ರಾಜ್ಯ ಸರಕಾರ ಕುಸಿದುಬಿದ್ದರೆ ಅದಕ್ಕೆ ಬಿಜೆಪಿ ಹೊಣೆಯಲ್ಲ: ಯಡಿಯೂರಪ್ಪ

Update: 2018-08-29 13:08 GMT

ಬೆಂಗಳೂರು, ಆ. 29: ರಾಜ್ಯದಲ್ಲಿನ ಮೈತ್ರಿ ಸರಕಾರ ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಬಿಜೆಪಿ ಯಾವುದೇ ಕಾರಣಕ್ಕೂ ಕೈಹಾಕುವುದಿಲ್ಲ. ಆದರೆ, ಅವರೇ ಕಚ್ಚಾಡಿಕೊಂಡು ರಾಜ್ಯ ಸರಕಾರ ಕುಸಿದರೆ ಅದಕ್ಕೆ ಬಿಜೆಪಿ ಹೊಣೆಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.

ಬುಧವಾರ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಸರಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಅನ್ನಿಸುತ್ತಿಲ್ಲ. ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ರಾಜ್ಯದ 13 ಜಿಲ್ಲೆಗಳಲ್ಲಿ ಭೀಕರ ಬರ ಪರಿಸ್ಥಿತಿ ಇದೆ. ಉಳಿದಕಡೆ ಅತಿವೃಷ್ಟಿ ಸಂಕಷ್ಟ. ಆದರೆ, ವಿಧಾನಸೌಧದಲ್ಲಿ ಸಚಿವರೂ ಸಿಗುತ್ತಿಲ್ಲ. ರಾಜ್ಯದಲ್ಲಿ ಓಡಾಡಿ ಸಮಸ್ಯೆಯನ್ನೂ ಆಲಿಸುತ್ತಿಲ್ಲ ಎಂದು ಯಡಿಯೂರಪ್ಪ ಟೀಕಿಸಿದರು.

ಭಿನ್ನಾಭಿಪ್ರಾಯ: ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಸಿಎಂ ಕುಮಾರಸ್ವಾಮಿ ನಡುವೆ ಭಿನ್ನಾಭಿಪ್ರಾಯ ಇರುವ ಪರಿಣಾಮ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ, ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಇಂತಹ ಗೊಂದಲದ ನಡುವೆ ಯಾವುದೇ ಹೇಳಿಕೆ ಕೊಡಬಾರದೆಂದು ನಮ್ಮ ಪಕ್ಷದ ಮುಖಂಡರಿಗೆ ಸೂಚನೆ ನೀಡಿದ್ದೇನೆ. ಸರಕಾರ ಅಸ್ಥಿರಗೊಳಿಸುವ ಪ್ರಯತ್ನವನ್ನು ನಾವು ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಕೊಡಗು ಜಿಲ್ಲೆ ಮಳೆ-ಪ್ರವಾಹದ ಹಿನ್ನೆಲೆಯಲ್ಲಿ ಹೆಚ್ಚಿನ ನೆರವು ನೀಡಬೇಕೆಂದು ಈಗಾಗಲೇ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದು, ಮೂರ್ನಾಲ್ಕು ದಿನಗಳಲ್ಲಿ ಪ್ರಧಾನಿ ಮೋದಿ ಅನುದಾನ ಬಿಡುಗಡೆ ಮಾಡುವ ನಿರೀಕ್ಷೆ ಇದೆ ಎಂದ ಅವರು, ಅತಿವೃಷ್ಟಿ ಪೀಡಿತ ಪ್ರದೇಶದಲ್ಲಿಯೂ ಅಭಿವೃದ್ಧಿ ಮಂದಗತಿಯಲ್ಲಿ ಸಾಗಿದೆ ಎಂದು ಟೀಕಿಸಿದರು.

ಮತ್ತಷ್ಟು ನಾಯಕರು ಬಿಜೆಪಿಗೆ: ಕಾಂಗ್ರೆಸಿನ ಹಲವು ಪ್ರಭಾವಿ ಮುಖಂಡರು ಬಿಜೆಪಿ ಸಂಪರ್ಕದಲ್ಲಿದ್ದು, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವರೆಲ್ಲರೂ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಇದರಿಂದ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ವರ್ಚಸ್ಸು ಹೆಚ್ಚಲಿದೆ ಎಂದು ನುಡಿದರು.

ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಚಿಂಚನಸೂರು, ಕುತಂತ್ರದಿಂದ ಕಿತ್ತೂರು ರಾಣಿ ಚೆನ್ನಮ್ಮರನ್ನು ಸೋಲಿಸಿದಂತಹ ನಮ್ಮವರೆ ನನ್ನನ್ನು ಸೋಲಿಸಿದರು. ನನ್ನ ಸೋಲಿಗೆ ಬಿಜೆಪಿ, ದಳ ಕಾರಣವಲ್ಲ. ಐದು ಬಾರಿ ಗೆದ್ದಿದ್ದ ನನ್ನ ಜನಪ್ರಿಯತೆ ಸಹಿಸದೆ ಕಾಂಗ್ರೆಸ್‌ನವರೆ ನನ್ನನ್ನು ಸೋಲಿಸಿದರು. ಹೈ.ಕ.ಭಾಗದಲ್ಲಿ ಶೇ.46 ಮಂದಿ ನಮ್ಮ ಸಮುದಾಯದವರಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವೆ ಸಾದ್ವಿ ನಿರಂಜನ್ ಜ್ಯೋತಿ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್, ಹಿರಿಯ ಮುಖಂಡ ಡಿ.ಎಸ್.ವೀರಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News