‘ನಾಯಿಯ ಬಾಯಿಯಲ್ಲಿ ಮೂಳೆಯಿದ್ದರೆ ಅದು ಬೊಗಳುವುದಿಲ್ಲ’

Update: 2018-09-04 10:55 GMT

ಹೊಸದಿಲ್ಲಿ, ಸೆ.4: ಮುಖ್ಯವಾಹಿನಿ ಮಾಧ್ಯಮಗಳನ್ನು ತೀವ್ರ ತರಾಟೆಗೆತ್ತಿಕೊಂಡ ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ಅವರು ನಾಯಿಯ ಬಾಯಿಯಲ್ಲಿ ಮೂಳೆಯಿದ್ದರೆ ಅದು ಬೊಗಳುವುದಿಲ್ಲ ಎಂದು ಕುಟುಕಿದ್ದಾರೆ. ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿದೆ. ಸರಕಾರವನ್ನು ಉತ್ತರದಾಯಿಯನ್ನಾಗಿಸುವುದು ಅದರ ಕರ್ತವ್ಯ. ವಿಷಾದವೆಂದರೆ ಅದು ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿಲ್ಲ ಎಂದು ಅವರು ಹೇಳಿದರು.

ರವಿವಾರ ಆಂಗ್ಲ ಸುದ್ದಿ ಜಾಲತಾಣ ‘ದಿ ವೈರ್’ನ ವೇದಿಕೆಯಲ್ಲಿ ಕಿಕ್ಕಿರಿದು ಸೇರಿದ್ದ ಸಭಿಕರ ಉಪಸ್ಥಿತಿಯಲ್ಲಿ ಶೌರಿ ಅವರು ಖ್ಯಾತ ಟಿವಿ ನಿರೂಪಕ ಕರಣ್ ಥಾಪರ್ ಅವರಿಗೆ ನೀಡಿದ ಸಂದರ್ಶನದಲ್ಲಿ,ಕೆಲವು ಪ್ರಕಟಣೆಗಳನ್ನು ಹೊರತುಪಡಿಸಿದರೆ ಮಾಧ್ಯಮಗಳು ಮಹತ್ವದ ಸುದ್ದಿಗಳ ಬೆನ್ನುಹತ್ತುವಲ್ಲಿ ವಿಫಲಗೊಂಡಿರುವ ಬಗ್ಗೆ ವಿವರವಾಗಿ ಮಾತನಾಡಿದರು.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರ ವ್ಯವಹಾರಗಳ ಕುರಿತು ತಾನು ಪ್ರಕಟಿಸಿದ್ದ ವರದಿಯಲ್ಲಿ ‘ದಿ ವೈರ್’ ಕಂಪನಿ ವ್ಯವಹಾರಗಳ ಇಲಾಖೆಯ ವೆಬ್‌ಸೈಟ್‌ನಲ್ಲಿದ್ದ ದಾಖಲೆಗಳನ್ನು ಮಾತ್ರ ಜನರ ಮುಂದಿರಿಸಿತ್ತು. ಈ ಬಗ್ಗೆ ಯಾರೂ ಮಾತನಾಡಕೂಡದು ಎಂದು ನೀವು(ಸರಕಾರ) ಹೇಳುತ್ತೀರಿ ಎಂದ ಶೌರಿ,ಮಾಧ್ಯಮಗಳು ವರದಿಗಳ ಬೆನ್ನು ಹತ್ತುವುದಿಲ್ಲ. ‘ದಿ ವೈರ್’ ವಿರುದ್ಧ ತಡೆಯಾಜ್ಞೆಯಿದ್ದರೆ ಇತರ ಪ್ರತಿಯೊಂದೂ ಮಾಧ್ಯಮ ವರದಿಯನ್ನು ಬೆನ್ನಟ್ಟಿ ಪ್ರಕಟಿಸುವುದು ಕರ್ತವ್ಯವಾಗುತ್ತದೆ ಎಂದರು.

