ವೃಂದಾವನದ ವಿಧವೆಯರ ಬಾಳಿನಲ್ಲಿ ಹೊಸ ಭರವಸೆ ಮೂಡಿಸಿದ ಕೃಷ್ಣ ಕುಟೀರ

Update: 2018-09-04 09:26 GMT

ಲಕ್ನೊ, ಸೆ.2: ಉತ್ತರಪ್ರದೇಶದ ಮಥುರಾ ಜಿಲ್ಲೆಯಲ್ಲಿರುವ ವೃಂದಾವನದಲ್ಲಿ ಶ್ರೀಕೃಷ್ಣ ತನ್ನ ಬಾಲ್ಯದ ದಿನಗಳನ್ನು ಕಳೆದಿದ್ದ ಎಂದು ಹೇಳಲಾಗುತ್ತದೆ. ಅಂತೆಯೇ ಶ್ರೀಕೃಷ್ಣ ಜನ್ಮಾಷ್ಟಮಿಯಂದು ವೃಂದಾವನವನ್ನು ವಿಶೇಷವಾಗಿ ಅಲಂಕರಿಸಲಾಗುತ್ತದೆ. ದೇಶದೆಲ್ಲೆಡೆಯ ಕೃಷ್ಣ ಭಕ್ತರು ಆಗಮಿಸಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಟಮಿ ವೃಂದಾವನದಲ್ಲಿ ಕೃಷ್ಣನ ಧ್ಯಾನ ಮಾಡಿಕೊಂಡು ದಿನ ಕಳೆಯುತ್ತಿದ್ದ ವೃದ್ಧೆಯರ ಬಾಳಿನಲ್ಲಿ ಹೊಸ ಆಶಾಕಿರಣವನ್ನು ಮೂಡಿಸಿದೆ.

ಪತಿಯ ಮರಣಾನಂತರ ಬೀದಿಪಾಲಾದ ಅನಾಥ ವಿಧವೆಯರು ವೃಂದಾವನಕ್ಕೆ ಆಗಮಿಸಿ ಅಲ್ಲೇ ನೆಲೆ ಕಂಡುಕೊಳ್ಳುತ್ತಾರೆ. ದೇವಸ್ಥಾನಕ್ಕೆ ಆಗಮಿಸುವ ಯಾತ್ರಿಕರಲ್ಲಿ ಭಿಕ್ಷೆ ಬೇಡಿ ಹೊಟ್ಟೆ ಹೊರೆದುಕೊಳ್ಳುವ ಸ್ಥಿತಿ ಇವರದ್ದು. ವೃಂದಾವನದಲ್ಲಿ ವಾಸಿಸುತ್ತಿರುವ ವಿಧವೆಯರ ಅವಸ್ಥೆಯನ್ನು ಗಮನಿಸಿದ ಸುಪ್ರೀಂಕೋರ್ಟ್, ಇಲ್ಲಿರುವ ಎಲ್ಲಾ ವಿಧವೆಯರಿಗೂ ಪುನರ್ವಸತಿ ಕಲ್ಪಿಸಿಕೊಟ್ಟು ಅವರು ಘನತೆಯಿಂದ ಜೀವನ ಸಾಗಿಸಲು ಅನುವು ಮಾಡಿಕೊಡುವಂತೆ ಕಳೆದ ವರ್ಷ ಕೇಂದ್ರ ಸರಕಾರ ಹಾಗೂ ಉತ್ತರಪ್ರದೇಶ ಸರಕಾರಕ್ಕೆ ಸೂಚಿಸಿತ್ತು. ಅದರಂತೆ ಕೇಂದ್ರದ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು 1.4 ಹೆಕ್ಟೇರ್ ಪ್ರದೇಶದಲ್ಲಿ, ‘ಸ್ವಾಧಾರ್ ಗೃಹ’ ಯೋಜನೆಯಡಿ ‘ಕೃಷ್ಣ ಕುಟೀರ’ ಎಂಬ ಹೆಸರಿನಲ್ಲಿ ವಿಧವೆಯರ ಆಶ್ರಮವನ್ನು ಸ್ಥಾಪಿಸಿದೆ.

