲು ಏಕಗವಾಕ್ಷಿ ವ್ಯವಸ್ಥೆಯನ್ನು ಮಾಡಬೇಕು ಎಂದು ಹೇಳಿದರು.

ಆದಾಯ ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ, ಉಳಿದ ಎಲ್ಲರಿಗೂ ಸರಕಾರದಿಂದಲೇ ನಿಗದಿಪಡಿಸಿದ ಕನಿಷ್ಠ ವೇತನದ ಅರ್ಧದಷ್ಟು ಭಾಗ ಪಿಂಚಣಿ ಮೊತ್ತಗಾಗಿ ನೀಡಬೇಕು. ಜೊತೆಗೆ 2002ರ ಸುಪ್ರೀಂ ಕೋರ್ಟ್ ಆದೇಶದಂತೆ ಪ್ರತಿ ತಿಂಗಳ 7ನೇ ತಾರೀಖು ಪಿಂಚಣಿ ದೊರೆಯುವ ವ್ಯವಸ್ಥೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಈ ಸಂಬಂಧ ಕಂದಾಯ ಸಚಿವ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಪತ್ರ ನೀಡಲಾಗುವುದು. ಸರಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News