ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣ: ಯಶವಂತ್‌ ಸಿನ್ಹಾ

Update: 2018-08-29 12:56 GMT

ಬೆಂಗಳೂರು, ಆ.29: ದೇಶದಲ್ಲಿ ಒಂದು ರೀತಿಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣ ನಿರ್ಮಾಣವಾಗಿದ್ದು, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವವರನ್ನು ಪ್ರಶ್ನಿಸಿದರೆ ಅವರ ಧ್ವನಿಯನ್ನು ಅಡಗಿಸುವ ಪ್ರವೃತ್ತಿ ಬೆಳೆಯುತ್ತಿದೆ ಎಂದು ಕೇಂದ್ರದ ಮಾಜಿ ವಿದೇಶಾಂಗ ಸಚಿವ ಯಶವಂತ್ ಸಿನ್ಹಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಡೀ ದೇಶವನ್ನು ನಡೆಸುತ್ತಿದ್ದಾರೆ. ಉಳಿದ ನಾಯಕರು ಅವರ ಎದುರು ಅಸಹಾಯಕರಾಗಿದ್ದಾರೆ ಎಂದು ಟೀಕಿಸಿದರು.

ಹೈದರಾಬಾದ್‌ನಲ್ಲಿ ಕವಿ ವರವರರಾವ್, ಮುಂಬೈನಲ್ಲಿ ವೆರ್ನನ್ ಗೋನ್ಸಾಲ್ವಿಸ್, ಅರುಣ್ ಫೆರೇರಾ ಸೇರಿದಂತೆ ಐದು ಮಂದಿ ಮಾನವ ಹಕ್ಕುಗಳ ಹೋರಾಟಗಾರರನ್ನು ಬಂಧಿಸಿರುವುದೇ ದೇಶದಲ್ಲಿ ತುರ್ತು ಪರಿಸ್ಥಿತಿಯ ವಾತಾವರಣ ನಿರ್ಮಾಣವಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರಮೋದಿ ವಿರುದ್ಧ ಧ್ವನಿ ಎತ್ತದಂತೆ ವ್ಯವಸ್ಥಿತವಾಗಿ ಷಡ್ಯಂತ್ರ ರೂಪಿಸಲಾಗುತ್ತಿದೆ. ದೇಶದ ತನಿಖಾ ಸಂಸ್ಥೆಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ದೇಶದ ಜನತೆ ಇವೆಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸೂಕ್ತ ಸಮಯದಲ್ಲಿ ಅವರೇ ಬುದ್ಧಿ ಕಲಿಸುತ್ತಾರೆ ಎಂದು ಯಶವಂತ್‌ ಸಿನ್ಹಾ ಎಚ್ಚರಿಕೆ ನೀಡಿದರು.

ದೇಶವನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸಿದರೆ ತಾನಾಗಿಯೇ ಮೇಕ್ ಇನ್ ಇಂಡಿಯಾ ಸಾಕಾರಗೊಳ್ಳುತ್ತದೆ. ಆದರೆ, ಈ ಬಗ್ಗೆ ಆಲೋಚನೆ ಮಾಡದೆ, ಕೇವಲ ಭಾಷಣಗಳನ್ನು ಮಾಡುವುದರಿಂದ ಯಾವ ಮೇಕ್ ಇನ್ ಇಂಡಿಯಾವೂ ಆಗುವುದಿಲ್ಲ ಎಂದು ಅವರು ಟೀಕಿಸಿದರು.

