ಮಾಧ್ಯಮಗಳು ಸಾಹಿತ್ಯವನ್ನು ಬಹಿಷ್ಕರಿಸಿವೆ: ಪ್ರೊ.ಅರವಿಂದ ಮಾಲಗತ್ತಿ

Update: 2018-08-29 16:02 GMT

ಬೆಂಗಳೂರು, ಆ.29: ಇವತ್ತಿನ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಕತೆ, ಕಾದಂಬರಿ, ಕಾವ್ಯ ಪ್ರಕಾರದ ಸಾಹಿತ್ಯವನ್ನು ಬಹಿಷ್ಕರಿಸಿವೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪ್ರೊ.ಅರವಿಂದ ಮಾಲಗತ್ತಿ ಆರೋಪಿಸಿದರು.

ಬುಧವಾರ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಬಿಷಪ್ ಕಾಟನ್ ಮಹಿಳಾ ಕ್ರಿಶ್ಚಿಯನ್ ಕಾಲೇಜು ಆಯೋಜಿಸಿದ್ದ ‘ಮಾಧ್ಯಮ ಮತ್ತು ಕನ್ನಡ ಸಾಹಿತ್ಯ’ ಕುರಿತ ವಿಚಾರ ಸಂಕಿರಣದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕನ್ನಡ ದಿನ ಪತ್ರಿಕೆಗಳ ಪ್ರಾರಂಭದ ದಶಕಗಳಲ್ಲಿ ಸಾಹಿತ್ಯವೆ ಕೇಂದ್ರವಾಗಿತ್ತು. ಕಾದಂಬರಿಯನ್ನು ಸರಣಿ ರೂಪದಲ್ಲಿ ಪ್ರಕಟಿಸುತ್ತಿದ್ದರು. ರವಿವಾರದಂದು ದಿನ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದ ಕತೆ, ಕಾವ್ಯಗಳಿಗಾಗಿ ಓದುಗರು ಕಾಯುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಪ್ರಕಾರವನ್ನು ಬಹಿಷ್ಕರಿಸುವ ಹಂತಕ್ಕೆ ಮುಟ್ಟಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡದ ವೈಚಾರಿಕ ಸಾಹಿತ್ಯಕ್ಕೆ ದಿನ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ಅಂಕಣ ಬರಹಗಳು ಮಹತ್ವದ ಕೊಡುಗೆ ನೀಡಿವೆ. ಸಂದರ್ಭಕ್ಕೆ ಅನುಗುಣವಾಗಿ ದಿನಪತ್ರಿಕೆಗಳು ಬದಲಾಗಬೇಕಾದ ಅನಿವಾರ್ಯತೆಯನ್ನು ಒಪ್ಪಿಕೊಳ್ಳಬೇಕಾದರೂ ಸಾಹಿತ್ಯವನ್ನು ನಿರ್ಲಕ್ಷಿಸಿ ಬದಲಾವಣೆಗೆ ಒಡ್ಡಿಕೊಳ್ಳುವುದು ಒಳ್ಳೆಯ ಲಕ್ಷಣವಲ್ಲವೆಂದು ಅವರು ಅಭಿಪ್ರಾಯಿಸಿದರು.

ಇವತ್ತಿನ ದಿನಪತ್ರಿಕೆಗಳು ರೂಪಗೊಳ್ಳುತ್ತಿರುವುದನ್ನು ಗಮನಿಸಿದರೆ, ಸಮಾಜದ ಬದಲಾವಣೆಯಲ್ಲಿ ಮಹತ್ವದ ಪಾತ್ರವಹಿಸುವುದಿಲ್ಲ. ಸಮಾಜದಲ್ಲಿ ಹೊಸ ತಿರುವನ್ನು ಕೊಡಲು ಸಾಧ್ಯವಾಗುತ್ತಿಲ್ಲ. ದಿನ ಪತ್ರಿಕೆಗಳಿಗಿಂತ ಸಾಹಿತ್ಯ ಪತ್ರಿಕೆಗಳು ಮಹತ್ವದ ವಿಷಯಗಳನ್ನು ಕುರಿತು ಗಂಭೀರವಾಗಿ ಚರ್ಚಿಸಿ, ಅಭಿಪ್ರಾಯ ಮೂಡಿಸುವಲ್ಲಿ ಯಶಸ್ವಿಯಾಗುತ್ತಿವೆ ಎಂದು ಅವರು ಅಭಿಪ್ರಾಯಿಸಿದರು.

ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಮಾತನಾಡಿ, ಮಾಧ್ಯಮದಲ್ಲಿ ಕಾರ್ಯನಿರ್ವಹಿಸುವವರಿಗೆ ಭಾಷೆಯ ಮಹತ್ವ ಅರಿವಿರಬೇಕಾಗುತ್ತದೆ. ಪದಗಳ ಅರ್ಥ, ಒಳಾರ್ಥಗಳ ಹಿನ್ನೆಲೆ ಗೊತ್ತಿಲ್ಲದಿದ್ದರೆ ಸುದ್ದಿ ಮಾಡುವಾಗ ಸಮಸ್ಯೆಗೆ ಈಡಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಾಧ್ಯಮದವರಿಗೆ ಸಾಹಿತ್ಯದ ಜ್ಞಾನವಿರಬೇಕು. ನನ್ನ ಪ್ರಕಾರ ಸಾಹಿತ್ಯವೆಂದರೆ, ವಿವೇಕ, ಜ್ಞಾನ, ಜೀವನ ಮೌಲ್ಯವೆ ಆಗಿದೆ. ಹೀಗಾಗಿ ಪ್ರತಿಯೊಬ್ಬರ ವ್ಯಕ್ತಿತ್ವವು ಹೇಗೆ ಭಿನ್ನವೊ ಹಾಗೆಯೆ ಭಾಷೆಯು ಭಿನ್ನವಾಗಿರುತ್ತದೆ. ಹೀಗಾಗಿ ಭಾಷೆಗಳನ್ನು ಚೆನ್ನಾಗಿ ಕಲಿತವನು ಜಗತ್ತಿನ ವಿವಿಧ ಸಂಸ್ಕೃತಿಯನ್ನು ಅರಿಯಲು ಸಾಧ್ಯವಾಗುತ್ತದೆ ಎಂದು ಅವರು ವಿವರಿಸಿದರು.

ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರಗಳು ಮುಖ್ಯವಲ್ಲ. ಅವರ ಭಾಷೆಯ ಸಾಮರ್ಥ್ಯ ಎಷ್ಟಿದೆ. ಅವರು ಏನೆಲ್ಲ ಓದಿದ್ದಾರೆ, ಬರೆದಿದ್ದಾರೆ ಎಂಬುದಷ್ಟೆ ಅರ್ಹತೆಯಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಭಾಷೆಯನ್ನು ಶುದ್ಧವಾಗಿ ಬರೆಯಬೇಕು ಹಾಗೂ ಸಾಹಿತ್ಯದ ಕುರಿತು ಆಸಕ್ತಿಯನ್ನು ಬೆಳೆಸಿಕೊಳ್ಳಬೇಕೆಂದು ಅವರು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಬಿಷಪ್ ಕಾಟನ್ ಮಹಿಳಾ ಕ್ರಿಶ್ಚಿಯನ್ ಕಾಲೇಜು ಪ್ರಾಂಶುಪಾಲೆ ಪ್ರೊ.ಎಸ್ತಾರ್ ಪ್ರಸನ್ನಕುಮಾರ್, ಬಿಷಪ್ ಡಾ.ಪ್ರಸನ್ನಕುಮಾರ್ ಸಾಮ್ಯುಯೆಲ್, ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಎನ್.ಕರಿಯಪ್ಪ, ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಛಾಯಾ ಅನಿಲ್‌ಕುಮಾರ್ ಮತ್ತಿತರರಿದ್ದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಮಹಿಳೆಯರು ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದಕ್ಕಾಗಿ ‘ಚಕೋರ’ ಎಂಬ ಕಾರ್ಯಕ್ರಮವಿದ್ದು, ಪ್ರತಿ ತಿಂಗಳು ಸಾಹಿತ್ಯ ಚಟುವಟಿಕೆಗಳನ್ನು ನಡೆಸುವ ಮಹಿಳಾ ತಂಡಕ್ಕೆ ಆರ್ಥಿಕ ಸಹಾಯ ಮಾಡಲಾಗುತ್ತದೆ.

-ಪ್ರೊ.ಅರವಿಂದ ಮಾಲಗತ್ತಿ, ಅಧ್ಯಕ್ಷ, ಕರ್ನಾಟಕ ಸಾಹಿತ್ಯ ಅಕಾಡೆಮಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News