ಕಾರ್ಪಣ್ಯದ ವಾತಾವರಣ ನಿರ್ಮಾಣವಾಗಿದೆ: ಹಿರಿಯ ಕವಿ ಎಚ್.ಎಸ್.ವೆಂಕಟೇಶಮೂರ್ತಿ

Update: 2018-09-02 16:57 GMT

ಬೆಂಗಳೂರು, ಸೆ. 2: ಪ್ರಸ್ತುತ ಸಮಾಜದಲ್ಲಿ ಎಲ್ಲರೂ ಸಂದೇಹದಿಂದ ಬದುಕುತ್ತಿದ್ದು, ಕಾರ್ಪಣ್ಯದ ವಾತಾವರಣ ನಿರ್ಮಾಣವಾಗಿದೆ ಎಂದು ಹಿರಿಯ ಕವಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅಭಿಪ್ರಾಯಿಸಿದ್ದಾರೆ.

ರವಿವಾರ ನಗರದ ವಾಡಿಯಾ ಸಭಾಂಗಣದಲ್ಲಿ ಶರಣ್ಯ ಪಬ್ಲಿಷರ್ಸ್‌ ಅಂಡ್ ಡಿಸ್ಟ್ರಿಬ್ಯೂಟರ್ಸ್‌ ವತಿಯಿಂದ ಹಮ್ಮಿಕೊಂಡಿದ್ದ ಎಚ್.ಶೇಷಗಿರಿರಾವ್ ಅವರ ‘ಸಾಲಿಗುಡಿ’ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದಿನ ಸಂದರ್ಭದಲ್ಲಿ ಎಲ್ಲರಲ್ಲಿಯೂ ಅನುಮಾನದಿಂದ ಕಾಣುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಸಾಲಿಗುಡಿ ಕೃತಿಯಲ್ಲಿ ಯಾವುದೇ ಆತ್ಮಪ್ರಶಂಸೆ ಹಾಗೂ ಆತ್ಮನಿಂಧನೆಯಿಲ್ಲದ, ಬೇರೊಬ್ಬರ ಬಗ್ಗೆ ಪ್ರೀತಿಯಿಂದ ಮಾನಾಡಿದ್ದಾರೆ. ಅನುಮಾನ, ಅವಮಾನಗಳನ್ನು ಅಲಕ್ಷಿಸಿ, ಹೃದಯದಿಂದ ತಮ್ಮ ಅನುಭವಗಳನ್ನು ದಾಖಲಿಸಿದ್ದಾರೆ. ಈ ಕೃತಿಯನ್ನು ಓದಿದ ನಂತರ ನನಗೆ ಸುಸಂಸ್ಕೃತ, ಸಂಪನ್ನ ಜೀವನ ಕ್ರಮವನ್ನು ಪ್ರವೇಶಿಸಿದಂತಾಯಿತು. ಹಾಗಾಗಿ ನಾನು ಇತ್ತೀಚೆಗೆ ಓದಿದ ಅತ್ಯುತ್ತಮ ಲಲಿತ ಪ್ರಬಂಧಗಳ ಸಂಕಲನ ಇದಾಗಿದೆ ಎಂದು ಅವರು ಪ್ರಶಂಸಿದರು.

ಶಿಕ್ಷಣವನ್ನು ಕೇಂದ್ರವಾಗಿಟ್ಟುಕ್ಕೊಂಡು ಅನೇಕ ಚಿತ್ರಗಳನ್ನು ಕಟ್ಟಿಕೊಟ್ಟಿರುವ ಶೇಷಗಿರಿರಾವ್ ಅವರು, ಗ್ರಾಮೀಣ ಭಾಗದ ಜನರ ನಂಬಿಕೆ, ಆಚಾರ, ವಿಚಾರ ಹಾಗೂ ಜೀವನ ಪ್ರೀತಿಯನ್ನು ಕಟ್ಟಿಕೊಟ್ಟಿದ್ದಾರೆ. ಎಲ್ಲಾ ಕಡೆ ಚೆಲುವು, ಒಲವನ್ನು ನೋಡುವ ರಸಿಕತೆ ಅವರಲ್ಲಿದ್ದು, ನಾವು ಕಳೆದುಕೊಂಡಿರುವ ಸುಂದರ ಪ್ರಪಂಚವನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ ಎಂದು ತಿಳಿಸಿದರು.

ಅಧಿಕಾರದಲ್ಲಿರುವವರು ಮತ್ತೊಬ್ಬರನ್ನು ಪ್ರೀತಿಸುವುದು, ವಿಶ್ವಾಸ ತೋರಿಸುವುದು ಅಪರೂಪ. ಆದರೆ, ಶೇಷಗಿರಿರಾವ್ ಅವರು ಭಿನ್ನವಾಗಿದ್ದು, ಎಲ್ಲರನ್ನೂ ತಮ್ಮ ಕುಟುಂಬದವರು ಎಂದು ಭಾವಿಸಿಕೊಂಡಿದ್ದಾರೆ. ಪ್ರಾಮಾಣಿಕವಾಗಿ ಕೃತಿ ರಚಿಸಿದ್ದು, ಅದರಲ್ಲಿ ಮಾನವೀಯ ಗುಣವನ್ನು ಒಳಗೊಂಡಿದೆ ಎಂದ ಅವರು, ಮನುಷ್ಯ ಮನುಷ್ಯರಾಗಿ ಬದುಕಬೇಕು ಎಂಬ ಸಂದೇಶವನ್ನು ನೀಡಿದ್ದಾರೆ ಎಂದು ನುಡಿದರು.

