ರಫೇಲ್ ನ್ಯಾಯಸಮ್ಮತವಾಗಿದ್ದರೆ ಜಂಟಿ ಸಂಸದೀಯ ಸಮಿತಿ ತನಿಖೆಗೆ ಸರಕಾರ ಹೆದರುವುದೇಕೆ ?

Update: 2018-09-02 17:13 GMT

ಮಥುರಾ,ಸೆ.2: 126 ಯುದ್ಧವಿಮಾನಗಳು ಅಗತ್ಯವಾಗಿರುವಾಗ ಕೇವಲ 36 ವಿಮಾನಗಳ ಖರೀದಿಗಾಗಿ ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ಜೊತೆ ಒಪ್ಪಂದ ಮಾಡಿಕೊಂಡಿದ್ದೇಕೆ ಎಂದು ಕಾಂಗ್ರೆಸ್ ನರೇಂದ್ರ ಮೋದಿ ಸರಕಾರವನ್ನು ಪ್ರಶ್ನಿಸಿದೆ.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರರಾದ ಪ್ರಿಯಾಂಕಾ ಚತುರ್ವೇದಿ ಅವರು,ಅಂತಹ ಯಾವುದೇ ತುರ್ತು ಅಗತ್ಯವಿದ್ದರೆ ಒಂದೇ ಸಲ ಎಲ್ಲ ರಫೇಲ್ ವಿಮಾನಗಳನ್ನು ಪೂರೈಸುವಂತೆ ಸರಕಾರವೇಕೆ ಫ್ರೆಂಚ್ ಕಂಪನಿಯನ್ನು ಕೇಳಿಕೊಂಡಿಲ್ಲ ಎಂದು ಪ್ರಶ್ನಿಸಿದರು.

 ವಿಮಾನಗಳ ಮೊದಲ ಕಂತು 2019ರಲ್ಲಿ ಮತ್ತು ಉಳಿದವು 2022ರಲ್ಲಿ ಪೂರೈಕೆಯಾಗಲಿವೆ. ತುರ್ತು ಅಗತ್ಯವಿದ್ದರೆ ಎಲ್ಲ ವಿಮಾನಗಳೂ 2019ರಲ್ಲಿಯೇ ಪೂರೈಕೆಯಾಗಬೇಕಿತ್ತು ಎಂದ ಅವರು, ಒಪ್ಪಂದವು ನ್ಯಾಯಸಮ್ಮತವಾಗಿದ್ದರೆ ಸರಕಾರವು ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಹೆದರುವುದೇಕೆ ಎಂದೂ ಪ್ರಶ್ನಿಸಿದರು.

  ಸರಕಾರವು ತನ್ನ ಬಿಲಿಯಾಧೀಶ ಸ್ನೇಹಿತನಿಗಾಗಿ ರಾಷ್ಟ್ರದ ಹಿತಾಸಕ್ತಿಗಳನ್ನು ಬಲಿ ನೀಡಿದೆ ಎಂದು ಆರೋಪಿಸಿದ ಅವರು,ಪ್ರತಿ ಯುದ್ಧವಿಮಾನದ ಬೆಲೆ 526 ಕೋ.ರೂ.ಗಳಿಂದ 1,670 ಕೋ.ರೂ.ಗಳಿಗೆ ಹೆಚ್ಚಿದ್ದು ಹೇಗೆ? ಸರಕಾರವು 70 ವರ್ಷಗಳ ನಿಷ್ಕಳಂಕ ದಾಖಲೆಯನ್ನು ಹೊಂದಿರುವ ಸಾರ್ವಜನಿಕ ಕ್ಷೇತ್ರದ ಸಂಸ್ಥೆಯನ್ನು ಕಡೆಗಣಿಸಿ 12 ದಿನಗಳಷ್ಟು ಹಳೆಯದಾದ,ಅನುಭವಿಲ್ಲದ ಕಂಪನಿಗೆ ಗುತ್ತಿಗೆ ನೀಡಿದ್ದು ಏಕೆ ಎನ್ನುವುದನ್ನು ಪ್ರಧಾನಿಯವರು ವಿವರಿಸಬೇಕಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News