‘ರಾಯ್ಟರ್ಸ್’ ಪತ್ರಕರ್ತರನ್ನು ತಕ್ಷಣ ಬಿಡುಗಡೆ ಮಾಡಿ: ಮ್ಯಾನ್ಮಾರ್‌ಗೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿ ಒತ್ತಾಯ

Update: 2018-09-04 15:42 GMT

ಜಿನೇವ, ಸೆ. 4: ಇಬ್ಬರು ‘ರಾಯ್ಟರ್ಸ್’ ಪತ್ರಕರ್ತರಿಗೆ ಮ್ಯಾನ್ಮಾರ್ ವಿಧಿಸಿದ 7 ವರ್ಷಗಳ ಜೈಲು ಶಿಕ್ಷೆಯಿಂದ ತಾನು ಆಘಾತಗೊಂಡಿದ್ದೇನೆ ಎಂದು ಹೇಳಿರುವ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯ ನೂತನ ಮುಖ್ಯಸ್ಥೆ ಮಿಚೆಲ್ ಬ್ಯಾಚೆಲೆಟ್, ಪತ್ರಕರ್ತರನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಆ ದೇಶವನ್ನು ಒತ್ತಾಯಿಸಿದ್ದಾರೆ.

ವಿಶ್ವಸಂಸ್ಥೆಯ ಮಾನವಹಕ್ಕುಗಳ ಹೈಕಮಿಶನರ್ ಆಗಿ ಸೋಮವಾರ ಅಧಿಕಾರ ವಹಿಸಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚಿಲಿಯ ಮಾಜಿ ಅಧ್ಯಕ್ಷೆಯೂ ಆಗಿರುವ ಮಿಚೆಲ್, ‘‘ನನಗೆ ಆಘಾತವಾಗಿದೆ’’ ಎಂದರು.

‘‘ವಿಚಾರಣೆ ಎನ್ನುವುದು ನ್ಯಾಯದ ಅಪಹಾಸ್ಯದಂತಾಗಿದೆ. ಇಬ್ಬರು ಪತ್ರಕರ್ತರನ್ನು ತಕ್ಷಣ ಹಾಗೂ ಬೇಶರತ್ತಾಗಿ ಬಿಡುಗಡೆಗೊಳಿಸುವಂತೆ ನಾನು ಮ್ಯಾನ್ಮಾರನ್ನು ಒತ್ತಾಯಿಸುತ್ತೇನೆ’’ ಎಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದರು.

 ‘ರಾಯ್ಟರ್ಸ್’ ಪತ್ರಕರ್ತರಾದ ವಾ ಲೋನೆ (32) ಮತ್ತು ಕ್ಯಾವ್ ಸೋ ಓ (28) ಅವರನ್ನು ಕಳೆದ ವರ್ಷದ ಡಿಸೆಂಬರ್‌ನಿಂದ ರಾಜಧಾನಿ ಯಾಂಗನ್‌ನ ಇನ್ಸೀನ್ ಜೈಲಿನಲ್ಲಿ ಇರಿಸಲಾಗಿದೆ. ಅವರ ವಿರುದ್ಧ ಮ್ಯಾನ್ಮಾರ್‌ನ ಸರಕಾರಿ ರಹಸ್ಯಗಳ ಕಾನೂನು ಉಲ್ಲಂಘಿಸಿದ ಆರೋಪವನ್ನು ಹೊರಿಸಲಾಗಿದೆ.

ದೇಶದ ಅಲ್ಪಸಂಖ್ಯಾತ ರೊಹಿಂಗ್ಯಾ ಮುಸ್ಲಿಮರ ಮೇಲೆ ಸೇನೆ ನಡೆಸಿದ ಅಮಾನುಷ ದೌರ್ಜನ್ಯದ ಬಗ್ಗೆ ವರದಿ ಮಾಡಿರುವುದಕ್ಕಾಗಿ ಅವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ಆರೋಪಿಸಲಾಗಿದೆ.

