ಜಲಪ್ರವಾಹಕ್ಕೆ ಪರಿಸರಪರ ಕಾಳಜಿಯ ಕೊರತೆ ಕಾರಣ: ಪೇಜಾವರಶ್ರೀ

Update: 2018-08-29 08:53 GMT

ಬೆಂಗಳೂರು, ಆ.29: ಕೇರಳ, ಕೊಡಗು ಹಾಗೂ ದ.ಕ. ಜಿಲ್ಲೆಯಲ್ಲಿ ಸಂಭವಿಸಿರುವ ಜಲಪ್ರವಾಹ, ಪ್ರಾಕೃತಿಕ ದುರಂತಕ್ಕೆ ಪರಿಸರಪರ ಕಾಳಜಿಯ ಕೊರತೆಯೇ ಕಾರಣ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅಭಿಪ್ರಾಯಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿಯ ಹೆಸರಿನಲ್ಲಿ ಸರಕಾರಗಳು ಪರಿಸರವನ್ನು ನಾಶ ಮಾಡಿದವು. ಅದೇರೀತಿ ಜನರು ಕೂಡಾ ಪರಿಸರವನ್ನು ನಿರ್ಲಕ್ಷಿಸಿದರು. ಇದು ನೆರೆ ಹಾವಳಿಗೆ ಕಾರಣವಾಯಿತು. ಈ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ಹೇರಲು ಪರಿಸರ ರಕ್ಷಣೆಯ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಚಾತುರ್ಮಾಸ್ಯ ಮುಗಿದ ಬಳಿಕ ತಾನು ಕೊಡಗಿಗೆ ಭೇಟಿ ನೀಡಲಿದ್ದೇನೆ. ಅಲ್ಲದೆ ಮಠದ ಟ್ರಸ್ಟ್ ವತಿಯಿಂದ ಪರಿಹಾರ ನಿಧಿಗೆ 20 ಲಕ್ಷ ರೂ. ನೀಡಲಾಗುವುದು ಎಂದರು.

ಕಸ್ತೂರಿ ರಂಗನ್ ವರದಿಯ ಬಗ್ಗೆ ತಜ್ಞರೊಂದಿಗೆ ತ್ವರಿತವಾಗಿ ಸಮಾಲೋಚನೆ ಆಗಬೇಕು. ಅದೇರೀತಿ ಎತ್ತಿನಹೊಳೆ ಯೋಜನೆಯ ಬಗ್ಗೆಯೂ ಪರಿಶೀಲನೆ ಆಗಬೇಕು. ನಾನು ಈ ಯೋಜನೆಯ ಪರವೂ ಅಲ್ಲ, ವಿರುದ್ಧವೂ ಅಲ್ಲ. ಆದರೆ ಈ ಯೋಜನೆಯ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ಅಗತ್ಯ. ದೇಶದ ಹಿತದೃಷ್ಟಿಯಿಂದ ಉತ್ತಮ ನಿರ್ಧಾರ ಕೈಗೊಳ್ಳಬೇಕು ಎಂದರು.

ಶಿರೂರು ಲಕ್ಷ್ಮೀವರ ಸ್ವಾಮೀಜಿಯ ಸಾವಿನ ಕುರಿತಂತೆ ಪ್ರತಿಕ್ರಿಯಿಸಿದ ಪೇಜಾವರಶ್ರೀ, ಸಾವಿನ ವಿಧಿ ವಿಜ್ಞಾನ ಪ್ರಯೋಗಾಲದ ವರದಿ ಇನ್ನೂ ಬಂದಿಲ್ಲ. ಅದು ಬಂದಾಗ ಅವರ ಸಾವಿಗೆ ವಿಷಪ್ರಾಶನ ಕಾರಣ ಹೌದೋ ಅಲ್ಲವೋ ಎಂಬುದು ತಿಳಿದುಬರಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News