ಗೋರಖಪುರ: 500ಕ್ಕೂ ಹೆಚ್ಚು ಮಕ್ಕಳ ಸಾವಿಗೆ ಆಡಳಿತ ವೈಫಲ್ಯ ಕಾರಣ; ಹಸಿರು ಪೀಠ

Update: 2018-08-31 08:10 GMT

ಹೊಸದಿಲ್ಲಿ, ಆ.31: ರಪ್ತಿ ನದಿಗೆ ಮಾಲಿನ್ಯಕಾರಕಗಳನ್ನು ಬಿಡುಗಡೆಗೊಳಿಸುವುದನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳದ ಉತ್ತರ ಪ್ರದೇಶ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ರಾಷ್ಟ್ರೀಯ ಹಸಿರು ಪೀಠ, ‘ಆಡಳಿತದ ವೈಫಲ್ಯ'ದಿಂದಾಗಿ ಗೋರಖಪುರದಲ್ಲಿ 2014ರಲ್ಲಿ 500ಕ್ಕೂ ಹೆಚ್ಚು ಮಕ್ಕಳ ಸಾವು ಸಂಭವಿಸಿತ್ತು ಎಂದು ಹೇಳಿದೆ. ಪರಿಸ್ಥಿತಿಯ ಅವಲೋಕನಕ್ಕೆ ಉಸ್ತುವಾರಿ ಸಮಿತಿಯೊಂದನ್ನು ರಚಿಸುವುದಾಗಿಯೂ ಪೀಠ ಘೋಷಿಸಿದೆ.

ಕಾನೂನು ಸುವ್ಯವಸ್ಥೆಯ  ವೈಫಲ್ಯದ ಇಂದಿನ ಬಿಕ್ಕಟ್ಟಿನ ಸನ್ನಿವೇಶದಲ್ಲಿ ತುರ್ತಾಗಿ ಕ್ರಮ ಕೈಗೊಳ್ಳುವ ಕುರಿತಂತೆ ಉಸ್ತುವಾರಿ ನೋಡಿಕೊಳ್ಳಲು ಒಂದು ವಿಶ್ವಾಸಾರ್ಹ  ವ್ಯವಸ್ಥೆಯನ್ನು ಜಾರಿಗೊಳಿಸದೆ ಅನ್ಯ ಮಾರ್ಗವಿಲ್ಲ ಎಂದು ಹಸಿರು ಪೀಠದ ಅಧ್ಯಕ್ಷ ಜಸ್ಟಿಸ್ ಆದರ್ಶ್ ಕುಮಾರ್ ಗೋಯಲ್ ಹೇಳಿದ್ದಾರೆ.

ಪರಿಸರ ಸಂರಕ್ಷಿಸಲು ಆಡಳಿತ ವಿಫಲವಾಗಿದೆ ಹಾಗೂ ಕಳೆದ ನಾಲ್ಕು ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಬಹಳಷ್ಟು ಕಡಿಮೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದೂ ಅವರು ಹೇಳಿದರು. ಸರಕಾರದ ಅನಾಸ್ಥೆಯಿಂದ ತೊಂದರೆಗೀಡಾದವರಿಗೆ ಪುನರ್ವಸತಿ ಕಲ್ಪಿಸಬೇಕಿದೆ ಎಂದೂ ಪೀಠ ಹೇಳಿದೆ.

ಹಸಿರು ಪೀಠ ರಚಿಸಿರುವ ಸಮಿತಿಯಲ್ಲಿ ಮಾಜಿ ನ್ಯಾಯಾಧೀಶ ಜಸ್ಟಿಸ್ ದೇವಿ ಪ್ರಸಾದ್ ಸಿಂಗ್, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪ್ರತಿನಿಧಿ ಹಾಗೂ ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪ್ರತಿನಿಧಿ ಡಾ.ಎ.ಬಿ. ಅಕೋಲ್ಕರ್  ಇದ್ದಾರೆ.

ಸಮಿತಿಯು ಕೈಗಾರಿಕೆಗಳು ಇಟಿಪಿ, ಎಸ್‍ಟಿಪಿ,  ಮುಂತಾದೆಡೆ ಪರಿಶೀಲನೆ ಕೈಗೊಳ್ಳಲಿದ್ದು ವಿವಿಧ ಮಾದರಿಗಳನ್ನು ಸಂಗ್ರಹಿಸಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಕಳುಹಿಸಲಿದೆ.

ವಿವಿಧೆಡೆ ಸಮಿತಿಯ ಸದಸ್ಯರ ಪ್ರಯಾಣಕ್ಕೆ ಸೂಕ್ತ ಏರ್ಪಾಟುಗಳನ್ನು ಮಾಡುವಂತೆಯೂ ಹಸಿರು ಪೀಠ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿಗೆ ಸೂಚಿನೆ ನೀಡಿದೆ. ತ್ಯಾಜ್ಯ ನಿರ್ವಹಣೆಗೆ ಕಾರ್ಯಯೋಜನೆ ಸಿದ್ಧಿಪಡಿಸಲು ಸೂಕ್ತ ಕ್ರಮಗಳನ್ನೂ ಸಮಿತಿ ಕೈಗೊಳ್ಳುವುದು ಎಂದು ಪೀಠ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News