ನಮ್ಮದು ಸುಭದ್ರ ಸರಕಾರ: ಡಾ.ಜಿ.ಪರಮೇಶ್ವರ್

Update: 2018-08-29 13:05 GMT

ಬೆಂಗಳೂರು, ಆ.29: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದ ಎಲ್ಲ ಯೋಜನೆಗಳನ್ನು ಮುಂದುವರೆಸಿದ್ದು, ಐದು ವರ್ಷಗಳ ಯಾವುದೇ ಅಡೆತಡೆ ಇಲ್ಲದೆ, ಸಮ್ಮಿಶ್ರ ಸರಕಾರ ಆಡಳಿತ ನಡೆಸಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಬುಧವಾರ ನಗರದ ನೃಪತುಂಗ ರಸ್ತೆಯ ಯವನಿಕಾ ಸಭಾಂಗಣದಲ್ಲಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ 29ನೇ ಆಡಳಿತ ಮಂಡಳಿಯ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. 'ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಇಂಥ ಸಂವತ್ಸರದಲ್ಲೇ ಬೀಳಲಿದೆ ಎಂದು ವಿರೋಧ ಪಕ್ಷದವರು ಭವಿಷ್ಯ ನುಡಿದಿದ್ದರು. ಆದರೆ, ನಾವು 100 ದಿನಗಳನ್ನೆ ಪೂರೈಸಿದ್ದೀವಿ. ಮುಂದೆಯೂ ಸುಭದ್ರವಾಗಿದ್ದು, ಐದು ವರ್ಷವನ್ನೂ ಪೂರ್ಣಗೊಳಿಸಲಿದೆ ಎಂದು ತಿಳಿಸಿದರು.

ಸಮ್ಮಿಶ್ರ ಸರಕಾರ ನೂರು ದಿನಗಳಲ್ಲಿ ಸಾಕಷ್ಟು ಜನಪರ ಕಾರ್ಯಕ್ರಮ ಅನುಷ್ಠಾನ ಮಾಡಿದೆ ಎಂದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರದಲ್ಲಿ ಘೋಷಿಸಿದ್ದ ಆಯವ್ಯಯವನ್ನು ಮುಂದುವರೆಸಿದ್ದೇವೆ ಎಂದು ಹೇಳಿದರು.

ಸಾಲ ಮನ್ನಾ: ಹೊಸ ಕಾರ್ಯಕ್ರಮಗಳನ್ನು ಬಜೆಟ್‌ನಲ್ಲಿ ಅಳವಡಿಸಿದ್ದೇವೆ. ಪ್ರಮುಖವಾಗಿ ರೈತರ 31 ಸಾವಿರ ಕೋಟಿ ರೂ. ಸಾಲಮನ್ನಾ ಅನುಷ್ಠಾನಕ್ಕೆ ಸಿದ್ಧಗೊಂಡಿದೆ. ಇದರ ಜೊತೆಗೆ ಖಾಸಗಿ ಸಾಲ, ಕೈ ಸಾಲವನ್ನೂ ಸಹ ಮನ್ನಾ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇವೆ. ಬಹಳಷ್ಟು ರೈತರು ಕೈಸಾಲ ತೀರಿಸಲು ಹೈರಾಣಾಗಿದ್ದಾರೆ. ಅದಕ್ಕಾಗಿಯೇ ಕೈಸಾಲ ಮನ್ನಾ ಮಾಡಲು ಹೊರಟ್ದಿದ್ದೇವೆ. ಈ ಸಂಬಂಧ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪರಮೇಶ್ವರ್ ನುಡಿದರು.

ರಾಜ್ಯದ 13 ಜಿಲ್ಲೆಗಳಲ್ಲಿ ಬರವಿದ್ದರೆ, ಕೊಡಗು, ಮಡಿಕೇರಿ, ಚಿಕ್ಕಮಗಳೂರು, ಮಂಗಳೂರಿನಲ್ಲಿ ಅತಿವೃಷ್ಟಿ ಎದುರಾಗಿ, ಸಾಕಷ್ಟು ಜನ ನಿರಾಶ್ರಿತರಾಗಿದ್ದಾರೆ. ಇವರ ನೆರವಿಗೆ ರಾಜ್ಯ ಸರಕಾರ ಕೂಡಲೇ ಧಾವಿಸಿ, ಎಲ್ಲ ವ್ಯವಸ್ಥೆ ಮಾಡಿದೆ. ಆದರೆ, ಕೇಂದ್ರ ಸರಕಾರದಿಂದ ಸಣ್ಣ ಹಣಕಾಸಿನ ನೆರವೂ ನಮಗೆ ಸಿಕ್ಕಿಲ್ಲ. ಕೇರಳ ನೆರೆ ಹಾವಳಿಗೆ ಪ್ರಧಾನಿ ಖುದ್ದು ವೈಮಾನಿಕ ಸಮೀಕ್ಷೆ ನಡೆಸಿ ಪರಿಹಾರ ಘೋಷಿಸಿದರು. ಆದರೆ ಕೊಡಗು ವೀಕ್ಷಣೆ ನಿರ್ಲಕ್ಷಿಸಿದ್ದಾರೆ ಎಂದರು.

ರಾಜಧಾನಿ ಅಭಿವೃದ್ಧಿ: ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಬಳಿಕ ಸಾಕಷ್ಟು ಕೆಲಸ ಮಾಡಲಾಗಿದೆ. 8 ಕಿ.ಮೀ. ಅನಧಿಕೃತ ಕೇಬಲ್, ಫ್ಲೆಕ್ಸ್ ತೆರವು ಮಾಡಲಾಗಿದೆ. ಅದೇ ರೀತಿ, ನಾಡಪ್ರಭು ಕೆಂಪೇಗೌಡ ಲೇಔಟ್ ನಿವೇಶನ ಹಂಚಿಕೆ ಪ್ರಕ್ರಿಯೆ ಸೇರಿ ಹಲವು ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಿದ್ದೇವೆ.

ಕೇಂದ್ರ ಗೃಹ ಮಂತ್ರಿ ಭೇಟಿ

ಕೊಡಗು ನೆರೆ ಪರಿಸ್ಥಿತಿಗೆ ನೆರವು ನೀಡುವಂತೆ ಆ.30 ರಂದು ಮುಖ್ಯಮಂತ್ರಿ ಅವರೊಂದಿಗೆ ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಹಣಕಾಸಿನ ನೆರವಿಗೆ ಮನವಿ ಮಾಡಲಾಗುವುದು. ಅಲ್ಲದೆ, ಈಗಾಗಲೇ 2 ಸಾವಿರ ಕೋಟಿ ರೂ. ನೀಡುವಂತೆ ಮನವಿ ಸಲ್ಲಿಸಲಾಗಿದೆ ಎಂದು ಪರಮೇಶ್ವರ್ ಹೇಳಿದರು.

ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ತನಿಖೆ ಚುರುಕುಗೊಂಡಿದ್ದು, ಶೀಘ್ರದಲ್ಲಿಯೇ ಹತ್ಯೆಯ ರೂವಾರಿಗಳ ಬಂಧನವೂ ಆಗಲಿದೆ. ಆದರೆ, ತನಿಖೆ ಹಂತದ ಬಗ್ಗೆ ಮಾಹಿತಿಗಳನ್ನು ನೀಡಲು ಸಾಧ್ಯವಿಲ್ಲ.

-ಡಾ.ಜಿ.ಪರಮೇಶ್ವರ್, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News