ಅನುವಾದದ ಮೂಲಕ ಸಾಹಿತ್ಯ ಮರುಸೃಷ್ಟಿಯಾಗಬೇಕು: ಡಾ.ಚಂದ್ರಶೇಖರ ಕಂಬಾರ

Update: 2018-08-31 16:12 GMT

ಬೆಂಗಳೂರು, ಆ.31: ಅಕ್ಷರದಿಂದ ಅಕ್ಷರಕ್ಕೆ ಭಾಷಾಂತರದ ಬದಲಿಗೆ, ಮೂಲ ಕೃತಿಯ ಆಶಯಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಅನುವಾದದ ಮೂಲಕ ಸಾಹಿತ್ಯವನ್ನು ಮರುಸೃಷ್ಟಿ ಮಾಡಬೇಕು ಎಂದು ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ್ ಕಂಬಾರ ಅಭಿಪ್ರಾಯಿಸಿದ್ದಾರೆ.

ಶುಕ್ರವಾರ ನಗರದ ಸಾಹಿತ್ಯ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ ‘ಆಧುನಿಕ ಭಾಷಾಂತರ: ಹೊಸ ಸವಾಲುಗಳು’ ವಿಷಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದಿನ ಅನುವಾದಕರು ಅಕ್ಷರದಿಂದ ಅಕ್ಷರಕ್ಕೆ ಭಾಷಾಂತರ ಮಾಡಿದರೆ ಉತ್ತಮ ಬರಹ ಎಂದುಕೊಳ್ಳುತ್ತಾರೆ. ಆದರೆ, ದೂರ ಹೋಗಿ ಅದನ್ನು ಭಿನ್ನವಾಗಿ ಮರುಸೃಷ್ಟಿ ಮಾಡುವುದು ಅತ್ಯುತ್ತಮ ಬರಹ ಎನಿಸಿಕೊಳ್ಳುತ್ತದೆ ಎಂದು ಹೇಳಿದರು.

ಅನುವಾದಕರು ತಮಗೆ ಅಗತ್ಯಕ್ಕೆ ತಕ್ಕಂತೆ ಅನುವಾದ ಮಾಡುವ ಬದಲಿಗೆ, ಮೂಲ ಆಶಯವನ್ನು ಅನುವಾದಿಸಬೇಕು. ಅನುವಾದ ಮಾಡುವುದು ಎಂದರೆ ನಾವು ಒಂದು ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವುದು ಅಥವಾ ನಮ್ಮ ಸಂಸ್ಕೃತಿಯನ್ನು ಮತ್ತೊಂದು ಸಮುದಾಯಕ್ಕೆ, ಜನಾಂಗಕ್ಕೆ ಅರ್ಥ ಮಾಡಿಸುವುದು. ಈ ನಿಟ್ಟಿನಲ್ಲಿ ನಮ್ಮಲ್ಲಿನ ಕೃತಿಗಳು ವಿದೇಶದಲ್ಲಿಯೂ, ಅಲ್ಲಿನ ಕೃತಿಗಳು ನಮ್ಮಲ್ಲಿಯೂ ಅನುವಾದಗೊಂಡರೆ ಎರಡೂ ದೇಶಗಳೊಂದಿಗೆ ಸಂವಹನಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಅನುವಾದಕ ಎಸ್.ಆರ್.ರಾಮಕೃಷ್ಣ ಮಾತನಾಡಿ, ಕನ್ನಡದಲ್ಲಿರುವ ಇಂಗ್ಲಿಷ್ ಪದಗಳನ್ನು ಮತ್ತೆ ಕನ್ನಡಕ್ಕೆ ಅನುವಾದ ಮಾಡುವುದು ಅತ್ಯಂತ ಕಷ್ಟದ ಕೆಲಸ. ಸರಳ ಪದಗಳನ್ನೂ ಅನುವಾದ ಮಾಡುವ ಸಮಯದಲ್ಲಿ ಹಲವು ಗೊಂದಲಗಳಿಗೆ ಎಡೆ ಮಾಡಿಕೊಡುತ್ತದೆ. ಈ ಸಂದರ್ಭದಲ್ಲಿ ಅರ್ಥ ಹಾಗೂ ಶಬ್ದಕ್ಕೆ ಅನುಗುಣವಾಗಿ ಪರ್ಯಾಯ ಪದವನ್ನು ಮರುಸೃಷ್ಟಿಸಬೇಕು. ಪದಗಳಿಗೂ ಮತ್ತು ಅರ್ಥಕ್ಕೂ ನೇರವಾದ ಸಂಬಂಧವಿರುವುದಿಲ್ಲ. ಇದು ಅನುವಾದಕರಿಗೆ ಇರುವ ಸವಾಲಾಗಿದೆ ಎಂದರು.

ಒಂದು ಕೃತಿಯನ್ನು ಅನುವಾದ ಮಾಡುವವರು ಪ್ರತಿಯೊಂದು ಪದವನ್ನು ಹಿಡಿದು, ಅದರ ಅರ್ಥವನ್ನು ಜಾಲಾಡಿದರೆ ಯಶಸ್ವಿಯಾದ ಭಾಷಾಂತರ ಮಾಡಲು ಸಾಧ್ಯವಾಗುತ್ತದೆ. ಒಂದು ಸಂದರ್ಭದಲ್ಲಿ ಪದಗಳಿಗೆ ಅರ್ಥ ಹುಡುಕಬೇಕಾ ಅಥವಾ ನಮ್ಮ ಅನುವಾದದ ಶಕ್ತಿಯನ್ನು ಕಳೆದುಕೊಳ್ಳಬೇಕಾ ಎಂಬುದು ಅರ್ಥವಾಗುವುದಿಲ್ಲ ಎಂದು ಅವರು ಹೇಳಿದರು.

ಪ್ರತಿಯೊಂದು ಭಾಷೆಯಲ್ಲಿಯೂ ಅದರೊಳಗೆ ಭಾಷಾಂತರ ನಡೆಯುತ್ತಿರುತ್ತದೆ. ಇಂದಿನ ಭಾಷೆಗೂ, 20-30 ವರ್ಷಗಳ ಹಿಂದಿನ ಭಾಷೆಗೂ ತುಂಬಾ ವ್ಯತ್ಯಾಸವಿದೆ. ಹೀಗಾಗಿ, ಕಾಲ ಕಾಲಕ್ಕೆ ಭಾಷೆಯು ಅನುವಾದಗೊಳ್ಳುತ್ತಾ ಬಂದಿದೆ. ಹೀಗಾಗಿ, ನಮ್ಮ ಹಿಂದಿನ ಭಾಷೆಯನ್ನು ಶೋಧನೆ ಮಾಡದೇ ಭಾಷಾಂತರ ಬಗ್ಗೆ ಮಾತನಾಡಲು ಅಸಾಧ್ಯ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಅನುವಾದಕಿ ದೀಪಾ ಗಣೇಶ್ ಸೇರಿದಂತೆ ಇನ್ನಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News