1,000 ಹಾಸಿಗೆಗಳುಳ್ಳ ಕೃಷ್ಣ ಕುಟೀರವನ್ನು ಶುಕ್ರವಾರ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಮೇನಕಾ ಗಾಂಧಿ ಉದ್ಘಾಟಿಸಿದ್ದಾರೆ. ಅತ್ಯಾಧುನಿಕ ಶೈಲಿಯ ಅಡುಗೆ ವ್ಯವಸ್ಥೆಯನ್ನು ಹೊಂದಿರುವ ಈ ಆಶ್ರಮದಲ್ಲಿ, ಕೌಶಲ್ಯ ತಥಾ ತರಬೇತಿ ಕೇಂದ್ರವೊಂದಿದ್ದು ವಿಧವೆಯರಿಗೆ ಹೊಲಿಗೆ, ಎಂಬ್ರಾಯ್ಡರಿ ಮುಂತಾದ ಕಾರ್ಯಗಳಲ್ಲಿ ತರಬೇತಿ ನೀಡಲಾಗುತ್ತದೆ. ಕೇಂದ್ರ ಸರಕಾರದ ಆರ್ಥಿಕ ನೆರವಿನಡಿ ನಿರ್ಮಿಸಲಾಗಿರುವ ಈ ಆಶ್ರಮದ ನಿರ್ವಹಣೆಯ ಜವಾಬ್ದಾರಿ ರಾಜ್ಯ ಸರಕಾರದ್ದು. 100 ಕೋಣೆಗಳು, 200 ಸ್ನಾನದ ಮನೆಗಳು, ಲಿಫ್ಟ್ , ಅಂಗವಿಕಲರಿಗೆ ಚಲಿಸಲು ನೆರವಾಗುವ ಸಾಧನಗಳು ಮತ್ತಿತರ ವ್ಯವಸ್ಥೆ ಇಲ್ಲಿದೆ.

ವೃಂದಾವನದಲ್ಲಿ ನೆಲೆ ಕಂಡುಕೊಂಡಿದ್ದ ಸುಮಾರು 3,000 ವಿಧವೆಯರಲ್ಲಿ 88ರ ವೃದ್ಧೆ ಗಾಯತ್ರಿ ದೇವಿಯೂ ಒಬ್ಬರು. ಇವರಿಗೆ ಶ್ರೀಕೃಷ್ಣ ಜನ್ಮಾಷ್ಟಮಿ ಎಂಬುದು ಹಬ್ಬಕ್ಕಿಂತಲೂ ಮಿಗಿಲಾದುದು. ಒಡಿಶಾದ ಬಿಸ್ರಾ ಎಂಬ ಗ್ರಾಮದ ನಿವಾಸಿಯಾಗಿರುವ ಗಾಯತ್ರಿ ದೇವಿಯ ಪತಿ 17 ವರ್ಷದ ಹಿಂದೆ ತೀರಿಕೊಂಡ ಬಳಿಕ ಆಕೆಯ ಮಕ್ಕಳು ಮನೆಯಿಂದ ಹೊರಗೆ ಹಾಕಿದರು. ಹೊಟ್ಟೆ ಹಸಿವೆ ತಡೆಯಲಾರದೆ ಭಿಕ್ಷಾಟನೆ ನಡೆಸುತ್ತಿದ್ದ ಗಾಯತ್ರಿ ದೇವಿ ಬಳಿಕ ಅಗರಬತ್ತಿ ಮಾರಾಟ ಮಾಡಿ, ಬಸ್ಸು ನಿಲ್ದಾಣಗಳಲ್ಲಿ ಮಲಗಿ ಜೀವನ ಸಾಗಿಸುತ್ತಿದ್ದಳು. ವೃದ್ಧಾಪ್ಯದ ಕಾರಣ ಅಗರಬತ್ತಿಯ ಚೀಲ ಹೊತ್ತುಕೊಂಡು ಮನೆಮನೆಗೆ ಸುತ್ತುವುದು ಕಷ್ಟವಾಯಿತು. ಆಗ ಕೆಲವರು ವೃಂದಾವನಕ್ಕೆ ತೆರಳುವಂತೆ ಸೂಚಿಸಿದರು. ಆದರೆ ರೈಲಿನ ಟಿಕೇಟಿಗೆ ದುಡ್ಡು ಹೊಂದಿಸಲು ಪತಿ ತನಗೆ ಮದುವೆಯಾದ ಹೊಸತರಲ್ಲಿ ನೀಡಿದ್ದ ಬೆಳ್ಳಿಯ ಉಂಗುರವನ್ನು ಮಾರಬೇಕಾಯಿತು ಎಂದು ಬೇಸರದಿಂದ ಹೇಳುತ್ತಾಳೆ.