 ಅಮೆರಿಕದ ಪೆಂಟಗಾನ್ ದಾಖಲೆಗಳ ನಿದರ್ಶನವನ್ನು ನೀಡಿದ ಅವರು, ಈ ದಾಖಲೆಗಳ ಬಗ್ಗೆ ಮೊದಲು ವರದಿಯನ್ನು ‘ದಿ ನ್ಯೂಯಾರ್ಕ್ ಟೈಮ್ಸ್ ’ ಪ್ರಕಟಿಸಿತ್ತು. ಆದರೆ ತಡೆಯಾಜ್ಞೆಯಿಂದಾಗಿ ಮುಂದಿನ ವರದಿಗಳನ್ನು ಪ್ರಕಟಿಸಲು ಟೈಮ್ಸ್‌ಗೆ ಅಸಾಧ್ಯವಾದಾಗ ಅದರ ಎದುರಾಳಿ ‘ವಾಷಿಂಗ್ಟನ್ ಪೋಸ್ಟ್ ’ಈ ವರದಿಯ ಬೆನ್ನು ಹತ್ತಿ ಹಲವಾರು ಲೇಖನಗಳನ್ನು ಪ್ರಕಟಿಸಿತ್ತು. ಸರಕಾರವು ಟೈಮ್ಸ್ ಮತ್ತು ಪೋಸ್ಟ್ ಎರಡನ್ನೂ ನ್ಯಾಯಾಲಯಕ್ಕೆಳೆದಿತ್ತು ಮತ್ತು ಅಲ್ಲಿ ಪ್ರತಿಕಾ ಸ್ವಾತಂತ್ರವನ್ನು ಎತ್ತಿಹಿಡಿದ ಐತಿಹಾಸಿಕ ತೀರ್ಪನ್ನು ಪಡೆದುಕೊಳ್ಳುವಲ್ಲಿ ಈ ಪತ್ರಿಕೆಗಳು ಗೆಲುವು ಸಾಧಿಸಿದ್ದವು ಎಂದು ನೆನಪಿಸಿದರು.

ಮುಕ್ತ ಪತ್ರಿಕಾ ಸ್ವಾತಂತ್ರವಿರುವ ಯಾವದೇ ದೇಶದಲ್ಲಿ ಒಂದು ಪತ್ರಿಕೆಯು ಹಗರಣವೊಂದರ ಕುರಿತು ಬರೆದರೆ ಇತರ ಕನಿಷ್ಠ 20 ಪತ್ರಿಕೆಗಳಾದರೂ ಆ ಹಗರಣವನ್ನು ಇನ್ನಷ್ಟು ಕೆದಕಿ ವರದಿಗಳನ್ನು ಪ್ರಕಟಿಸುತ್ತವೆ. ಈ ದೇಶದಲ್ಲಿ ಆ ಇತರ 20 ಪತ್ರಿಕೆಗಳು ಕಣದಿಂದ ಮಾಯವಾಗಿದ್ದವು. ‘ದಿ ಕಾರವಾನ್’ ಮಾತ್ರ ‘ದಿ ವೈರ್’ನ ವರದಿಯನ್ನು ಬೆನ್ನು ಹತ್ತಿ ತನ್ನ ವರದಿಗಳನ್ನು ಪ್ರಕಟಿಸಿತ್ತು ಎಂದು ಜಯ್ ಶಾ ಅವರ ಉದ್ಯಮ ಸಂಪತ್ತಿನ ಕುರಿತು ‘ದಿ ಕಾರವಾನ್’ ಕೈಗೊಂಡಿದ್ದ ತನಿಖೆಯನ್ನು ಬೆಟ್ಟು ಮಾಡುತ್ತ ಶೌರಿ ಹೇಳಿದರು. ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಇಂತಹ ಹಗರಣಗಳ ಬೆನ್ನು ಬೀಳುತ್ತಿಲ್ಲ ಎನ್ನುವುದು ನಿಮ್ಮ ಅಭಿಪ್ರಾಯವೇ ಎಂಬ ಸಂದರ್ಶಕ ಕರಣ್ ಥಾಪರ್ ಅವರ ಪ್ರಶ್ನೆಗೆೆ ಉತ್ತರವಾಗಿ ಶೌರಿ ‘ನಾಯಿಯ ಬಾಯಿಯಲ್ಲಿ ಮೂಳೆಯಿದ್ದರೆ ಅದು ಬೊಗಳುವುದಿಲ್ಲ’ಎಂಬ ಝುಲು ಗಾದೆಯನ್ನು ಪುನರುಚ್ಚರಿಸಿದರು.

ಭೀತಿಯಿಂದಾಗಿ ಮಾಧ್ಯಮಗಳು ಸತ್ಯವನ್ನು ಹೇಳುತ್ತಿಲ್ಲ ಎನ್ನುವುದನ್ನು ತಾನು ನಂಬುವುದಿಲ್ಲ. ಅವು ಲಾಲಸೆಯಿಂದಾಗಿ ಹಗರಣಗಳ ಬೆನ್ನು ಬೀಳುತ್ತಿಲ್ಲ ಎಂದು ತಾನು ಭಾವಿಸಿದ್ದೇನೆ. ಭೀತಿ ಎನ್ನುವುದು ಮಾಧ್ಯಮಗಳು ಹೇಳುತ್ತಿರುವ ಕುಂಟುನೆಪವಾಗಿದೆ ಅಷ್ಟೇ ಎಂದರು.

