ಅಮಾನ್ಯಗೊಂಡ 99.30ರಷ್ಟು ನೋಟುಗಳು ವಾಪಸ್: ಹಾಗಾದರೆ ಕಪ್ಪುಹಣ ಎಲ್ಲಿ?

Update: 2018-08-30 07:44 GMT

ಹೊಸದಿಲ್ಲಿ, ಆ.30: ನೋಟು ಅಮಾನ್ಯೀಕರಣದ ಮೂಲಕ ಕಾಳಧನವನ್ನು ಹೊರ ಹಾಕುವ  ಪ್ರಧಾನಿ ನರೇಂದ್ರ ಮೋದಿಯವರ ಯತ್ನ ನಿರೀಕ್ಷಿತ ಫಲ ನೀಡಿಲ್ಲ, ಕಾಳಧನವೆಲ್ಲಿ ಎಂದು ವಿದೇಶಿ ಮಾಧ್ಯಮಗಳು ಪ್ರಶ್ನಿಸುತ್ತಿವೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ವರದಿಯಲ್ಲಿ ತಿಳಿಸಿದಂತೆ ಅಮಾನ್ಯೀಕರಣಗೊಂಡ ರೂ 500 ಹಾಗೂ ರೂ 1,000 ಮುಖಬೆಲೆಯ ನೋಟುಗಳ ಪೈಕಿ ಶೇ 99.30ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಹಿಂದಿರುಗಿದೆ. ನವೆಂಬರ್ 8, 2016ರಂದು ನೋಟು ಅಮಾನ್ಯೀಕರಣಗೊಳ್ಳುವ ಸಮಯದಲ್ಲಿ ಅರ್ಥವ್ಯವಸ್ಥೆಯಲ್ಲಿ ಚಲಾವಣೆಯಲ್ಲಿದ್ದ ರೂ 15.41 ಲಕ್ಷ ಕೋಟಿ ಮೌಲ್ಯದ  ರೂ 500 ಹಾಗೂ ರೂ 1000 ಮುಖಬೆಲೆಯ ನೋಟುಗಳ ಪೈಕಿ ರೂ 15.31 ಲಕ್ಷ ಕೋಟಿ ಮೌಲ್ಯದ ನೋಟುಗಳು ವಾಪಸಾಗಿವೆ. ಹೀಗಿರುವಾಗ ರೂ 10,720 ಕೋಟಿ ಮೌಲ್ಯದ ರದ್ದತಿಗೊಂಡ ನೋಟುಗಳು ವಾಪಸ್ ಆಗಿಲ್ಲ ಎಂದು ತಿಳಿದು ಬರುತ್ತದೆ. ಆದರೆ ಸರಕಾರ ಮಾತ್ರ  5 ಲಕ್ಷ  ಕೋಟಿ ಮೌಲ್ಯದ  ಕಾಳಧನ ವಾಪಸ್ ಬಾರದು ಎಂದು ಅಂದಾಜಿಸಿದ್ದರೂ ಹಾಗಾಗಿಲ್ಲ.

ಅಮಾನ್ಯೀಕರಣ ಸಂಪೂರ್ಣವಾಗಿ ವಿಫಲವಾಗಿದೆ ಎಂದು ವಿತ್ತ ಸಚಿವಾಲಯದ ಮಾಜಿ ಸಲಹೆಗಾರ ಹಾಗೂ   ಹೊಸದಿಲ್ಲಿಯ ಸೆಂಟರ್ ಫಾರ್ ಪಾಲಿಸಿ ಆಲ್ಟರ್ನೇಟಿವ್ಸ್ ಇದರ ಅಧ್ಯಕ್ಷ ಮೋಹನ್ ಗುರುಸ್ವಾಮಿ ಹೇಳುತ್ತಾರೆ. ಅಮಾನ್ಯೀಕರಣ ನಡೆಯದೇ ಇರುತ್ತಿದ್ದರೆ ನಮ್ಮ ಪ್ರಗತಿ ಪ್ರಮಾಣ ಇನ್ನೂ ಹೆಚ್ಚಾಗುತ್ತಿತ್ತು. ಇದೊಂದು ದೊಡ್ಡ ಪ್ರಮಾದವಾಗಿದ್ದು ಅದರ ರಾಜಕೀಯ ಪರಿಣಾಮಗಳನ್ನು ಎದುರಿಸಬೇಕಾಗಬಹುದು'' ಎಂದು ಅವರು  ಹೇಳಿದ್ದಾರೆ.

ಆದರೆ ಅಮಾನ್ಯೀಕರಣ ತನ್ನ ಉದ್ದೇಶ ಈಡೇರಿಸಲು ತಕ್ಕಷ್ಟು ಮಟ್ಟಿಗೆ ಸಹಕಾರಿಯಾಗಿದೆ ಎಂದು ವಿತ್ತ ಸಚಿವಾಲಯುದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ  ಸುಭಾಶ್ ಚಂದ್ರ ಗರ್ಗ್ ಹೇಳುತ್ತಾರೆ. ಚಲಾವಣೆಗೆಗೆ ತರಲಾದ ಹೊಸ ಫೀಚರ್ಸ್ ಹೊಂದಿದ ಹೊಸ ನೋಟುಗಳೂ ಕಾಳಧನವನ್ನು ನಿರ್ಮೂಲನೆಗೊಳಿಸಲು ಸಹಕಾರಿ ಎಂದು ಅವರು ತಿಳಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News