ಬಳಿಕ ವೃಂದಾವನವನ್ನು ಸೇರಿಕೊಂಡ ಗಾಯತ್ರಿ ದೇವಿ ಅಲ್ಲಿ ದೇವಸ್ಥಾನಕ್ಕೆ ಬರುವ ಯಾತ್ರಿಕರು ನೀಡುವ ಹಣದಿಂದ ಹೊಟ್ಟೆ ಹೊರೆಯುತ್ತಿದ್ದಳು. ಇದೀಗ ಶ್ರೀಕೃಷ್ಣ ಜನ್ಮಾಷ್ಟಮಿಯಂದು ‘ಕೃಷ್ಣ ಕುಟೀರ’ ಸೇರಿರುವ ಗಾಯತ್ರಿ ದೇವಿಗೆ ಈ ಬಾರಿಯ ಜನ್ಮಾಷ್ಟಮಿ ಹಿಂದೆಂದಿಂಗಿತಲೂ ವಿಭಿನ್ನವಾದುದು. ಶ್ರೀಕೃಷ್ಣನ ಮೇಲಿನ ಭಕ್ತಿಯೇ ನನ್ನ ಬದುಕಿಗೆ ಪ್ರೇರಣೆಯಾಗಿದೆ. ಎಲ್ಲವನ್ನೂ ಕಳೆದುಕೊಂಡರೂ ಇನ್ನೂ ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳದಿರಲು ಶ್ರೀಕೃಷ್ಣನೇ ಕಾರಣ ಎನ್ನುತ್ತಾರೆ. ಆದರೆ ನಗರ ಪ್ರದೇಶದಿಂದ ದೂರದಲ್ಲಿರುವ ಕಾರಣ ಈ ಆಶ್ರಮದ ಬಗ್ಗೆ ವಿಧವೆಯರಲ್ಲಿ ಒಂದು ರೀತಿಯ ಹಿಂಜರಿಕೆಯ ಭಾವ ಮೂಡಿದೆ. ಇಲ್ಲಿಗೆ ಬಂದರೆ ಜೈಲಿನಲ್ಲಿ ಕೂಡಿ ಹಾಕಿದಂತಾಗುತ್ತದೆ ಎಂಬ ಭಾವನೆ ಅವರಲ್ಲಿದೆ. ಕೇವಲ 23 ವಿಧವೆಯರು ಮಾತ್ರ ಇಲ್ಲಿಗೆ ಸ್ಥಳಾಂತರಗೊಳ್ಳಲು ಮುಂದೆ ಬಂದಿದ್ದಾರೆ.

