‘ಪುಸ್ತಕ ಪಾರ್ಕ್’ ನಿರ್ಮಾಣಕ್ಕೆ ನೆರವು: ಸಚಿವೆ ಜಯಮಾಲ ಭರವಸೆ

Update: 2018-08-29 14:37 GMT

ಬೆಂಗಳೂರು,ಆ.29: ಪುಸ್ತಕ ಓದುವ ಹವ್ಯಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪುಸ್ತಕ ಪ್ರಾಧಿಕಾರದಿಂದ ‘ಪುಸ್ತಕ ಪಾರ್ಕ್’ ನಿರ್ಮಾಣಕ್ಕೆ ಮುಂದಾದರೆ ರಾಜ್ಯ ಸರಕಾರ ಹಾಗೂ ಇಲಾಖೆಯಿಂದ ಸಂಪೂರ್ಣ ನೆರವು ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಡಾ.ಜಯಮಾಲ ಭರವಸೆ ನೀಡಿದ್ದಾರೆ.

ಬುಧವಾರ ನಗರದ ನಯನ ಸಭಾಂಗಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ 25 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ‘ಬೆಳ್ಳಿ ಹಬ್ಬ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಲಂಡನ್, ನ್ಯೂಯಾರ್ಕ್ ಹಾಗೂ ಮತ್ತಿತರೆ ದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಪುಸ್ತಕ ಪ್ರೀತಿ ಕಂಡಿದ್ದೇನೆ. ನಮ್ಮಲ್ಲಿಯೂ ಪುಸ್ತಕ ಪ್ರೀತಿಯನ್ನು ಉತ್ತೇಜಿಸಲು ಪುಸ್ತಕ ಪಾರ್ಕ್ ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯದ ಪ್ರಮುಖ ನಗರಗಳಲ್ಲಿ ಈ ಪಾರ್ಕ್ ನಿರ್ಮಾಣ ಅಗತ್ಯವಿದೆ ಎಂದು ಹೇಳಿದರು.

ನಮ್ಮಲ್ಲಿ ಹಲವಾರು ಕ್ರಿಯಾಶೀಲ ಲೇಖಕರು, ಬರಹಗಾರರಿದ್ದಾರೆ. ಅಂತಹ ರಚನಕಾರರಲ್ಲಿ ಉತ್ತಮ ಆಲೋಚನೆಗಳಿದ್ದ ದೇಶಕ್ಕೆ ಇನ್ನೂ ಹೆಚ್ಚು ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದ ಅವರು, ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ಪುಸ್ತಕ ಓದುವವರನ್ನು ತಲುಪಲು ಸಾಧ್ಯವಾಗಬೇಕು. ಅದಕ್ಕಾಗಿ ಇ ಪುಸ್ತಕಗಳ ಕಡೆಗೆ ಹೆಚ್ಚು ಗಮನ ನೀಡಬೇಕು. ಅದು ನಮ್ಮ ಮುಂದಿನ ಪೀಳಿಗೆಗೆ ಉಳಿಸಿದಂತಾಗುತ್ತದೆ ಎಂದು ತಿಳಿಸಿದರು.

ಪ್ರಕಾಶಕರಿಗೆ ಮಾಸಾಶನ: ರಾಜ್ಯ ಸರಕಾರದಿಂದ ಈಗಾಗಲೇ ಲೇಖಕರಿಗೆ 1500 ರೂ.ಗಳಷ್ಟು ಮಾಸಾಶನ ನೀಡಲಾಗುತ್ತಿದೆ. ಅದೇ ರೀತಿಯಲ್ಲಿ ಸಂಕಷ್ಟದಲ್ಲಿರುವ ಹಾಗೂ ವಯಸ್ಸಾದ ಪ್ರಕಾಶಕರಿಗೂ ಮಾಸಾಶನ ಅಗತ್ಯವಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯೊಂದಿಗೆ ಈ ಸಂಬಂಧ ಚರ್ಚೆ ಮಾಡಲಾಗುತ್ತದೆ. ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ, ಪ್ರಾಧಿಕಾರಕ್ಕೆ ಹೆಚ್ಚಿನ ನೆರವು ನೀಡಲು ಇಲಾಖೆ ಸಿದ್ಧವಿದೆ ಎಂದು ಭರವಸೆ ನೀಡಿದರು.

ಸುಸಜ್ಜಿತ ಗ್ರಂಥಾಲಯ ಇಲ್ಲದೆ ಇದ್ದರೆ ಮನುಷ್ಯ ಮೂಕನಾಗುತ್ತಾನೆ. ಈ ನಿಟ್ಟಿನಲ್ಲಿ ಕಳೆದ 25 ವರ್ಷಗಳಿಂದ ಪುಸ್ತಕಗಳನ್ನು ಜನರಿಗೆ ಮುಟ್ಟಿಸುವ ಕಾರ್ಯವನ್ನು ಕನ್ನಡ ಪುಸ್ತಕ ಪ್ರಾಧಿಕಾರ ಮಾಡುತ್ತಾ ಬಂದಿದೆ. ಅದೇ ರೀತಿಯಲ್ಲಿ ಸಾಹಿತಿಗಳು ಇರುವಲ್ಲಿಗೆ ಹೋಗುವ ಮೂಲಕ ಕಣ್ಣಿಗೆ ಕಾಣದ ಸಾಹಿತ್ಯವನ್ನು ಹೆಕ್ಕಿ ತೆಗೆಯಬೇಕಾದ ಕೆಲಸ ಪ್ರಾಧಿಕಾರ ಮಾಡಬೇಕು. ಅದಕ್ಕೆ ಅಗತ್ಯವಾದ ಸಹಕಾರವನ್ನು ಇಲಾಖೆ ನೀಡುತ್ತದೆ ಎಂದು ಜಯಮಾಲ ಹೇಳಿದರು.

ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಮಾತನಾಡಿ, ಬಿಬಿಎಂಪಿ 450 ಕೋಟಿ ರೂ. ಗ್ರಂಥಾಲಯದ ಕರ ವಸೂಲಿ ಮಾಡಿ ತನ್ನ ಬಳಿಯೇ ಇಟ್ಟುಕೊಂಡಿದ್ದು, ಈ ಹಣ ನೀಡಿದರೆ ಗ್ರಂಥಾಲಯ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದ ಯೋಜನೆಗೆ ನೆರವಾಗುತ್ತದೆ. ಯಾವ ಉದ್ದೇಶಕ್ಕೆ ಕರ ವಸೂಲಿ ಮಾಡಲಾಗಿದೆಯೋ ಅದು ಈಡೇರಿದಂತಾಗುತ್ತದೆ. ಪ್ರಕಾಶೋದ್ಯಮ ಎಲ್ಲಿ ಬೆಳೆಯುವುದಿಲ್ಲ ಅಲ್ಲಿ ಭಾಷೆ ಬೆಳೆಯುವುದಿಲ್ಲ. ಕನ್ನಡ ಲೇಖಕರನ್ನು ಬೆಳಸಬೇಕು ಎಂದು ಅಭಿಪ್ರಾಯಪಟ್ಟರು.

ಕ್ರಾಂತಿಯಲ್ಲಿ ಪುಸ್ತಕಗಳ ಪಾತ್ರ ಅಪಾರ: ಭಾರತ ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ ಸೇರಿದಂತೆ ವಿಶ್ವದ ಚರಿತ್ರೆಯಲ್ಲಿ ನಡೆದಿರುವ ಬಹುದೊಡ್ಡ ಕ್ರಾಂತಿಗಳಲ್ಲಿ ಪುಸ್ತಕಗಳ ಪಾತ್ರ ಮಹತ್ವವಾದುದಾಗಿದೆ. ಎಲ್ಲಾ ಗ್ರಾಮ ಪಂಚಾಯತ್ ನಲ್ಲಿ ಗ್ರಂಥಾಲಯ ಆರಂಭಿಸಬೇಕು. ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ, ಡಿಜಿಟಲ್ ಆಧಾರಿತ ಗ್ರಂಥಾಲಯ ಜೊತೆಗೆ ಎಲ್ಲಾ ಪುಸ್ತಕ ದೊರೆಯುವಂತೆ ನೋಡಿಕೊಳ್ಳಬೇಕು. ವಿದ್ಯುನ್ಮಾನ ಮಾಧ್ಯಮದಿಂದ ಪುಸ್ತಕ ಓದುವವರ ಸಂಖ್ಯೆ ಕಡಿಮೆ ಆಗಿದೆ ಎನ್ನುವುದು ಸತ್ಯಕ್ಕೆ ದೂರವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಲೇಖಕರು, ಪುಸ್ತಕಗಳು ಹೊರಬರುತ್ತಿವೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ಮಲ್ಲೇಪುರಂ ಜಿ.ವೆಂಕಟೇಶ್, ಡಾ.ಸಿದ್ದಲಿಂಗಯ್ಯರವರನ್ನು ಸನ್ಮಾನಿಸಲಾಯಿತು ಹಾಗೂ 33 ಲೇಖಕರು ರಚಿಸಿರುವ 32 ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ವೇದಿಕೆಯಲ್ಲಿ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಪೋಸ್ಟ್ ಮಾಸ್ಟರ್ ಜನರಲ್ ಡಾ.ಚಾರ್ಲ್ಸ್ ಲೋಬೊ, ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ್ ಕುಮಾರ್ ಹೊಸಮನೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

ಪುಸ್ತಕವನ್ನು ಯಾರು ಪ್ರೀತಿಸುವುದಿಲ್ಲವೋ ಅವರು ದೇಶವನ್ನು ಪ್ರೀತಿಸಲಾರರು. ಯಾವ ಸಾಧಕನೂ ಸಾಹಿತಿಯಾಗದೆ ಸಾಧಕನಾಗಿಲ್ಲ. ಯುಪಿಎ ಸರಕಾರ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿದ್ದು, ಅದರ ಅನುಸಾರವಾಗಿ ಶೇ.5ರಷ್ಟು ಮಾತ್ರ ಇದರ ಪ್ರಯೋಜನ ಪಡೆಯಲಾಗಿದೆ. ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದ ಮಾಹಿತಿ ದಾಖಲಾಗಬೇಕು. ಕೇಂದ್ರ ಸರಕಾರ ಈ ಬಗ್ಗೆ ಶಿಾರಸು ಮಾಡಬೇಕು.

-ಎಂ.ವೀರಪ್ಪ ಮೊಯ್ಲಿ, ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News