ಅಮಾನ್ಯೀಕರಣಗೊಂಡ ಶೇ.99.30ರಷ್ಟು ನೋಟುಗಳು ವಾಪಸ್: ಆರ್‌ಬಿಐ

Update: 2018-08-29 09:16 GMT

ಮುಂಬೈ, ಆ.29: ಅಮಾನ್ಯೀಕರಣಗೊಂಡ ರೂ.500 ಹಾಗೂ ರೂ.1,000 ಮುಖಬೆಲೆಯ ನೋಟುಗಳ ಪೈಕಿ ಶೇ.99.30ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಹಿಂದಿರುಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.

ಕಾಳಧನ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಕ್ರಮವೆಂದು ಬಣ್ಣಿಸಲಾದ ಅಮಾನ್ಯೀಕರಣದ ನಂತರ ಸಣ್ಣ ಪ್ರಮಾಣದ ರದ್ದಾದ ನೋಟುಗಳು ಮಾತ್ರ ವ್ಯವಸ್ಥೆಗೆ ಹಿಂದಿರುಗಿಲ್ಲ ಎಂದು ಈ ಮೂಲಕ ಹೇಳುವ ಪ್ರಯತ್ನವನ್ನು ಆರ್‌ಬಿಐ ಮಾಡಿದೆ.

ಅಮಾನ್ಯೀಕರಣಗೊಂಡ ನಂತರ ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಸ್ ಬಂದ ನೋಟುಗಳನ್ನು ಲೆಕ್ಕ ಮಾಡಲು ಬಹಳಷ್ಟು ದೀರ್ಘ ಸಮಯ ತೆಗೆದುಕೊಂಡ ರಿಸರ್ವ್ ಬ್ಯಾಂಕ್, ಈ ಪ್ರಕ್ರಿಯೆ ಕೊನೆಗೂ ಪೂರ್ಣಗೊಂಡಿದೆ ಎಂದು ತನ್ನ 2017-18 ವಾರ್ಷಿಕ ವರದಿಯಲ್ಲಿ ತಿಳಿಸಿದೆ.

ನವೆಂಬರ್ 8, 2016ರಂದು ನೋಟು ಅಮಾನ್ಯೀಕರಣಗೊಳ್ಳುವ ಸಮಯದಲ್ಲಿ ಅರ್ಥವ್ಯವಸ್ಥೆಯಲ್ಲಿ ಚಲಾವಣೆಯಲ್ಲಿದ್ದ 15.41 ಲಕ್ಷ ಕೋಟಿ ರೂ. ಮೌಲ್ಯದ ರೂ.500 ಹಾಗೂ ರೂ.1000 ಮುಖಬೆಲೆಯ ನೋಟುಗಳ ಪೈಕಿ ರೂ.15.31 ಲಕ್ಷ ಕೋಟಿ ಮೌಲ್ಯದ ನೋಟುಗಳು ವಾಪಸಾಗಿವೆ. ಇದರರ್ಥ ರೂ 10,720 ಕೋಟಿ ಮೌಲ್ಯದ ರದ್ದತಿಗೊಂಡ ನೋಟುಗಳು ವಾಪಸ್ ಆಗಿಲ್ಲ ಎಂದಾಗಿದೆ.

ಅಮಾನ್ಯೀಕರಣ ಪ್ರಕ್ರಿಯೆಯ ನಂತರ 2016-17ರಲ್ಲಿ ಆರ್‌ಬಿಐ ಹೊಸ ರೂ.500 ಹಾಗೂ ರೂ. 2,000 ಮುಖಬೆಲೆಯ ನೋಟುಗಳನ್ನು ಮುದ್ರಿಸಲು ರೂ 7,965 ಕೋಟಿ ಹಣವನ್ನು ವ್ಯಯಿಸಿತ್ತು. ಇದು ಅದಕ್ಕಿಂತ ಹಿಂದಿನ ವರ್ಷದಲ್ಲಿ ಮಾಡಿದ ವೆಚ್ಚಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ.

ಅಂತೆಯೇ ಜುಲೈ 2017ರಿಂದ ಜೂನ್ 2018ರ ತನಕ ಹೊಸ ನೋಟುಗಳನ್ನು ಮುದ್ರಿಸಲು ಮತ್ತೆ ರೂ.4,912 ಕೋಟಿ ವ್ಯಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News