ಮಾಧ್ಯಮಗಳ ಬಗ್ಗೆ ನೀವು ನಿರಾಶರಾಗಿದ್ದೀರಾ,ಜಿಗುಪ್ಸೆಗೊಂಡಿದ್ದೀರಾ ಎಂಬ ಪ್ರಶ್ನೆಗೆ ಅವರು,ನಾನು ಅವೆಲ್ಲವನ್ನೂ ಅನುಭವಿಸಿದ್ದೇನೆ. ಮಾಧ್ಯಮಗಳಲ್ಲಿ ಎಂತಹ ಭಾರೀ ಬದಲಾವಣೆಯಾಗಿದೆ ಎಂದರೆ ನಿರಾಶೆ ಅಥವಾ ಜಿಗುಪ್ಸೆಗೊಂಡು ನೀವು ನಿಮ್ಮ ಭಾವನೆಗಳನ್ನು ವ್ಯರ್ಥ ಮಾಡುತ್ತಿದ್ದೀರಿ ಎಂದು ಶೌರಿ ಉತ್ತರಿಸಿದರು.

ಮಾಧ್ಯಮಗಳ ಧ್ವನಿಯುಡುಗಿಸುವಲ್ಲಿ ಭೀತಿ ಮತ್ತು ಬೆದರಿಕೆಗಳೂ ಪಾತ್ರ ವಹಿಸಿವೆ ಎಂದ ಅವರು,ಇದರಲ್ಲಿ ಯಾವುದೇ ಶಂಕೆ ಬೇಡ. ಎಬಿಪಿ ನ್ಯೂಸ್ ತನ್ನಿಬ್ಬರು ಪತ್ರಕರ್ತರನ್ನು ಅನಿವಾರ್ಯವಾಗಿ ವಜಾಗೊಳಿಸುವಂತಾಗಿತ್ತು. ಮುಖ್ಯ ವಾಹಿನಿಗಳಲ್ಲಿ ನಿರೂಪಕರಾಗಬೇಕಿದ್ದ ನೀವು(ಥಾಪರ್) ಅಲ್ಲಿಂದ ವಂಚಿತರಾಗಿದ್ದೀರಿ. ಎನ್‌ಡಿಟಿವಿ ಕೂಡ ಒತ್ತಡಗಳನ್ನು ಎದುರಿಸುತ್ತಿದೆ. ಇದು ಅದರ(ಸರಕಾರ)ದ ಕಾರ್ಯತಂತ್ರವಾಗಿದೆ. ನೀವು ಎಲ್ಲರಿಗೂ ಬೆದರಿಕೆಯನ್ನೊಡ್ಡಬೇಕಿಲ್ಲ ಎಂದರು.

ದಿ ವೈರ್,ಸ್ಕೃೋಲ್,ಆಲ್ಟ್‌ನ್ಯೂಸ್‌ನಂತಹ ನಿರ್ಭೀತ ಮಾಧ್ಯಮಗಳನ್ನು ಬೆಂಬಲಿಸುವಂತೆ ಓದುಗರಿಗೆ ಸಲಹೆ ನೀಡಿದ ಶೌರಿ,ಕಾಪಿಯಿಸ್ಟ್‌ಗಳ ಕೈಗಳೇ ನಮ್ಮ ಮುದ್ರಣ ಯಂತ್ರಗಳಾಗಿವೆ ಎಂದು ಗಾಂಧೀಜಿ ಹೇಳುತ್ತಿದ್ದರು. ಇಂದು ನಿಮ್ಮ ಬಳಿ ಇಂಟರ್ನೆಟ್ ಇದೆ. ನ್ಯಾಯಾಲಯವು ಯಾವುದಾದರೂ ಹಗರಣದ ವರದಿಗೆ ತಡೆಯಾಜ್ಞೆ ನೀಡಿದರೆ ನಾವೆಲ್ಲ ಅದನ್ನು ಚಲಾವಣೆ ಮಾಡೋಣ. ಸಾವಿರಾರು ಜನರು ಇಂತಹ ವರದಿಗಳನ್ನು ಅಂತರ್ಜಾಲದಲ್ಲಿ ಪೋಸ್ಟ್ ಮಾಡಿದರೆ ಅದು ಭಾರತದಾದ್ಯಂತ ತಲುಪುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News