ತಾವಿರುವ ಪರಿಸ್ಥಿತಿಯಿಂದ ವಿಧವೆಯರಲ್ಲಿ ಒಂದು ರೀತಿಯ ಭಯಮಿಶ್ರಿತ ಅಶಂಕೆಯ ಭಾವನೆ ಇರುತ್ತದೆ. ಶ್ರೀಕೃಷ್ಣ ಕುಟೀರದಂತಹ ಆಶ್ರಮದ ಬಗ್ಗೆ ಅವರಿಗೆ ತಿಳಿಸಿದರೆ ಅವರು ಅದನ್ನು ನಂಬುವುದಿಲ್ಲ, ಅಲ್ಲದೆ ತಮ್ಮಂತವರಿಗೆ ಇಲ್ಲಿ ಆಶ್ರಯ ಇರಲಾರದು ಎಂದೇ ಅವರ ಮನಸಲ್ಲಿರುತ್ತದೆ. ಈಗಿರುವ ಸದಸ್ಯೆಯರು ತಮ್ಮ ಅನುಭವವನ್ನು ಅವರಲ್ಲಿ ಹಂಚಿಕೊಂಡರೆ ಆಗ ಕ್ರಮೇಣ ಪರಿಸ್ಥಿತಿ ಸುಧಾರಿಸಬಹುದು . ಹೆಚ್ಚಿನ ವಿಧವೆಯರು ಕೃಷ್ಣ ಕುಟೀರಕ್ಕೆ ಸ್ಥಳಾಂತರಗೊಳ್ಳಬಹುದು ಎಂದು ಸಾಮಾಜಿಕ ಕಾರ್ಯಕರ್ತೆ ಸುಮಿತ್ರಾ ಸಿಂಗ್ ಹೇಳುತ್ತಾರೆ. ವಿಧವೆಯರಲ್ಲಿರುವ ಅಶಂಕೆಯನ್ನು ದೂರಗೊಳಿಸುವ ಪ್ರಯತ್ನ ಮಾಡಿರುವ ಕೇಂದ್ರ ಸಚಿವೆ ಮೇನಕಾ ಗಾಂಧಿ, ಕೃಷ್ಣ ಕುಟೀರವು ಪಂಚತಾರಾ ಹೋಟೆಲ್‌ಗಿಂತ ಎರಡು ಪಟ್ಟು ದೊಡ್ಡದಿದ್ದು ಆಧುನಿಕ ವ್ಯವಸ್ಥೆಯನ್ನು ಹೊಂದಿದೆ. ಇಲ್ಲಿ ವಿಧವೆಯರು ಸ್ವತಂತ್ರವಾಗಿ ಜೀವನ ಸಾಗಿಸಬಹುದು. ತಮ್ಮ ಇಚ್ಚೆಯಂತೆ ಬರಬಹುದು, ಹೋಗಬಹುದು. ಯಾರೂ ಅವರನ್ನು ಅಡ್ಡಿ ಪಡಿಸುವುದಿಲ್ಲ ಎಂದು ಮೇನಕಾ ಗಾಂಧಿ ಹೇಳಿದ್ದಾರೆ.

ಫ್ಯಾಶನ್ ಡಿಸೈನರ್ ಆಗುವಾಸೆ ಕೃಷ್ಣ ಕುಟೀರದ ವ್ಯವಸ್ಥೆ ಅತಂತ್ರ ಸ್ಥಿತಿಯಲ್ಲಿರುವ ವಿಧವೆಯರ ಬದುಕಿನಲ್ಲಿ ಆಶಾಕಿರಣ ಮೂಡಿಸಿದೆ. ಈ ಕುಟೀರಕ್ಕೆ ಸ್ಥಳಾಂತರಗೊಂಡಿರುವ 23 ವಿಧವೆಯರಲ್ಲಿ ಒಬ್ಬರಾಗಿರುವ ರಾಂಚಿಯ 45ರ ಹರೆಯದ ಸೌಮ್ಯಾ ಕುಮಾರಿಗೆ ಫ್ಯಾಶನ್ ಡಿಸೈನರ್ ಆಗುವ ಹಂಬಲವಿದೆ. ಕನಸು ನನಸಾಗಿಸಿಕೊಳ್ಳಲು ವಯಸ್ಸಿನ ನಿಬರ್ಂಧವಿಲ್ಲ. ಆಶ್ರಮದಲ್ಲಿರುವ ತರಬೇತಿ ಶಿಬಿರದಲ್ಲಿ ಅಗತ್ಯವಿರುವ ತರಬೇತಿ ಪಡೆದು ನನ್ನ ಗುರಿ ತಲುಪಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುತ್ತೇನೆ ಎಂದು ವಿಶ್ವಾಸದಿಂದ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News