ಬ್ಯಾಂಕಿಂಗ್ ಕ್ಷೇತ್ರಕ್ಕೆ ಲಗ್ಗೆ: ಗೂಗಲ್‌ನಿಂದ ಕ್ವಿಕ್ ಲೋನ್ ಸೇವೆ!

Update: 2018-08-29 04:10 GMT

ಹೊಸದಿಲ್ಲಿ, ಆ.29: ಆಲ್ಫಾಬೆಟ್ ಇನ್‌ಕಾರ್ಪೊರೇಶನ್‌ನ ಗೂಗಲ್, ಹಲವು ಭಾರತೀಯ ಬ್ಯಾಂಕ್‌ಗಳ ಜತೆ ಪಾಲುದಾರಿಕೆಯಲ್ಲಿ ಸಮುದಾಯಕ್ಕೆ ತ್ವರಿತ ಸಾಲಸೌಲಭ್ಯ ಒದಗಿಸಲು ಮುಂದಾಗಿದೆ. ಭಾರತದ ಲಕ್ಷಾಂತರ ಇಂಟರ್‌ನೆಟ್ ಬಳಕೆದಾರರನ್ನು ತನ್ನ ಡಿಜಿಟಲ್ ಪಾವತಿ ಸೇವೆಗಳಿಗೆ ಆಕರ್ಷಿಸುವುದು ಇದರ ಉದ್ದೇಶ.

ಹೊಸದಿಲ್ಲಿಯಲ್ಲಿ ಮಂಗಳವಾರ ನಡೆದ ವಾರ್ಷಿಕ ಗೂಗಲ್ ಈವೆಂಟ್‌ನಲ್ಲಿ ಗೂಗಲ್‌ನ ನೆಕ್ಸ್‌ಟ್ ಬಿಲಿಯನ್ ಯೂಸರ್ ಇನೀಶಿಯೇಟಿವ್ ಆ್ಯಂಡ್ ಇಟ್ಸ್ ಪೇಮೆಂಟ್ಸ್ ವಿಭಾಗದ ಉಪಾಧ್ಯಕ್ಷ ಕೇಸರ್ ಸೇನ್‌ಗುಪ್ತ ಈ ವಿನೂತನ ಯೋಜನೆಯ ವಿವರ ನೀಡಿದರು. ಲಕ್ಷಾಂತರ ಭಾರತೀಯರಿಗೆ ಬ್ಯಾಂಕಿಂಗ್ ಸೇವೆ ಸುಲಭವಾಗಿ ಸಿಗುವಂತೆ ಮಾಡುವುದು ನಮ್ಮ ಗುರಿ ಎಂದರು.

ಗೂಗಲ್ ಕಳೆದ ವರ್ಷ ಪಾವತಿ ಆ್ಯಪ್ 'ತೇಝ್'ಗೆ ಚಾಲನೆ ನೀಡಿದ್ದು, ಸರ್ಕಾರಿ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಜತೆಗೆ ಇದನ್ನು ಸಮನ್ವಯಗೊಳಿಸಿತ್ತು. 'ಕ್ರೆಡಿಟ್ ಸೂಸೆ' ಅಂದಾಜಿನ ಪ್ರಕಾರ, 2023ರ ವೇಳೆಗೆ ಒಂದು ಲಕ್ಷ ಕೋಟಿ ಡಾಲರ್ ಪ್ರಗತಿ ಅವಕಾಶವಿರುವ ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ದಕ್ಷಿಣ ಏಷ್ಯಾ ದೇಶಗಳಿಂದ ದೊಡ್ಡ ವಹಿವಾಟು ಪಡೆಯುವ ನಿರೀಕ್ಷೆಯಿಂದ ಗೂಗಲ್ ಈ ಸೇವೆ ಆರಂಭಿಸಿದೆ.

ಇದನ್ನು ಮಂಗಳವಾರ ಗೂಗಲ್ ಪೇ ಎಂದು ಮರುನಾಮಕರಣ ಮಾಡಲಾಗಿದ್ದು, ಫೆಡರಲ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಕೊಟ್ಯಾಕ್ ಮಹೀಂದ್ರ ಜತೆ ಒಪ್ಪಂದ ಮಾಡಿಕೊಂಡು ಆ್ಯಪ್ ಬಳಕೆದಾರರಿಗೆ ತ್ವರಿತ ಸಾಲ ಒದಗಿಸಲು ನಿರ್ಧರಿಸಿದೆ.

ಹಲವು ಬ್ಯಾಂಕ್‌ಗಳ ಜತೆಗೆ ಮಾತುಕತೆ ನಡೆಯುತ್ತಿದ್ದು, ಪಾಲುದಾರಿಕೆ ಮೂಲಕ ಮುಕ್ತವಾಗಿ ಎಲ್ಲ ಬ್ಯಾಂಕ್‌ಗಳ ಜತೆ ಕಾರ್ಯನಿರ್ವಹಿಸಲು ನಾವು ಸಿದ್ಧರಿದ್ದೇವೆ ಎಂದು ಸೇನ್‌ಗುಪ್ತ ಸಂದರ್ಶನದಲ್ಲಿ ಹೇಳಿದ್ದಾರೆ.

ಬ್ಯಾಂಕ್‌ಗಳು ತಮ್ಮ ಹಣಕಾಸು ಸಾಮರ್ಥ್ಯ, ಗ್ರಾಹಕರ ಅರ್ಥ ಮಾಡಿಕೊಳ್ಳುವಿಕೆಯನ್ನು ಒದಗಿಸಿದರೆ, ನಮ್ಮ ಬಳಕೆದಾರರ ಅನುಭವ, ಸಂಕೀರ್ಣ ಪ್ರಕ್ರಿಯೆಯನ್ನು ತೀರಾ ಸರಳಗೊಳಿಸುವ ಮತ್ತು ತ್ವರಿತಗೊಳಿಸುವ ಸೇವೆಯನ್ನು ನಾವು ಒದಗಿಸುತ್ತಿದ್ದೇವೆ ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News