​ಒಡಿಶಾ ರಾಜ್ಯಪಾಲರ ಹರ್ಯಾಣ ಪ್ರವಾಸಕ್ಕೆ ಬರೋಬ್ಬರಿ 46 ಲಕ್ಷ ರೂ. ವೆಚ್ಚ!

Update: 2018-08-30 04:20 GMT

ಭುವನೇಶ್ವರ, ಆ.30: ಒಡಿಶಾ ರಾಜ್ಯಪಾಲ ಗಣೇಶಿಲಾಲ್ ಒಂದು ಬಾರಿ ಹರ್ಯಾಣಕ್ಕೆ ಹೋಗಿಬರಲು ಬರೋಬ್ಬರಿ 46 ಲಕ್ಷ ರೂ. ವೆಚ್ಚವಾಗಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಯಿಂದ ಬಹಿರಂಗವಾಗಿದೆ.

ಹರ್ಯಾಣಕ್ಕೆ ಚಾರ್ಟರ್ಡ್ ವಿಮಾನದಲ್ಲಿ ತೆರಳಿದ ರಾಜ್ಯಪಾಲರು ಬಳಿಕ ಹೆಲಿಕಾಪ್ಟರ್ ಬಳಸಿಕೊಂಡಿದ್ದರು. ಇದು ಹಿಂದಿನ ರಾಜ್ಯಪಾಲ ಎಸ್.ಸಿ.ಝಮೀರ್ ತಮ್ಮ ಐದು ವರ್ಷಗಳ ಅವಧಿಯಲ್ಲಿ ಮಾಡಿದ ಒಟ್ಟು ಪ್ರವಾಸ ವೆಚ್ಚಕ್ಕಿಂತಲೂ ಅಧಿಕ ಎನ್ನುವ ಅಂಶವೂ ಬೆಳಕಿಗೆ ಬಂದಿದೆ. ರಾಜ್ಯಪಾಲರ ವಾರ್ಷಿಕ ಪ್ರವಾಸ ವೆಚ್ಚಕ್ಕೆ 11 ಲಕ್ಷ ರೂ. ಮಾತ್ರ ಬಜೆಟ್ ಇದ್ದು, ಇದರ ನಾಲ್ಕು ಪಟ್ಟು ಒಂದೇ ಪ್ರವಾಸಕ್ಕೆ ವೆಚ್ಚವಾಗಿದೆ. ಇದನ್ನು ಸ್ವತಃ ರಾಜಭವನವೇ ಒಪ್ಪಿಕೊಂಡಿದೆ.

ಆದರೆ ಈ ಪ್ರವಾಸಕ್ಕೆ ರಾಷ್ಟ್ರಪತಿ ಭವನ ಮತ್ತು ಒಡಿಶಾ ಸರ್ಕಾರದಿಂದ ಮೊದಲೇ ಒಪ್ಪಿಗೆ ಪಡೆಯಲಾಗಿತ್ತು ಎಂದು ರಾಜಭವನ ಸಮರ್ಥಿಸಿಕೊಂಡಿದೆ. ಆದರೆ ಈ ಪ್ರವಾಸಕ್ಕೆ ಅನುಮೋದನೆ ನೀಡಲು ಏನು ಕಾರಣ ಎನ್ನುವುದು ಬಹಿರಂಗವಾಗಲಿಲ್ಲ.

2013ರಿಂದ 2018ರವರೆಗೆ ಒಡಿಶಾ ರಾಜ್ಯಪಾಲರಾಗಿದ್ದ ಝಮೀರ್, ಈ ಅವಧಿಯಲ್ಲಿ 30.72 ಲಕ್ಷ ರೂಪಾಯಿಯನ್ನು ಪ್ರಯಾಣಕ್ಕಾಗಿ ವೆಚ್ಚ ಮಾಡಿದ್ದರು. ಇದಕ್ಕೂ ಮುನ್ನ ರಾಜ್ಯಪಾಲರಾಗಿದ್ದ ಮುರಳೀಧರ ಚಂದ್ರಕಾಂತ ಭಾಂದಾರೆ 2007ರ ಆಗಸ್ಟ್‌ನಿಂದ 2013ರ ಮಾರ್ಚ್‌ವರೆಗೆ 51.21 ಲಕ್ಷ ರೂ. ವೆಚ್ಚ ಮಾಡಿದ್ದರು ಎಂದು ಆರ್‌ಟಿಐ ಪ್ರಶ್ನೆಗೆ ಉತ್ತರ ಲಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News