ತಾರತಮ್ಯದ ವಿರುದ್ಧ ಪ್ರಾಥಮಿಕ ಹಂತದಿಂದಲೇ ಜಾಗೃತಿ ಮೂಡಿಸಬೇಕು: ಎಸ್.ವಿ.ರಂಗನಾಥ್

Update: 2018-08-31 14:13 GMT

ಬೆಂಗಳೂರು, ಆ.31: ಪ್ರಾಥಮಿಕ ಶಿಕ್ಷಣ ನೀಡುವ ಹಂತದಿಂದಲೇ ಮಹಿಳೆಯರಿಗೆ ತಾರತಮ್ಯ ಆರಂಭವಾಗುತ್ತಿದ್ದು, ಇಲ್ಲಿಂದಲೇ ಬದಲಾವಣೆ ಮಾಡುವ ಪ್ರವೃತ್ತಿ ಬೆಳೆಯಬೇಕು ಎಂದು ರಾಜ್ಯ ಸರಕಾರದ ನಿವೃತ್ತ ಪ್ರಧಾನ ಕಾರ್ಯದರ್ಶಿ ಎಸ್.ವಿ ರಂಗನಾಥ್ ತಿಳಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದಲ್ಲಿ ಆಯೋಜಿಸಿದ್ದ ‘ರಾಜ್ಯ ಮಹಿಳಾ ಸಬಲೀಕರಣ ಕಾರ್ಯನೀತಿ’ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಾಥಮಿಕ ಶಿಕ್ಷಣ ನೀಡುವ ಸಂದರ್ಭದಲ್ಲಿ ಗಂಡು ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿಸುವ ವ್ಯವಸ್ಥಿತವಾದ ಹುನ್ನಾರ ನಡೆಯುತ್ತಿದೆ. ಹೀಗಾಗಿ, ಇಲ್ಲಿಂದಲೇ ಎಲ್ಲರೂ ಸಮಾನರು ಎಂಬ ಮನೋಭಾವವನ್ನು ಬೆಳೆಸುವಂತಾಗಬೇಕು ಎಂದು ಹೇಳಿದರು.

ಇಂದು ಹಲವಾರು ಶಿಕ್ಷಣವಂಚಿತ ಮಕ್ಕಳು ಧೈರ್ಯ, ವಿಶ್ವಾಸದಿಂದ ಜೀವನ ರೂಪಿಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ಆದುದರಿಂದಾಗಿ ಸರಕಾರ ಮಹಿಳಾ ಸಬಲೀಕರಣ ಹಾಗೂ ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದಂತೆ ತಂದಿರುವ ಕಾಯ್ದೆಗಳನ್ನು ಅಗತ್ಯ ತಿದ್ದುಪಡಿಗೊಳಿಸಿ ಅನುಷ್ಠಾನ ಮಾಡಬೇಕು ಎಂದು ಮನವಿ ಮಾಡಿದರು.

ಸ್ವಾತಂತ್ರ ಬಂದಾಗಿನಿಂದಲೂ ಮಹಿಳಾ ತಾರತಮ್ಯ ನಡೆಯುತ್ತಿದೆ. ಅದನ್ನು ಹೋಗಲಾಡಿಸಲು ಎಲ್ಲರೂ ಹೊರಾಡಬೇಕಿದೆ. ಈ ನಿಟ್ಟಿನಲ್ಲಿ ಮುಂದಿನ ಹತ್ತು ವರ್ಷದಲ್ಲಿ ದೇಶದಲ್ಲಿ ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿ ಭಾಗವಹಿಸಲು ಪ್ರೋತ್ಸಾಹ, ಸೌಲಭ್ಯ ನೀಡಿದರೆ, ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಾರೆ ಎಂದು ಅಭಿಪ್ರಾಯಪಟ್ಟರು.

ಅಮೆರಿಕಾ, ಯುರೋಪ್, ಚೀನಾ, ಜಪಾನ್ ಸೇರಿದಂತೆ ಹಲವು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರನ್ನು ಪಾಲುದಾರರನ್ನಾಗಿ ಮಾಡಿಕೊಳ್ಳಲಾಗಿದೆ. ಎಲ್ಲರಿಗೂ ಮುಕ್ತವಾದ ಅವಕಾಶ ನೀಡಲಾಗಿದೆ ಎಂದ ಅವರು, 1972ರಲ್ಲಿ ಸೈಕ್ಲೋನ್ ಚಂಡಮಾರುತ ಉಂಟಾಗಿದ್ದ ಬಾಂಗ್ಲಾ ದೇಶದ ಜಿಡಿಪಿ ಭಾರತದ ಅರ್ಧದಷ್ಟಿದೆ. ಆದರೂ ಕಳೆದ ಇಪ್ಪತ್ತು ವರ್ಷದಲ್ಲಿ ಬಾಂಗ್ಲಾದಲ್ಲಿ ಮಹಿಳೆಯರಿಗೆ ತಕ್ಕಮಟ್ಟಿನ ಪ್ರೋತ್ಸಾಹ ನೀಡುತ್ತ ಭಾರತಕ್ಕಿಂತ ಮುಂದಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಮಾತನಾಡಿ, ಮಹಿಳಾ ಸಬಲೀಕರಣದ ಜತೆಗೆ ಮಕ್ಕಳು ಹುಟ್ಟಿನಿಂದಲೂ ಕೆಲ ಪೌಷ್ಠಿಕಾಂಶಗಳ ಕೊರತೆಯ ಸಮಸ್ಯೆ ಅನುಭವಿಸುತ್ತಿದ್ದಾರೆ. ಶಿಶುವಿನ ಹುಟ್ಟಿನಿಂದ 1 ಸಾವಿರ ದಿನಗಳವರೆಗೆ ಅದರತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಡ ಮಕ್ಕಳು ಅಪೌಷ್ಠಿಕತೆಗೆ ತುತ್ತಾಗುತ್ತಿದ್ದಾರೆ. ಐದು ವರ್ಷದ ಒಳಗಿನ 159 ಮಿಲಿಯನ್ ಮಕ್ಕಳಲ್ಲಿ ನಾಲ್ಕರಲ್ಲಿ ಒಬ್ಬರಂತೆ ಅಪೌಷ್ಠಿಕತೆಗೆ ಗುರಿಯಾಗಿದ್ದಾರೆ. ಆದುದರಿಂದ ಮುಂದಿನ ವರ್ಷಗಳಲ್ಲಿ ರಾಜ್ಯದಲ್ಲಿ ಅಪೌಷ್ಠಿಕತೆಯ ಕೊರತೆ ಕಡಿಮೆ ಮಾಡುವ ಗುರಿಯನ್ನು ರಾಜ್ಯ ಸರಕಾರ ಹೊಂದಿದೆ. ಪ್ರಮುಖವಾಗಿ ಬದುಕು ರೂಪಿಸಿಕೊಳ್ಳಲು ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಮುಖ್ಯ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News