ಮೀಟರ್ ಬಡ್ಡಿ ಕಡಿವಾಣಕ್ಕೆ ಬಡವರ ಬಂಧು ಯೋಜನೆ

Update: 2018-09-04 13:08 GMT

ಬೆಂಗಳೂರು, ಸೆ.4: ಮೀಟರ್ ಬಡ್ಡಿ ದಂಧೆಯಿಂದ ಬೀದಿ ವ್ಯಾಪಾರಿಗಳನ್ನು ರಕ್ಷಿಸುವ ಸಲುವಾಗಿ ಸರಕಾರದ ವತಿಯಿಂದ ಬಡವರ ಬಂಧು ಯೋಜನೆಯಡಿ ಹಣಕಾಸು ಸಹಾಯ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್ ತಿಳಿಸಿದರು.

ನಗರದ ಯಶವಂತಪುರದ ಹಣ್ಣು ಮತ್ತು ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿ, ಬೀದಿ ವ್ಯಾಪಾರಿಗಳ ಅಹವಾಲು ಸ್ವೀಕರಿಸಿದ ಅವರು, ಬಡ್ಡಿ ವ್ಯವಹಾರದಲ್ಲಿ ತೊಡಗಿರುವವರು ಬೀದಿ ಬದಿಯ ವ್ಯಾಪಾರಿಗಳ ಅಸಹಾಯಕತೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವ್ಯಾಪಾರಿಗಳು ತಮ್ಮ ಬಹುತೇಕ ದುಡಿಮೆಯನ್ನು ಮೀಟರ್ ಬಡ್ಡಿಗೆ ಕಟ್ಟಬೇಕಾದ ಅನಿವಾರ್ಯ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಮೀಟರ್ ಬಡ್ಡಿ ದಂಧೆ ನಿರ್ಮೂಲನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಮುಖ್ಯವಾಗಿ ಬೀದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಮೊಬೈಲ್ ಆ್ಯಪ್ ಆಧಾರಿತ ಬಡ್ಡಿ ಹಾಗೂ ಆಧಾರ ರಹಿತ ಹಣ ಸಹಾಯ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಇದರಿಂದ ವ್ಯಾಪಾರಸ್ಥರು ತಮ್ಮ ದುಡಿಮೆಯ ಹಣವನ್ನು ಅನಗತ್ಯವಾಗಿ ಬೇರೆಯವರೆಗೆ ಒತ್ತೆಯಿಡುವ ಅಗತ್ಯ ಬೀಳುವುದಿಲ್ಲವೆಂದು ಅವರು ಹೇಳಿದರು.

ಬಡವರ ಬಂಧು ಯೋಜನಯಡಿ ಬೀದಿ ಬದಿಯ ವ್ಯಾಪಾರಿಗಳ ಒಂದು ದಿನದ ವ್ಯಾಪಾರಕ್ಕೆ ಬೇಕಾಗುವ ಹಣವನ್ನು ಬೆಳಗ್ಗೆ ನೀಡಿ ಮತ್ತೆ ರಾತ್ರಿ ವಾಪಸ್ ಪಡೆಯಲಾಗುತ್ತದೆ. ಇದರಿಂದ ಖಾಸಗಿಯವರು ನೀಡುವ ಮೀಟರ್ ಬಡ್ಡಿ ಸಾಲಕ್ಕೆ ವ್ಯಾಪಾರಿಗಳು ಬಲಿಯಾಗುವುದನ್ನು ತಡೆಯಬಹುದಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News