​ಕಾಶ್ಮೀರ ಉಗ್ರರಿಂದ ಪೊಲೀಸ್ ಅಧಿಕಾರಿಗಳ ಕುಟುಂಬದವರ ಅಪಹರಣ

Update: 2018-08-31 19:04 GMT

ಶ್ರೀನಗರ, ಆ. 31: ದಕ್ಷಿಣ ಕಾಶ್ಮೀರದ ವಿವಿದ ಸ್ಥಳಗಳಿಂದ ಜಮ್ಮು ಹಾಗೂ ಕಾಶ್ಮೀರ ಪೊಲೀಸ್ ಅಧಿಕಾರಿಗಳ ಕುಟಂಬದ 10 ಮಂದಿ ಸದಸ್ಯರನ್ನು ಉಗ್ರರು ಅಪಹರಿಸಿದ್ದಾರೆ.

ಅಪಹೃತ 10 ಮಂದಿಯಲ್ಲಿ 9 ಮಂದಿಯನ್ನು ಝುಬೈರ್ ಅಹ್ಮದ್ ಭಟ್, ಆರಿಫ್ ಅಹ್ಮದ್ ಸಂಕರ್, ಪೈಝಾನ್ ಅಹ್ಮದ್ ಮಕ್ರೋ, ಸುಮಾರ್ ಅಹ್ಮದ್ ರಾಥರ್, ಗೋವರ್ ಅಹ್ಮದ್ ಮಲ್ಲಿಕ್, ಝಾಹೋರ್ ಅಹ್ಮದ್ ಝರ್ಗಾರ್, ಮುಹಮ್ಮದ್ ಶಫಿ, ನಸೀರ್ ಅಹ್ಮದ್ ಮಿರ್ ಮಿದೂರಾ ಹಾಗೂ ಆದಾನ್ ಅಶ್ರಫ್ ಶಾಹ್ ಎಂದು ಗುರುತಿಸಲಾಗಿದೆ. ಕಾಶ್ಮೀರ ಕಣಿವೆಯಲ್ಲಿರುವ ಪೊಲೀಸ್ ಅಧಿಕಾರಿಗಳ ಮನೆಗಳ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ ಹಾಗೂ ಕುಟುಂಬದ ಸದಸ್ಯರನ್ನು ಅಪಹರಿಸಿದ್ದಾರೆ. ಶೋಪಿಯಾನ್, ಕುಲ್ಗಾಂವ್, ಅನಂತ್‌ನಾಗ್, ಪುಲ್ವಾಮಾ ಹಾಗೂ ಅವಂತಿಪೋರ ಜಿಲ್ಲೆಗಳಿಂದ ಉಗ್ರರು ಗುರುವಾರ ರಾತ್ರಿ ಅವರನ್ನು ಅಪಹರಿಸಿದ್ದಾರೆ. ಇವರಲ್ಲಿ ಹೆಚ್ಚಿನವರು ಪೊಲೀಸ್ ಅಧಿಕಾರಿಗಳ ತಂದೆ, ಸಹೋದರ ಹಾಗೂ ಪುತ್ರ.

