ದಿ ಬ್ಯಾರಿ ವೆಲ್ ಫೇರ್ ಅಸೋಸಿಯೇಷನ್ ಗೆ 2 ಕೋಟಿ ರೂ. ಸಹಾಯಧನ ಮಂಜೂರು

Update: 2018-09-02 04:35 GMT

ಬೆಂಗಳೂರು, ಸೆ. 2: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ದಿ ಬ್ಯಾರಿ ವೆಲ್ ಫೇರ್ ಅಸೋಸಿಯೇಶನ್ ಮತ್ತು ನಧಾಫ್/ಪಿಂಜಾರ್ ಸಮುದಾಯದ ರಾಜ್ಯಮಟ್ಟದ ಸಂಘಕ್ಕೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ  ತಲಾ 2 ಕೋಟಿ ರೂ. ಸಹಾಯಧನ ಮಂಜೂರು ಮಾಡಲಾಗಿದೆ.

ದಿ ಬ್ಯಾರಿ ವೆಲ್ ಫೇರ್ ಅಸೋಸಿಯೇಷನ್ ಸಮಾಜದ ಜನರಿಗೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ, ವಿವಿಧ ಕೌಶಲ್ಯ ತರಬೇತಿಗಳಾದ ಕಂಪ್ಯೂಟರ್ ಶಿಕ್ಷಣ, ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡುವುದು, ಸಮಾಜದ ಮೂಲ ಕಸುಬುಗಳನ್ನು ಅಭಿವೃದ್ಧಿಪಡಿಸಲು ತರಬೇತಿ ನೀಡುವುದು, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಸಮಾಜದ ಅರ್ಹ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ತರಬೇತಿ ನೀಡುವ ಸಲುವಾಗಿ 2 ಕೋಟಿ ರೂ. ಮಂಜೂರು ಮಾಡಲಾಗಿದೆ. 

ಪಿಂಜಾರ/ನಧಾಫ್ ಜನಾಂಗದವರು ಗ್ರಾಮಾಂತರದಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದು, ರೈತರ ಕೃಷಿ ಚಟುವಟಿಕೆಗಳಿಗೆ ಸಹಾಯವಾಗುವ ಕೈಯಿಂದ ತಯಾರಿಸುವ ಹಗ್ಗ, ಕಣ್ಣಿ ಮುಂತಾದ ಹತ್ತಿಯಿಂದ ಅರಳಿ ಮಾಡಿ ನೂಲಿಗೆ ಸಂಬಂಧಿಸಿದ ಸಾಮಗ್ರಿಗಳ ತಯಾರಿಕೆ, ಗಾದಿ ಹಾಕುವುದು, ಗುಡಾ ನೇಯುವುದು, ಹಾಸಿಗೆ ಹೊದಿಕೆ ತಯಾರಿಕೆಯಲ್ಲಿ ತೊಡಗಿದ್ದು, ಇದು ಜನಾಂಗದ ಮೂಲ ಕಸುಬು ಆಗಿತ್ತು. ಇತ್ತೀಚಿನ ಪರಿಸ್ಥಿತಿಯಲ್ಲಿ ಯಾಂತ್ರಿಕರಣದಿಂದ ತಾಯಾರಿಸಿದ ಹಾಸಿಗೆ, ಹೊದಿಕೆ, ದಿಂಬು ಗಾದಿ, ಪ್ಯಾಸ್ಟಿಕ್ ಹಗ್ಗಗಳು ಮಾರುಕಟ್ಟೆಯಲ್ಲಿ ಬಂದಿರುವುದರಿಂದ ಅವರ ಕುಲ ಕಸುಬುಗಳಿಗೆ ತೊಂದರೆಯಾಗಿದ್ದು, ಅವರ ಅಭಿವೃದ್ಧಿಗೆ ಸಹಾಯಧನ ಮಂಜೂರು ಮಾಡಿರುವುದಾಗಿ ಸರ್ಕಾರದ ಅಧೀನ ಕಾರ್ಯದರ್ಶಿ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಅಕ್ರಂ ಪಾಷ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News