ಭೀಮಾ ಕೋರೆಗಾಂವ್ ಹಿಂಸಾಚಾರ: ಮೊದಲ ಎಫ್ ಐಆರ್ ನ ಪ್ರಮುಖ ಆರೋಪಿಗಳ ಬಗ್ಗೆ ಪೊಲೀಸರ ಮೃದು ಧೋರಣೆ

Update: 2018-09-03 05:59 GMT

ಪುಣೆ, ಸೆ.3: ಭೀಮಾ ಕೋರೆಗಾಂವ್ ಗಲಭೆಗೆ ಸಂಬಂಧಿಸಿದಂತೆ 10 ಮಂದಿ ಹೋರಾಟಗಾರರು, ವಿಚಾರವಾದಿಗಳು ಮತ್ತು ವಕೀಲರನ್ನು ದೇಶದ ವಿವಿಧೆಡೆ ಬಂಧಿಸಿರುವುದು ರಾಜಕೀಯ ದ್ವೇಷದ ಕ್ರಮ ಎಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ.

ಮಹಾರಾಷ್ಟ್ರ ಪೊಲೀಸರು ಬಂಧಿಸಿರುವ ಎಲ್ಲರೂ ಎಡಪಂಥೀಯ ಚಿಂತನೆಯವರು. ಹಿಂಸೆಗೆ ಕುಮ್ಮಕ್ಕು ನೀಡಿದ್ದಾರೆ ಎನ್ನುವುದು ಇವರ ಮೇಲಿರುವ ಆರೋಪ. ಈ ಹಿಂಸಾಚಾರ ನಡೆಯುವ ಒಂದು ದಿನ ಮೊದಲು ನಡೆದ ಎಲ್ಗಾರ್ ಪರಿಷತ್ ಸಮಾರಂಭದಲ್ಲಿ ಇವರು ಪ್ರಚೋದನಕಾರಿ ಭಾಷಣ ಮಾಡಿದ್ದಾಗಿ ಎಂದು ಪೊಲೀಸರು ಹೇಳಿದ್ದಾರೆ.

ಆದರೆ ಘಟನೆ ಬಗ್ಗೆ ದಾಖಲಾದ ಮೊದಲ ಎಫ್ ಐಆರ್‍ ನಲ್ಲಿ ಮಿಲಿಂದ್ ಏಕಬೋಟೆ (56) ಮತ್ತು ಸಂಭಾಜಿ ಭಿಡೆ (85) ಪ್ರಮುಖ ಆರೋಪಿಗಳಾಗಿದ್ದರು. ಬಹುಜನ ರಿಪಬ್ಲಿಕನ್ ಸೋಶಲಿಸ್ಟ್ ಪಾರ್ಟಿಯ ಸದಸ್ಯೆ ಅನಿತಾ ಸಾವಳೆ ಈ ಬಗ್ಗೆ ದೂರು ನೀಡಿದ್ದರು.

ಏಕಬೋಟೆ ಸಮಸ್ತ ಹಿಂದೂ ಅಗಡಿಯ ಮುಖ್ಯಸ್ಥ ಹಾಗೂ ಭಿಡೆ ಶಿವ ಪ್ರತಿಷ್ಠಾನ ಹಿಂದೂಸ್ತಾನ್‍ ನ ಮುಖಂಡ. ಎಫ್‍ಐಆರ್ ಪ್ರಕಾರ ಈ ಸಂಘಟನೆಗಳ ಸದಸ್ಯರು ದಾಳಿಯ ಮುಂಚೂಣಿಯಲ್ಲಿದ್ದರು. ಉದ್ರಿಕ್ತರ ಗುಂಪು ಏಕಬೋಟೆ ಹಾಗೂ ಭಿಡೆ ಅವರ ಹೆಸರು ಕೂಗುತ್ತಿದ್ದರು ಹಾಗೂ ಸಂಘಟನೆಯ ಹೆಸರಿನ ಟಿ-ಷರ್ಟ್ ಧರಿಸಿದ್ದರು ಎಂದು ಸಾವಳೆ ಆರೋಪಿಸಿದ್ದರು.

ಆದರೆ ಪೊಲೀಸರು ಇದನ್ನು ಕಡೆಗಣಿಸಿ, 38 ವರ್ಷದ ಪುಣೆ ವ್ಯಾಪಾರಿ ತುಷಾರ್ ದಾಂಗುಡೆ ಸಲ್ಲಿಸಿದ ಎಫ್‍ಐಆರ್ ನಂತೆ ಕ್ರಮ  ಕೈಗೊಂಡಿದ್ದಾರೆ. ದಾಂಗುಡೆ ಎಲ್ಗಾರ್ ಪರಿಷತ್ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಸಂಬಂಧ ಆರು ಸಂಘಟನೆಗಳ ವಿರುದ್ಧ ದೂರು ನೀಡಿದ್ದರು. ಎರಡೂ ಎಫ್‍ಐಆರ್‍ಗಳಲ್ಲಿ ಕೂಡಾ ಪ್ರತ್ಯಕ್ಷದರ್ಶಿಗಳ ಹೇಳಿಕೆ ಇದೆ. ಆದರೆ ಪೊಲೀಸರು ಕ್ರಮ ಕೈಗೊಂಡಿರುವುದು ಮಾತ್ರ ಎಡಪಂಥೀಯರ ವಿರುದ್ಧ ನೀಡಿರುವ ದೂರಿನ ಬಗ್ಗೆ.

ಈ ಸಂಬಂಧ ಐದು ಮಂದಿ ಎಡಪಂಥೀಯರನ್ನು ಕಳೆದ ಜೂನ್‍ನಿಂದ ಜೈಲಿನಲ್ಲಿಡಲಾಗಿದೆ. ತದ್ವಿರುದ್ಧವಾಗಿ ಸಾವಳೆ ನೀಡಿದ ದೂರಿನ ಅನ್ವಯ ಮಾರ್ಚ್ 14ರಂದು ಏಕಬೋಟೆಯನ್ನು ಬಂಧಿಸಲಾಗಿತ್ತು. ಆದರೆ ಒಂದು ತಿಂಗಳ ಒಳಗಾಗಿ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಆತನ ವಿರುದ್ಧ ಹತ್ಯೆ ಪ್ರಯತ್ನ ಹಾಗೂ ಗುಂಪುಗಳ ನಡುವೆ ದ್ವೇಷ ಹರಡಿದ ಆರೋಪ ಹೊರಿಸಲಾಗಿದೆ. ಆದರೆ ಎಡಪಂಥೀಯರ ವಿರುದ್ಧ ಭಯೋತ್ಪಾದಕ ವಿರೋಧಿ ಕಾನೂನಿನ ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಭಿಡೆ ವಿರುದ್ಧ ಇದುವರೆಗೆ ಕ್ರಮ ಕೈಗೊಂಡಿಲ್ಲ. ಭಿಡೆ ವಿರುದ್ಧ ಯಾವುದೇ ಸಾಕ್ಷಿ ಇಲ್ಲ ಎನ್ನುವುದು ಪೊಲೀಸರ ಸಮರ್ಥನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News