ಮಾಲೆಗಾಂವ್ ಸ್ಫೋಟ ಪ್ರಕರಣ: ಕರ್ನಲ್ ಪುರೋಹಿತ್ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

Update: 2018-09-04 10:26 GMT

ಹೊಸದಿಲ್ಲಿ, ಸೆ.4: ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಸಂಚು ನಡೆಸಿದ ಆರೋಪ ಹೊತ್ತು ಪ್ರಸಕ್ತ ಜಾಮೀನಿನ ಮೇಲಿರುವ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಅವರನ್ನು ಅಪಹರಿಸಿ, ಅಕ್ರಮ ದಿಗ್ಬಂಧನದಲ್ಲಿರಿಸಿ ಚಿತ್ರಹಿಂಸೆ ನೀಡಲಾಗಿತ್ತು ಎಂಬ ಆರೋಪದ ಬಗ್ಗೆ ಎಸ್‍ಐಟಿ ತನಿಖೆ ಕೋರಿ ಪುರೋಹಿತ್ ಅವರೇ ಮಾಡಿದ ಅಪೀಲನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ.

ಅವರು ಮಾಡಿರುವ ಅಪೀಲನ್ನು ನಿರಾಕರಿಸಿದ ಜಸ್ಟಿಸ್ ರಂಜನ್ ಗೊಗೋಯಿ, ಜಸ್ಟಿಸ್ ನವೀನ್ ಸಿನ್ಹಾ ಹಾಗೂ ಕೆ ಎಂ ಜೋಸೆಫ್ ಅವರನ್ನೊಳಗೊಂಡ ಪೀಠ ಈ ಅಪೀಲನ್ನು ಒಪ್ಪಿದರೆ ಪ್ರಕರಣದ ವಿಚಾರಣೆಗೆ ಅದರಿಂದ ತೊಂದರೆಯಾಗಬಹುದು ಎಂದು ಅಭಿಪ್ರಾಯ ಪಟ್ಟಿದೆ.

ಆದರೆ ತಮ್ಮ ವಾದವನ್ನು ವಿಚಾರಣಾ ನ್ಯಾಯಾಲಯದಲ್ಲಿ ಮಂಡಿಸಲು ಪುರೋಹಿತ್ ಗೆ ಸುಪ್ರೀಂ ಕೋರ್ಟ್ ಅನುಮತಿಸಿದೆ. ಪುರೋಹಿತ್ ಅವರ ಆರೋಪವನ್ನು ಯಾವುದಾದರೂ ವೇದಿಕೆಯಲ್ಲಿ ಪರಿಗಣಿಸಬೇಕು ಎಂದು ಅವರ ವಕೀಲ ಹರೀಶ್ ಸಾಳ್ವೆ ವಾದವನ್ನು ಒಪ್ಪಿದ ಸುಪ್ರೀಂ ಕೋರ್ಟ್ ಮೇಲಿನಂತೆ ಅನುಮತಿಸಿದೆ.

ಸೆಪ್ಟೆಂಬರ್ 29, 2008ರಂದು ನಡೆದ ಮಾಲೆಗಾಂವ್ ಸ್ಫೋಟದಲ್ಲಿ ಆರು ಮಂದಿ ಬಲಿಯಾಗಿ 101 ಜನರು ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News