ಇವಿಎಂ ನಿರ್ವಹಣೆ ಅಧಿಕೃತ ವ್ಯಕ್ತಿಗಳಿಗೆ ಮಾತ್ರ ಸೀಮಿತಗೊಳಿಸಲು ಕೋರಿ ಅರ್ಜಿ: ವಿಚಾರಣೆಗೆ ಒಪ್ಪಿದ ಸುಪ್ರೀಂ

Update: 2018-09-04 13:40 GMT

ಹೊಸದಿಲ್ಲಿ,ಸೆ.4: ವಿದ್ಯುನ್ಮಾನ ಮತದಾನ ಯಂತ್ರ(ಇವಿಎಂ)ಗಳ ನಿರ್ವಹಣೆಯನ್ನು ಅಗತ್ಯ ಭದ್ರತಾ ಒಪ್ಪಿಗೆಗಳ ಬಳಿಕ ಅಧಿಕೃತ ಇಂಜಿನಿಯರ್‌ಗಳಿಗೆ ಮಾತ್ರ ಸೀಮಿತಗೊಳಿಸಲು ನಿರ್ದೇಶನ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಒಪ್ಪಿಕೊಂಡಿದೆ.

ಇಂತಹ ಅಧಿಕೃತ ಇಂಜಿನಿಯರ್‌ಗಳ ಪಟ್ಟಿಯನ್ನು ಬಹಿರಂಗಗೊಳಿಸಬೇಕು ಮತ್ತು ಅದನ್ನು ಚುನಾವಣೆಯಲ್ಲಿ ಸ್ಪರ್ಧಿಸುವ ರಾಜಕೀಯ ಪಕ್ಷಗಳಿಗೆ ಲಭ್ಯವಾಗಿಸಬೇಕು ಹಾಗೂ ಚುನಾವಣಾ ಆಯೋಗದ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಬೇಕು ಎಂದು ಅರ್ಜಿದಾರರಾಗಿರುವ ಉತ್ತರಾಖಂಡದ ನಿವಾಸಿ,ಪತ್ರಕರ್ತ ಆಶಿಷ್ ಗೋಯಲ್ ಅವರು ಕೋರಿದ್ದಾರೆ.

ಎರಡು ವಾರಗಳ ನಂತರ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಮತ್ತು ಅಶೋಕ ಭೂಷಣ್ ಅವರ ಪೀಠವು ತಿಳಿಸಿತು.

ಚುನಾವಣೆಗಳ ಸಮಯದಲ್ಲಿ ಇಸಿಐಎಲ್ ಮತ್ತು ಬಿಇಎಲ್‌ನ ಅಧಿಕೃತ ಇಂಜಿನಿಯರ್‌ಗಳು ಇವಿಎಮ್‌ಗಳ ನಿರ್ವಹಣೆಯನ್ನು ನೋಡಿಕೊಳ್ಳುತ್ತಾರೆ ಎಂದು ತಿಳಿಸಿರುವ ಅರ್ಜಿಯು,ಆಯೋಗದ ಜೊತೆಗೆ ಇವೆರಡು ಸಂಸ್ಥೆಗಳನ್ನೂ ಪ್ರತಿವಾದಿಗಳನ್ನಾಗಿಸಿದೆ.

 ಇಸಿಐಎಲ್ ಮತ್ತು ಬಿಇಎಲ್ ಉದ್ಯೋಗಿಗಳು ಮಾತ್ರ ಇವಿಎಮ್‌ಗಳನ್ನು ನಿರ್ವಹಿಸಲು ಅವಕಾಶ ನೀಡಲಾಗಿದೆ ಎಂದು ಆಯೋಗವು ತಿಳಿಸಿದೆಯಾದರೂ,ಇಸಿಐಎಲ್ ಪರವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಹಲವಾರು ಸಲಹೆಗಾರರಿಗೆ ಇವಿಎಮ್‌ಗಳನ್ನು ಮುಟ್ಟಲು ಅವಕಾಶ ನೀಡಲಾಗುತ್ತಿದೆ ಎನ್ನುವುದು ಬೆಳಕಿಗೆ ಬಂದಿದೆ. ಇದು ಇವಿಎಂ ಮತ್ತು ವಿವಿಪ್ಯಾಟ್‌ಗಳ ಕುರಿತಂತೆ ಆಯೋಗದ ನಿಯಮಾವಳಿಗಳಿಗೆ ಸಂಪೂರ್ಣ ವಿರುದ್ಧವಾಗಿದೆ ಎಂದು ಗೋಯಲ್ ಅರ್ಜಿಯಲ್ಲಿ ದೂರಿದ್ದಾರೆ.

ಸಲಹೆಗಾರರಂತಹ ಹೊರಗಿನ ವ್ಯಕ್ತಿಗಳಿಗೆ,ಅದೂ ಅಗತ್ಯ ಭದ್ರತೆ/ಹಿನ್ನೆಲೆ ತಪಾಸಣೆಯಿಲ್ಲದೆ ಇವಿಎಮ್‌ಗಳನ್ನು ಮುಟ್ಟಲು ಅವಕಾಶ ನೀಡಿರುವುದು ಈ ಯಂತ್ರಗಳ ಪ್ರಾಮಾಣಿಕತೆಯ ಬಗ್ಗೆ ಶಂಕೆಯನ್ನು ಮೂಡಿಸುತ್ತಿದೆ ಎಂದೂ ಅರ್ಜಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News