ಗಂಗಾ ಶುದ್ಧೀಕರಣ ಯೋಜನೆಗೆ ಜರ್ಮನಿಯಿಂದ 990 ಕೋಟಿ ರೂ. ಸಾಲ

Update: 2018-09-01 10:41 GMT

ಹೊಸದಿಲ್ಲಿ, ಸೆ.1: ಗಂಗಾ ನದಿಯ ಶುದ್ಧೀಕರಣದ ಯತ್ನಕ್ಕಾಗಿ ಜರ್ಮನಿ 120 ಮಿಲಿಯನ್ ಯುರೋ (ಅಂದಾಜು ರೂ.990 ಕೋಟಿ) ಸಾಲ ಒದಗಿಸಲಿದೆ. ಈ ಹಣವನ್ನು ಉತ್ತರಾಖಂಡದ ಒಳಚರಂಡಿ ವ್ಯವಸ್ಥೆಯನ್ನು ಉತ್ತಮಪಡಿಸಲು ಈ ಮೊತ್ತವನ್ನು ವಿನಿಯೋಗಿಸಲಾಗುವುದು ಎಂದು ಅಲ್ಲಿನ ಹಿರಿಯ ಅಧಿಕಾರಿ ಜಸ್ಪರ್ ವೀಕ್ ಹೇಳಿದ್ದಾರೆ.

ಈ ಧನಸಹಾಯವನ್ನು ಈಗಿರುವ ಒಳಚರಂಡಿ ವ್ಯವಸ್ಥೆಗೆ ಬದಲು ಬೇರೆ ಒಳಚರಂಡಿ ನಿರ್ಮಿಸಲು ಹಾಗೂ ವಿಸ್ತರಿಸಲು, ಮನೆಗಳಿಗೆ ಒಳಚರಂಡಿ ಸಂಪರ್ಕ ಒದಗಿಸಲು ಹಾಗೂ ಒಳಚರಂಡಿ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸಲು ವಿನಿಯೋಗಿಸಲಾಗುವುದು. ಹದಿಮೂರು ತ್ಯಾಜ್ಯ ಪಂಪಿಂಗ್ ಸ್ಟೇಶನ್ನುಗಳನ್ನೂ ನಿರ್ಮಿಸಲಾಗುವುದು ಹಾಗೂ ಈ ಮೂಲಕ ಗಂಗಾ ನದಿಗೆ ಹರಿಯುವ ತ್ಯಾಜ್ಯ ನೀರನ್ನು ಗಣನೀಯವಾಗಿ ಕಡಿಮೆಗೊಳಿಸಿ ಗಂಗಾ ನದಿಯ ನೀರಿನ ಗುಣಮಟ್ಟ ಉತ್ತಮಗೊಳಿಸಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

2015ರಲ್ಲಿಯೇ ಜರ್ಮನಿ ಸರಕಾರ ಭಾರತಕ್ಕೆ ಈ ಹಣಕಾಸು ಸಹಾಯವನ್ನು ಒದಗಿಸುವುದಾಗಿ ಆಶ್ವಾಸನೆ ನೀಡಿತ್ತು. ಜರ್ಮನ್ ಅಭಿವೃದ್ಧಿ ಏಜನ್ಸಿ ಗಿರ್ ದೇಶದಲ್ಲಿ ಗಂಗಾ ಬಾಕ್ಸ್ ಕೂಡ ಸಿದ್ಧಪಡಿಸಿದ್ದು, ಶಾಲಾ ಮಕ್ಕಳಿಗೆ ಈ ನದಿಯ ಮಹತ್ವವನ್ನು ವಿವರಿಸುವ ಪ್ರಯತ್ನ ನಡೆಸಲಾಗುತ್ತಿದೆ.

ಯುರೋಪಿನ ಡೇನ್ಯೂಬ್ ನದಿ ಶುದ್ಧೀಕರಣ ಕಾರ್ಯದ ಸಂದರ್ಭ ಹೊರತರಲಾದ ಡೇನ್ಯೂಬ್ ಬುಕ್ ನಂತೆ ಗಂಗಾ ಬುಕ್ ಕೂಡ ಹೊರತರುವ ಯೋಜನೆಯಿದೆ ಎಂದು ಗಿರ್ ಯೋಜನಾ ಸಂಘಟಕ ವಿಕ್ರಾಂತ್ ತ್ಯಾಗಿ ಹೇಳಿದ್ದಾರೆ.

ಇಂತಹ ಯೋಜನೆಯನ್ನು ಪ್ರಾಯೋಗಿಕವಾಗಿ ಉತ್ತರಾಖಂಡದ ಶಾಲೆಯೊಂದರಲ್ಲಿ ಆರಂಭಿಸಲಾಗಿದ್ದು, ಆದರ ಯಶಸ್ಸಿನ ಆಧಾರದಲ್ಲಿ ರಾಜ್ಯದ ಇತರೆಡೆಗಳ ಶಾಲೆಗಳಲ್ಲಿ ಯೋಜನೆ ಜಾರಿಗೊಳಿಸಲಾಗುವುದು ಎಂದು ವಿಕ್ರಾಂತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News