ಉತ್ತರ ಪ್ರದೇಶದಲ್ಲಿ ಸ್ವಯಂಪ್ರೇರಿತರಾಗಿ ಜೈಲು ಸೇರುತ್ತಿರುವ ಜನರು!

Update: 2018-09-03 05:47 GMT

ಲಕ್ನೋ, ಸೆ.3: ಅಪರಾಧಿಗಳು ಕೂಡಾ ಜೈಲು ಸಹವಾಸ ಬೇಡ ಎಂದು ತಪ್ಪಿಸಿಕೊಳ್ಳಲು ಹರಸಾಹಸ ಮಾಡುತ್ತಾರೆ. ಆದರೆ ಉತ್ತರ ಪ್ರದೇಶದಲ್ಲಿ ಇದಕ್ಕೆ ವಿರುದ್ಧವಾಗಿ ಕೆಲ ಮಂದಿ ಯಾವ ಅಪರಾಧ ಮಾಡದಿದ್ದರೂ ಸ್ವಯಂಪ್ರೇರಿತರಾಗಿ ಜೈಲು ಸೇರುತ್ತಿದ್ದಾರೆ. ಕಾರಣ ಏನು ಗೊತ್ತೇ? ಮೂಢನಂಬಿಕೆ. ತಮ್ಮ ಕುಂಡಲಿ ಅಥವಾ ಜಾತಕದಲ್ಲಿ ಜೈಲುವಾಸದ ಯೋಗ ಇದೆ ಎಂಬ ಕಾರಣಕ್ಕೆ ಅಪರಾಧ ಮಾಡುವ ಮುನ್ನವೇ ಜೈಲು ಸೇರುವುದು ಉತ್ತಮ ಎನ್ನುವುದು ಇವರ ಲೆಕ್ಕಾಚಾರ.

ಗೋಮತಿನಗರದ ಉದ್ಯಮಿ ರಮೇಶ್ ಸಿಂಗ್ (38) ಮೇ ತಿಂಗಳಲ್ಲಿ ಸ್ವಯಂಪ್ರೇರಿತರಾಗಿ ಒಂದು ದಿನದ ಜೈಲುವಾಸ ಅನುಭವಿಸಿದರು. "ನನ್ನ ಜಾತಕದಲ್ಲಿ ಜೈಲು ಯೋಗ ಇರುವುದರಿಂದ ಮುಂದೆ ಸಮಸ್ಯೆಯಾಗಬಹುದು ಎಂದು ನಮ್ಮ ಕುಟುಂಬ ಜ್ಯೋತಿಷಿ ಹೇಳಿದರು. ಕುಟುಂಬದ ಎಲ್ಲರಿಗೂ ಭಯವಾಯಿತು. ಆಗ ಯಾವುದೇ ತಪ್ಪು ಮಾಡದಿದ್ದರೂ, ಕೆಲ ಸಮಯವನ್ನು ಜೈಲಲ್ಲಿ ಕಳೆದರೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ಜ್ಯೋತಿಷಿ ಪರಿಹಾರ ನೀಡಿದರು" ಎಂದು ಅವರು ಹೇಳುತ್ತಾರೆ.

ಅವರು ಏಪ್ರಿಲ್ ಕೊನೆಗೆ ಜಿಲ್ಲಾಡಳಿತಕ್ಕೆ ತಮ್ಮ ಜಾತಕದ ಪ್ರತಿಯನ್ನೂ ಲಗತ್ತಿಸಿ ಅರ್ಜಿ ಸಲ್ಲಿಸಿದರು. ಅವರ ಮನವಿಯನ್ನು ಪರಿಶೀಲಿಸಿದ ಬಳಿಕ ಪೊಲೀಸ್ ಠಾಣೆಯ ಲಾಕಪ್‍ನಲ್ಲಿ ಒಂದು ದಿನ ಇರಲು ಅವಕಾಶ ನೀಡಲಾಯಿತು. ಈ ಜೈಲುವಾಸದ ಅವಧಿಯಲ್ಲಿ ಜೈಲು ನಿಯಮಾವಳಿಗೆ ಬದ್ಧವಾಗಿರುವಂತೆ ಜ್ಯೋತಿಷಿ ಸೂಚಿಸಿದರು. ಕೈದಿಗಳಿಗೆ ನೀಡುವ ಆಹಾರವನ್ನೇ ಸೇವಿಸುವಂತೆಯೂ ಸೂಚಿಸಿದ್ದರು. "ನಾನು ಯಾವುದೇ ತಪ್ಪು ಮಾಡಿದ್ದರೆ ಕ್ಷಮಿಸಿ. ಯಾವುದೇ ಅಪರಾಧ ಎಸಗದಂತೆ ಹಾಗೂ ಸರಿದಾರಿಯಲ್ಲಿ ಮುನ್ನಡೆಯುವಂತೆ ಮಾರ್ಗದರ್ಶನ ನೀಡಿ ಎಂದು ದೇವರನ್ನು ಪ್ರಾರ್ಥಿಸಿದೆ" ಎಂದು ಅವರು ಹೇಳುತ್ತಾರೆ.

ಜಿಲ್ಲಾಡಳಿತ ಇಂತಹ ನಂಬಿಕೆ ಈಡೇರಿಸಲು ಅವಕಾಶ ಮಾಡಿಕೊಡುತ್ತಿದೆ. ಕಳೆದ ಒಂದು ವರ್ಷದಲ್ಲಿ ಇಂತಹ 24 ಮನವಿಗಳು ಬಂದಿವೆ ಎಂದು ಲಕ್ನೋ ಜಿಲ್ಲಾಧಿಕಾರಿ ಕುಶಾಲ್‍ರಾಜ್ ಶರ್ಮಾ ಹೇಳಿದ್ದಾರೆ. ಆದರೆ ಶಿಕ್ಷೆ ವಿಧಿಸುವ ಅಧಿಕಾರ ನ್ಯಾಯಾಲಯಕ್ಕೆ ಮಾತ್ರ ಇದೆ. ಆದ್ದರಿಂದ ಇವರ ಮನವಿ ಮೇರೆಗೆ ಪೊಲೀಸ್ ಲಾಕಪ್‍ಗಳಲ್ಲಿ ಇರಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News