ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರದು: ಬಿಎಸ್‌ವೈ

Update: 2018-09-03 13:10 GMT

ಬೆಂಗಳೂರು, ಸೆ. 3: ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಫಲಿತಾಂಶ ಬಂದಿಲ್ಲ. ಈ ಫಲಿತಾಂಶವು ಲೋಕಸಭೆ ಚುನಾವಣೆಗೆ ದಿಕ್ಸೂಚಿಯಲ್ಲ. ಲೋಕಸಭೆ ಚುನಾವಣೆಯಲ್ಲಿ ಪ್ರಭಾವ ಬೀರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.

ಬಿಜೆಪಿಗೆ ಇನ್ನೂ ಉತ್ತಮ ಫಲಿತಾಂಶ ಬರಬೇಕಿತ್ತು, ಮೈತ್ರಿ ಸರಕಾರವಿದ್ದರೂ ಬಿಜೆಪಿ ಸಾಧನೆ ಅತ್ಯುತ್ತಮವಾಗಿದೆ ಮತ್ತು ಸ್ವಾಗತಾರ್ಹ. ಕಾಂಗ್ರೆಸ್-ಜೆಡಿಎಸ್‌ನ ಹಣಬಲ ಪರಿಣಾಮ ಬೀರಿದೆ. ಈ ವಿಷಯದಲ್ಲಿ ಎರಡು ಪಕ್ಷಗಳಿಗೆ ಸಮಾನವಾಗಿ ನಿಲ್ಲಲು ಬಿಜೆಪಿಗೆ ಸಾಧ್ಯವಾಗಿಲ್ಲ ಎಂದು ಅವರು ವಿಶ್ಲೇಷಿಸಿದ್ದಾರೆ.

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿದೆ. ಮೈಸೂರಿನಲ್ಲಿ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಕಾಂಗ್ರೆಸ್- ಜೆಡಿಎಸ್ ಭದ್ರಕೊಟೆಯಲ್ಲಿ ಬಿಜೆಪಿ ತನ್ನ ಬಲ ವೃದ್ಧಿಸಿಕೊಂಡಿದೆ. ಹಾಸನ ನಗರಸಭೆಯ 13 ಸ್ಥಾನಗಳನ್ನು ಬಿಜೆಪಿ ಗೆದ್ದಿದೆ ಎಂದು ಅವರು ಹೇಳಿದ್ದಾರೆ.

ಏನೇ ಆದರೂ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ 22ರಿಂದ 25 ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ. ಈಗಾಗಲೇ ಜನತೆ ಬಿಜೆಪಿ ಬೆಂಬಲಿಸಲು ದೃಢ ಸಂಕಲ್ಪ ಮಾಡಿದ್ದಾರೆ. ಬಿಜೆಪಿ ನಿಶ್ಚಿತವಾಗಿ ಭಾರೀ ಬಹುಮತದಿಂದ ಗೆಲುವು ದಾಖಲಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News