ಉಗ್ರರು ಅಪಹರಿಸಿದವರಲ್ಲಿ ಓರ್ವ ಜಮ್ಮು ಹಾಗೂ ಕಾಶ್ಮೀರ ಡಿಎಸ್‌ಪಿ ಮುಹಮ್ಮದ್ ಸಯ್ಯದ್ ಶಾಹ್ ಅವರ ಸೋದರಳಿಯ. ಅವರನ್ನು ಆದಂ ಅಶ್ರಫ್ ಶಾ ಎಂದು ಗುರುತಿಸಲಾಗಿದೆ. ಇವರನ್ನು ಶೋಪಿಯಾನದಿಂದ ಗುರುವಾರ ರಾತ್ರಿ ಅಪಹರಿಸಲಾಗಿದೆ. ಕಳೆದ ಒಂದು ವಾರದಲ್ಲಿ ಮೊದಲಿಗೆ ಪೊಲೀಸ್ ಅಧಿಕಾರಿಯೊಬ್ಬರ ಪುತ್ರ ಆಸಿಫ್ ರಾಥರ್ ಅನ್ನು ಆಗಸ್ಟ್ 28ರಂದು ಉಗ್ರರು ಅಪಹರಿಸಿದ್ದರು. ಅಪಹರಿಸಿದ ರಾಥರ್ ಅವರನ್ನು ದಕ್ಷಿಣ ಕಾಶ್ಮೀರದ ಟ್ರಾಲ್‌ಗೆ ಉಗ್ರರು ಕರೆದೊಯ್ದಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಪೊಲೀಸರು ಸಾಮೂಹಿಕ ದಾಳಿ ನಡೆಸಿದ್ದರು. ಈ ಸಂದರ್ಭ ದಕ್ಷಿಣ ಕಾಶ್ಮೀರದಿಂದ ಸಕ್ರಿಯ ಉಗ್ರರ ಕುಟುಂಬದ ಸದಸ್ಯರು ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು. ಹಿಜ್ಬುಲ್ ಮುಝಾಹಿದ್ದೀನ್‌ನ ಕಾರ್ಯಾಚರಣೆ ಕಮಾಂಡರ್ ರಿಯಾಝ್ ನೈಕೂ ಅವರನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಇದೇ ಸಂದರ್ಭ ಆಕಸ್ಮಿಕವಾಗಿ ಭಯೋತ್ಪಾದನೆಗೆ ಹಣದ ನೆರವು ನೀಡುತ್ತಿರುವ ಪ್ರಕರಣದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ವರಿಷ್ಠ ಸಯ್ಯದ್ ಸಲಾಲುದ್ದೀನ್ ಪುತ್ರ ಸಯ್ಯದ್ ಶಕೀಲ್ ಅಹ್ಮದ್‌ನನ್ನು ಎನ್‌ಐಎ ಬಂಧಿಸಿತ್ತು. ಇದರ ಬಳಿಕ ಕಾಶ್ಮೀರದಲ್ಲಿ ಗುರುವಾರ ಪೊಲೀಸ್ ಅಧಿಕಾರಿಗಳ ಕುಟುಂಬದ ಹಲವು ಸದಸ್ಯರನನ್ನು ಉಗ್ರರು ಅಪಹರಿಸಿದ್ದರು.

ಅಪಹೃತರಲ್ಲಿ ಮೂರು ಮಂದಿಯ ಬಿಡುಗಡೆ

ದಕ್ಷಿಣ ಕಾಶ್ಮೀರದಿಂದ ಗುರುವಾರ ಸಂಜೆ ಉಗ್ರರು ಅಪಹರಿಸಿದ್ದ ಪೊಲೀಸ್‌ರ ಕುಟುಂಬಗಳ 11 ಮಂದಿ ಸದಸ್ಯರಲ್ಲಿ 3 ಮಂದಿಯನ್ನು ಬಿಡುಗಡೆ ಮಾಡಿದ್ದಾರೆ. ಭಯೋತ್ಪಾದಕರ ಕುಟುಂಬದ ಸುಮಾರು 12 ಮಂದಿ ಸದಸ್ಯರನ್ನು ಜಮ್ಮು ಹಾಗೂ ಕಾಶ್ಮೀರ ಪೊಲೀಸರು ಬಿಡುಗಡೆ ಮಾಡಿದ ಗಂಟೆಗಳ ಬಳಿಕ ಉಗ್ರರು ಮೂವರನ್ನು ಬಿಡುಗಡೆ ಮಾಡಿದ್ದಾರೆ. ಬುಧವಾರ ನಡೆದ ಪ್ರಮುಖ ಭಯೋತ್ಪಾದಕ ದಾಳಿಯಲ್ಲಿ ಉಗ್ರರು ನಾಲ್ಕು ಮಂದಿ ಪೊಲೀಸರನ್ನು ಹತ್ಯೆಗೈದಿದ್ದರು. ಇದರಿಂದ ಆಕ್ರೋಶಿತರಾದ ಪೊಲೀಸರು ದಾಳಿ ನಡೆಸಿ ಉಗ್ರರ ಮನೆಗಳನ್ನು ಧ್ವಂಸ ಮಾಡಿದ್ದರು. ಅಲ್ಲದೆ ಹಿಜ್ಬುಲ್ ಮುಜಾಹಿದ್ದೀನ್ ಸ್ವಘೋಷಿತ ಕಮಾಂಡರ್ ರಿಯಾಝ್ ನೈಕೂ ತಂದೆ ಅಸಾದುಲ್ಲಾ ನೈಕೂ ಸಹಿತ ಉಗ್ರರ ಹಲವು ಸಂಬಂಧಿಕರನ್ನು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News