‘ರಫೇಲ್’ ದೇಶದ ಅತೀ ದೊಡ್ಡ ಹಗರಣ: ರಫೇಲ್ ಯುದ್ಧ ವಿಮಾನಗಳ ಖರೀದಿಯು ದೇಶದ ಅತೀ ದೊಡ್ಡ ಹಗರಣವಾಗಿದೆ ಎಂದು ಆರೋಪಿಸಿದ ಯಶವಂತ್‌ ಸಿನ್ಹಾ, ಕೇಂದ್ರ ಸರಕಾರ ಈ ಯುದ್ಧ ವಿಮಾನಗಳ ಖರೀದಿ ಪ್ರಕ್ರಿಯೆ ಕುರಿತ ವಾಸ್ತವಾಂಶವನ್ನು ದೇಶದ ಜನತೆಯ ಎದುರು ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು. ಹೊಸ ಒಡಂಬಡಿಕೆ ಮಾಡಿಕೊಳ್ಳುವಾಗ ಒಂದೇ ಕಂಪೆನಿಗೆ ಆಹ್ವಾನ ನೀಡಿದ್ದು ಏಕೆ? ನಾನು ಆ ಕಂಪೆನಿಯ ಬಗ್ಗೆ ಮಾತನಾಡುವುದಿಲ್ಲ. ಒಂದು ವೇಳೆ ನಾನೇನಾದರೂ ಅವರ ಬಗ್ಗೆ ಮಾತನಾಡಿದರೆ ನನ್ನ ವಿರುದ್ಧ 509 ಕೋಟಿ ರೂ.ಮಾನಹಾನಿ ಪ್ರಕರಣ ದಾಖಲು ಮಾಡಬಹುದು ಎಂದು ಯಶವಂತ್‌ ಸಿನ್ಹಾ ಹೇಳಿದರು.

2014ರಲ್ಲಿ ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳಿದ್ದೇನೆ. ಲೋಕಸಭಾ ಚುನಾವಣೆಗೆ ಇನ್ನು ಮುಂದೆ ಸ್ಪರ್ಧಿಸುವುದಿಲ್ಲ ಎಂದು ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ನಿರ್ಧಾರಕ್ಕೆ ಈಗಲೂ ಬದ್ಧವಾಗಿದ್ದೇನೆ. ಉದ್ಯೋಗವಿಲ್ಲದೆ ನರೇಂದ್ರಮೋದಿಯನ್ನು ಟೀಕಿಸುವುದನ್ನೆ ಕೆಲವರು ಉದ್ಯೋಗ ಮಾಡಿಕೊಂಡಿದ್ದಾರೆ ಎಂದು ಪರೋಕ್ಷವಾಗಿ ನಮ್ಮನ್ನು ಉಲ್ಲೇಖಿಸಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದರು. ಆನಂತರ, ನನ್ನ ಧ್ವನಿಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ದೇಶದಲ್ಲಿ ನಡೆಯುತ್ತಿರುವ ವಾಸ್ತವಾಂಶವನ್ನಷ್ಟೆ ನಾನು ಹೇಳುತ್ತಿದ್ದೇನೆ ಎಂದು ಅವರು ತಿಳಿಸಿದರು.

ಕೇಂದ್ರ ಸರಕಾರಕ್ಕೆ ಪ್ರಶ್ನೆಗಳು

ದೇಶದ ಸಾರ್ವಜನಿಕ ವಲಯದ ದೊಡ್ಡ ಸಂಸ್ಥೆಯಾಗಿರುವ ಎಚ್‌ಎಎಲ್ ಜೊತೆ ರಫೇಲ್ ಯುದ್ಧ ವಿಮಾನಗಳ ನಿರ್ಮಾಣ ಒಪ್ಪಂದವನ್ನು ರದ್ದು ಪಡಿಸಿದ್ದು ಏಕೆ? ಫ್ರಾನ್ಸ್ ಪ್ರವಾಸ ಕೈಗೊಂಡ ಸಮಯದಲ್ಲೇ ಈ ಒಪ್ಪಂದ ರದ್ದಾಗಲು ಕಾರಣವೇನು? ರಕ್ಷಣಾ ಸಚಿವರು, ಸಚಿವ ಸಂಪುಟದ ಗಮನಕ್ಕೂ ತರದೇ ಪ್ರಧಾನಮಂತ್ರಿ ವೈಯಕ್ತಿಕವಾಗಿ ಈ ಒಪ್ಪಂದ ರದ್ದುಪಡಿಸಿದ್ದು ಏಕೆ? ಮೇಕ್ ಇನ್ ಇಂಡಿಯಾ ಎಂಬ ಘೋಷಣೆ ಕೂಗುವವರು ಸ್ವದೇಶಿ ಎಚ್‌ಎಎಲ್ ಸಂಸ್ಥೆ ಜೊತೆ ಮಾಡಿಕೊಂಡಿದ್ದ ಒಪ್ಪಂದ ರದ್ದುಪಡಿಸಿ, ಯಾವುದೇ ಅನುಭವವಿಲ್ಲದ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡಿದ್ದೇಕೆ ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News