ಟೆಲಿಫೋನ್ ಕದ್ದಾಲಿಕೆ ಆರೋಪ-ಪ್ರತ್ಯಾರೋಪ: ಸಾಕ್ಷ್ಯಾಧಾರ ನೀಡಲು ಸಿಎಂ ಕುಮಾರಸ್ವಾಮಿ ಸವಾಲು

Update: 2018-08-29 13:00 GMT

ಬೆಂಗಳೂರು, ಆ. 29: ‘ನನ್ನ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯರ ದೂರವಾಣಿ ಸೇರಿದಂತೆ ರಾಜ್ಯದಲ್ಲಿ ಹಲವು ನಾಯಕರ ಟೆಲಿಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ. ಈ ಹಿಂದೆಯೇ ಇದರ ಬಗ್ಗೆ ಪ್ರಸ್ತಾಪಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ವಿಪಕ್ಷ ನಾಯಕರೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಈ ಮಧ್ಯೆ ‘ರಾಜ್ಯ ಸರಕಾರ ಟೆಲಿಫೋನ್ ಕದ್ದಾಲಿಕೆ ಮಾಡುತ್ತಿದೆ ಎನ್ನುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಯಾವುದೇ ಸಣ್ಣ ಸಾಕ್ಷ್ಯಾಧಾರ ನೀಡಿದರೂ ನಾನೇ ನೇರ ಕ್ರಮಕೈಗೊಳ್ಳುತ್ತೇನೆ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಗೃಹ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ರಾಜ್ಯ ಸರಕಾರ ಯಾವುದೇ ವ್ಯಕ್ತಿಗಳ ಟೆಲಿಫೋನ್ ಕದ್ದಾಲಿಕೆಯನ್ನು ಮಾಡುತ್ತಿಲ್ಲ. ಈ ಸಂಬಂಧ ಬಿ.ಎಸ್.ಯಡಿಯೂರಪ್ಪನವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದ್ದಾರೆ.

ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿರುವ ಹಾಗೂ ಚಟುವಟಿಕೆಗಳಲ್ಲಿ ತೊಡಗಿಸುವ ವ್ಯಕ್ತಿಗಳ ಟೆಲಿಫೋನ್ ಕರೆಗಳ ವಿವರವನ್ನಷ್ಟೇ ಪರಿಶೀಲಿಸಲಾಗುತ್ತದೆ. ಆದರೆ, ಯಾವುದೇ ರಾಜಕಾರಣಿಗಳ ಕರೆ ಎಂದೂ ಕದ್ದಾಲಿಸುವುದಿಲ್ಲ. ತನಿಖೆ ನಿಮಿತ್ತ ಕರೆ ವಿವರ ಪರಿಶೀಲಿಸುವುದು ನಮಗೆ ಗೊತ್ತಿರುವುದಿಲ್ಲ ಎಂದು ಪರಮೇಶ್ವರ್ ಸ್ಪಷ್ಟಣೆ ನೀಡಿದರು.

ಆದರೆ, ‘ಟೆಲಿಫೋನ್ ಕದ್ದಾಲಿಕೆಯನ್ನು ರಾಜ್ಯ ಸರಕಾರ ಕೂಡಲೇ ನಿಲ್ಲಿಸಬೇಕು. ನಾನು ಸೇರಿದಂತೆ ರಾಜ್ಯದ ಹಲವು ಮುಖಂಡರ ಟೆಲಿಫೋನ್ ಕದ್ದಾಲಿಕೆ ಸಂಬಂಧ ಸೂಕ್ತ ತನಿಖೆ ನಡೆಸಬೇಕು. ಇಲ್ಲದಿದ್ದಲ್ಲಿ ಹಿಂದೆ ರಾಮಕೃಷ್ಣ ಹೆಗಡೆ ಸರಕಾರ ಉರುಳಿಬಿದ್ದ ಘಟನೆ ಮರುಕಳಿಸಲಿದೆ ಎಂದು ಯಡಿಯೂರಪ್ಪ ಎಚ್ಚರಿಸಿದರು.

ಅವರದ್ದೆ ಸರಕಾರವಿದೆ: ಕೇಂದ್ರದಲ್ಲಿ ಅವರದ್ದೇ ಸರಕಾರ ಆಡಳಿತ ನಡೆಸುತ್ತಿದೆ. ಪ್ರಧಾನಿ ಮೋದಿ ಭೇಟಿ ಮಾಡಿ ರಾಜ್ಯದಲ್ಲಿ ಯಾರ ಯಾರ ಟೆಲಿಫೋನ್ ಕದ್ದಾಲಿಕೆ ಆಗುತ್ತಿದೆ ಎಂಬುವುದನ್ನು ತನಿಖೆ ನಡೆಸಲು ಅವಕಾಶವಿದ್ದು, ತನಿಖೆ ನಡೆಸಲಿ ಎಂದು ಕುಮಾರಸ್ವಾಮಿ, ಬಿಎಸ್‌ವೈಗೆ ತಿರುಗೇಟು ನೀಡಿದ್ದಾರೆ.

ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಆಡಳಿತಾವಧಿಯಲ್ಲಿ ನಾಯಕರು ತಮ್ಮ ಆಡಳಿತದಲ್ಲಿ ಮಾಡಿದ ಕೆಲಸವನ್ನು ತಲೆಯಲ್ಲಿಟ್ಟುಕೊಂಡು ಈ ರೀತಿಯ ಆರೋಪ ಮಾಡಿರಬೇಕು. ಯಾವುದೇ ಪಕ್ಷದ ಮುಖಂಡರ ಅಥವಾ ವ್ಯಕ್ತಿಯ ಟೆಲಿಫೋನ್ ಕದ್ದಾಲಿಕೆ ಮಾಡುವ ಚಟ ತಮಗಿಲ್ಲ. ಇಂತಹ ಹವ್ಯಾಸದಲ್ಲಿ ನಾನು ಬೆಳೆದು ಬಂದಿಲ್ಲ. ಈ ಬಗ್ಗೆ ಸಣ್ಣ ಸಾಕ್ಷಿ ತಂದು ಕೊಟ್ಟರು ಕ್ರಮ ತೆಗೆದುಕೊಳ್ಳುತ್ತೇನೆ ಎಂದ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News