ಕಥೆಗಾರ ಅಬ್ದುಲ್ ರಶೀದ್ ಮಾತನಾಡಿ, ಕನ್ನಡ ಬಹುತೇಕ ಸಾಹಿತಿಗಳು ಪಾಶ್ಚಿಮಾತ್ಯ ಶೈಲಿಯ ಚಿಂತನೆ ಹಾಗೂ ಬರವಣಿಗೆ ಶೈಲಿಯನ್ನು ಅನುಸರಿಸುತ್ತಾರೆ. ಆದರೆ, ಶೇಷಗಿರಿರಾವ್ ಅವರು ನಮ್ಮ ನಾಡಿನ ಸಂಸ್ಕೃತಿಗೆ ಧಕ್ಕೆಯಾಗದಂತೆ ಬರೆದಿದ್ದು, ಅದರಲ್ಲಿ ನಮ್ಮ ಮಣ್ಣಿನ ಗುಣಗಳನ್ನು ಕಾಣಬಹುದು. ದೇಶೀಯ ದಾಟಿಯಲ್ಲಿ ಸ್ಥಳೀಯ ಚಿಂತನೆಗಳನ್ನು ತಮ್ಮದೇ ಶೈಲಿಯಲ್ಲಿ ನಿರೂಪಿಸಿದ್ದಾರೆ ಎಂದು ಶ್ಲಾಘಿಸಿದರು. ಯಾವುದೇ ಪೂರ್ವಾಗ್ರಹ, ಅತಿರೇಕ, ಉದ್ವೇಗಗಳಲ್ಲಿದ ವೈವಿದ್ಯಮಯ ಬರವಣಿಗೆಗಳು ಹಾಗೂ ಜೀವನದ ಬಗೆಗಿನ ಪ್ರೀತಿ ಮತ್ತು ಕುತೂಹಲಗಳಿಂದ ಕೂಡಿದ ಬರಹಗಳು ಕನ್ನಡಿಗರಿಗೆ ಬೇಕು. ಇಂತಹ ಎಲ್ಲಾ ಗುಣಗಳು ಶೇಷಗಿರಿರಾವ್ ಅವರ ಬರಹದಲ್ಲಿದ್ದು, ಅವುಗಳಿಗೆ ‘ಕೆಂಡ ಸಂಪಿಗೆ’ ಬ್ಲಾಗ್‌ನಲ್ಲಿ ವೇದಿಕೆ ಕಲ್ಪಿಸಲಾಯಿತು. ಅದಕ್ಕೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು ಎಂದು ನೆನಪಿಸಿಕೊಂಡರು.

ಇತ್ತೀಚಿನ ದಿನಗಳಲ್ಲಿ ಮಾಧ್ಯಮದಲ್ಲಿ ಅನಗತ್ಯ ಚರ್ಚೆ, ವಿವಾದ, ವಾಗ್ವಾದಗಳು ಹೆಚ್ಚು ಚರ್ಚೆಯಾಗುತ್ತಿವೆ. ಆದರೆ, ಪ್ರೀತಿ, ಸ್ನೇಹದ ಬಗ್ಗೆ ಎಲ್ಲಿಯೂ ವಿಚಾರಗಳು ಹೊರ ಬರುತ್ತಿಲ್ಲ. ನಮಗೆ ಬೇಕಿರುವುದು ವಾದ-ವಿವಾದಗಳಲ್ಲ, ಬದಲಿಗೆ ಪ್ರೀತಿ, ಸ್ನೇಹ ಎಂದರು. ಕಾರ್ಯಕ್ರಮದಲ್ಲಿ ಪತ್ರಕರ್ತ ಜೋಗಿ, ಲೇಖಕ ಎಚ್.ಶೇಷಗಿರಿರಾವ್ ಉಪಸ್ಥಿತರಿದ್ದರು.

ನನ್ನ 36 ವರ್ಷಗಳಲ್ಲಿ 12 ಕಾಲೇಜುಗಳಿಗೆ ಸೇವೆ ಸಲ್ಲಿಸುವ ಮೂಲಕ ಸಂಪೂರ್ಣ ಜೀವನವನ್ನು ಹಳ್ಳಿ ಭಾಗದ ಮಕ್ಕಳ ಶಿಕ್ಷಣಕ್ಕಾಗಿ ಮುಡಿಪಿಟ್ಟಿದ್ದೆ. ಆದುದರಿಂದ ಏನೂ ಬರೆಯಲಾಗಿಲ್ಲ. ನಿವೃತ್ತಿ ನಂತರ ಜೀವದಲ್ಲಿ ಕಂಡ ಅನುಭವಗಳನ್ನು ದಾಖಲಿಸಿದ್ದೇನೆ. ಆದರೆ, ಇದ್ಯಾವುದೂ ಉದ್ದೇಶಪೂರ್ವಕವಾಗಿಲ್ಲ. ಅಲ್ಲದೆ, ವೈಯುಕ್ತಿಕ ವಿವರಗಳೂ ಇಲ್ಲದೇ ಇರುವುದರಿಂದ ಇದು ಸಂಪೂರ್ಣ ಆತ್ಮಕಥೆಯೂ ಅಲ್ಲ’

-ಎಚ್.ಶೇಷಗಿರಿರಾವ್ ಲೇಖಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News