ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡ ಮೀನುಗಾರರಿಗೆ ಆರೆಸ್ಸೆಸ್ ಕಾರ್ಯಕರ್ತರಿಂದ ಮಾರಣಾಂತಿಕ ಹಲ್ಲೆ: ಆರೋಪ

Update: 2018-09-01 09:50 GMT

ತಿರುವನಂತಪುರಂ, ಸೆ.1: ಕೇರಳದ ಕೊಲ್ಲಂ ನಗರದ ಕರುನಾಗಪ್ಪಳ್ಳಿಯಲ್ಲಿರುವ ಅಝೀಕಲ್ ಬಂದರಿನಲ್ಲಿ ಮೀನುಗಾರರಾಗಿ ದುಡಿಯುವ ಚಿಂತು ಪ್ರದೀಪ್ ಮತ್ತು ಆತನ ಸೋದರ ಚಂದು ಇತ್ತೀಚೆಗೆ ಇಡುಕ್ಕಿ ಹಾಗೂ ಆಲಪ್ಪುಳ ಜಿಲ್ಲೆಯಲ್ಲಿ ಐದು ದಿನಗಳ ಕಾಲ ಪ್ರವಾಹಪೀಡಿತರ ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿ ತಮ್ಮ ಊರಿಗೆ ಮರಳಿದ್ದರು. ಮರುದಿನ, ಅಂದರೆ ಆಗಸ್ಟ್ 25ರಂದು ಸಂಜೆ ಚಿಂತು ರಕ್ಷಣಾ ಕಾರ್ಯದಲ್ಲಿ ತನ್ನ ಜತೆಗಿದ್ದ ತನ್ನ ಸ್ನೇಹಿತ ಹಾಗೂ ಅಲಪ್ಪಾಡ್ ನಿವಾಸಿ ಅರುಣ್ ದಾಸ್  ಜತೆಗೂಡಿ  ನೆರೆಯ ಆಲುಂಕಡವು ಗ್ರಾಮಕ್ಕೆ ಓಣಂ ಹಬ್ಬದ ಉಡುಗೊರೆಗಳನ್ನು ಖರೀದಿಸಲೆಂದು ಸಂಜೆ 7 ಗಂಟೆಯ ಹೊತ್ತಿಗೆ ಹೊರಟಿದ್ದ.  ಹಾದಿಯಲ್ಲಿ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸ್ಮಾರಕ ಗ್ರಂಥಾಲಯದ ಮುಂದೆ ಹಾದು ಹೋಗುವಾಗ ಅಲ್ಲಿದ್ದ ಕೆಲ ಆರೆಸ್ಸೆಸ್ ಕಾರ್ಯಕರ್ತರು ಚಿಂತು ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ caravanmagazine.in ವರದಿ ಮಾಡಿದೆ.

“ಆರೇಳು ಮಂದಿ ಕತ್ತಿಯನ್ನು ಹಿಡಿದುಕೊಂಡು ನಮ್ಮ ಮೇಲೆ ದಾಳಿ ನಡೆಸಿದ್ದರು. ನನ್ನ ಕುತ್ತಿಗೆಗೆ ಬೀಳಲಿದ್ದ ಕತ್ತಿಯೇಟನ್ನು ತಡೆಯಲೆತ್ನಿಸಿದಾಗ ಅದು ಕೈಗೆ ತಾಗಿತ್ತು. ನನ್ನ ಸಹಾಯಕ್ಕೆ ಅರುಣ್ ಧಾವಿಸಿದರೂ ಆತನ ಮೇಲೂ ದಾಳಿ ನಡೆದಿತ್ತು” ಎಂದು ಚಿಂತು ಆರೋಪಿಸಿದ್ದಾರೆ.

ಇದೊಂದು ಪೂರ್ವಯೋಜಿತ ಕೃತ್ಯವೆಂದು ಎರ್ಣಾಕುಳಂ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ತನ್ನೆರಡೂ ಕೈಗಳಲ್ಲಿ ಬ್ಯಾಂಡೇಜ್ ಸುತ್ತಿಕೊಂಡು ಮಲಗಿರುವ ಚಿಂತು ಹೇಳುತ್ತಾರೆ. ಆದರೆ ಈ ದಾಳಿಯ ಹಿಂದಿನ ನಿಖರ ಕಾರಣ ಮಾತ್ರ ಇನ್ನೂ ತಿಳಿದಿಲ್ಲ.

ಚಿಂತು ಸಿಪಿಎಂ ಯುವ ಘಟಕವಾದ ಡಿವೈಎಫ್‍ಐ ಸದಸ್ಯನಾಗಿದ್ದರೆ ಆತನ ಸೋದರ ಕಕ್ಕತುರುತ್ತು ಶಾಖೆಯ ಸದಸ್ಯನಾಗಿದ್ದಾನೆ. ಚಿಂತು ಮೇಲಿನ ದಾಳಿ ಪೂರ್ವದ್ವೇಷದಿಂದ ನಡೆದಿರಬಹುದೆಂದು ಇಬ್ಬರು ಸೋದರರೂ ಹೇಳುತ್ತಾರೆ. ಚಂದು ಹೇಳುವಂತೆ ಅವರ ಗ್ರಾಮದ ಜನರು  18 ವರ್ಷಗಳ ಹಿಂದೆ ಆರೆಸ್ಸೆಸ್ ಶಾಖೆಯ ಜನರ ಮೇಲೆ ಹಲ್ಲೆಗೈದಿದ್ದರು. ಇದರ ಪ್ರತಿಫಲವೆಂಬಂತೆ ವೈಷಮ್ಯ ಅಂದಿನಿಂದಲೂ ಮುಂದುವರಿದಿತ್ತು. ಚಂದು ಮೇಲೆ ಈ ವರ್ಷದ ಜೂನ್ ತಿಂಗಳಲ್ಲಿ ದಾಳಿ ನಡೆದಿತ್ತು ಎಂದು ಸೋದರರ ತಂದೆ ಪ್ರದೀಪ್ ಹೇಳುತ್ತಾರೆ.

ಅವರ ಮೇಲಿನ ದಾಳಿ ನಡೆದ ಮೂರು ದಿನಗಳ ನಂತರ ಆರು ಜನರು ಕರುನಾಗಪ್ಪಳ್ಳಿ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ಇದಕ್ಕಿಂತ ಮುಂಚೆ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದು, ಅವರೆಲ್ಲರೂ ಈಗ ಕೊಲ್ಲಂ ಜಿಲ್ಲಾ ಕಾರಾಗೃಹದಲ್ಲಿದ್ದಾರೆ. ಅವರೆಲ್ಲರೂ ಆರೆಸ್ಸೆಸ್ ಬೆಂಬಲಿಗರೆಂದು ತನ್ನ ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.

ಈ ದಾಳಿ ಒಂದು ಕ್ಷುಲ್ಲಕ ಕಾರಣಕ್ಕಾಗಿ ನಡೆದಿರಬಹುದಾದರೂ ಆರೋಪಿಗಳ ಹಾಗೂ ಗಾಯಾಳುವಿನ ರಾಜಕೀಯ ಹಿನ್ನೆಲೆಯಿಂದಲೇ ಅನಗತ್ಯ ಮಹತ್ವ ಪಡೆಯುತ್ತಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಅದೇ ಸಮಯ ತನಿಖೆ ಮುಂದುವರಿದಿದೆ ಎಂದು ಅವರು ಹೇಳುತ್ತಾರೆ. ಆದರೆ ಇದು ವೈಯಕ್ತಿಕ ದ್ವೇಷದಿಂದಲ್ಲ, ಬದಲಾಗಿ ರಾಜಕೀಯ ಕಾರಣಗಳಿಂದಾಗಿ ನಡೆದ ದಾಳಿ ಎಂದು ಚಿಂತು ಹೇಳುತ್ತಾರೆ.

ಚಿಂತು ಇನ್ನೂ ಆಸ್ಪತ್ರೆಯಲ್ಲಿದ್ದಾರೆ. ಕೈಗಳಿಗೆ ಶಸ್ತ್ರಕ್ರಿಯೆಯನ್ನೂ ನಡೆಸಲಾಗಿದೆ. ಕೈಗಳು ಸರಿಯಾಗಲು ಫಿಸಿಯೋಥೆರಪಿ ಸಹಾಯದಿಂದ ಕನಿಷ್ಠ ಆರು ತಿಂಗಳಾದರೂ ಬೇಕೆಂದು ವೈದ್ಯರು ಹೇಳುತ್ತಿದ್ದಾರೆ. ಆದರೆ ಕುಟುಂಬ ಚಿಂತಿತವಾಗಿದೆ. ಮತ್ತೆ ಹಿಂದಿನಂತೆ ಮೀನುಗಾರಿಕಾ ವೃತ್ತಿಯನ್ನು ಆತ ನಡೆಸಬಹುದೇ ಎಂಬ ಆತಂಕವೂ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News