ಪತ್ರಕರ್ತರನ್ನು ಬೆದರಿಸುವ ತಂತ್ರ

ಇದು ಕಳೆದ ವರ್ಷ ನಡೆದ ರೊಹಿಂಗ್ಯಾ ಹತ್ಯಾಕಾಂಡದ ಬಗ್ಗೆ ವರದಿ ಮಾಡದಂತೆ ಪತ್ರಕರ್ತರನ್ನು ಬೆದರಿಸುವ ತಂತ್ರವಾಗಿದೆ ಎನ್ನಲಾಗಿದೆ.

 ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿರುವ ‘ರಾಯ್ಟರ್ಸ್’ ಪತ್ರಕರ್ತರು, ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಸೇನೆಯು ರಖೈನ್ ರಾಜ್ಯದಲ್ಲಿರುವ ಇನ್ ದಿನ್‌ನಲ್ಲಿ ನಡೆಸಿದ 10 ರೊಹಿಂಗ್ಯಾ ಮುಸ್ಲಿಮರ ಹತ್ಯಾಕಾಂಡವನ್ನು ವರದಿ ಮಾಡಿರುವುದಕ್ಕಾಗಿ ತಮಗೆ ನೀಡಿದ ಶಿಕ್ಷೆಯಾಗಿದೆ ಎಂದು ಹೇಳಿದ್ದಾರೆ.

ಸ್ವತಃ ಚಿತ್ರಹಿಂಸೆಗೆ ಒಳಗಾಗಿದ್ದ ನೂತನ ಮಾನವಹಕ್ಕುಗಳ ಮುಖ್ಯಸ್ಥೆ

ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯ ನೂತನ ಮುಖ್ಯಸ್ಥೆಯಾಗಿರುವ ಮಿಚೆಲ್ ಬ್ಯಾಚೆಲೆಟ್, ಚಿಲಿಯ ಮಾಜಿ ಅಧ್ಯಕ್ಷೆಯೂ ಆಗಿದ್ದಾರೆ.

ಅವರು 23ರ ಹರೆಯದಲ್ಲಿ ದೇಶದ ಸರ್ವಾಧಿಕಾರಿ ನಾಯಕತ್ವದಿಂದ ಹಿಂಸೆಗೆ ಒಳಗಾಗಿದ್ದರು ಹಾಗೂ ದೇಶದಿಂದ ಪಲಾಯನಗೈದಿದ್ದರು.

66 ವರ್ಷದ ಬ್ಯಾಚೆಲೆಟ್, ತನ್ನು ಕುಟುಂಬವನ್ನು ಸರ್ವನಾಶ ಮಾಡಿದ ಚಿಲಿಯ ಅಮಾನುಷ ಸರ್ವಾಧಿಕಾರಿ ನಾಯಕತ್ವವನ್ನು ಮರೆತಿಲ್ಲ.

ಅವರ ತಂದೆ ಏರ್ ಫೋರ್ಸ್ ಜನರಲ್ ಆಲ್ಬರ್ಟೊ ಬ್ಯಾಚೆಲೆಟ್ ಸೆರೆಮನೆಯಲ್ಲಿ ಚಿತ್ರಹಿಂಸೆಗೆ ಒಳಗಾಗಿ 1974ರಲ್ಲಿ ಮೃತಪಟ್ಟರು. 1973ರ ಸೇನಾ ಕ್ಷಿಪ್ರಕಾಂತಿಯನ್ನು ವಿರೋಧಿಸಿದುದಕ್ಕಾಗಿ, ಜನರಲ್ ಆಗಸ್ಟೊ ಪಿನೊಚೆಟ್‌ರ ಸೇನಾ ಸರಕಾರ ಅವರನ್ನು ದೇಶದ್ರೋಹಿ ಎಂದು ಘೋಷಿಸಿ ಜೈಲಿನಲ್ಲಿಟ್ಟಿತು.

ಕ್ಷಿಪ್ರಕ್ರಾಂತಿಯು ಅಧ್ಯಕ್ಷ ಸಾಲ್ವಡೋರ್ ಅಲೆಂಡ್‌ರ ಸರಕಾರವನ್ನು ಉರುಳಿಸಿತು.

1975ರಲ್ಲಿ ಮಿಶೆಲ್ ಬ್ಯಾಚೆಲೆಟ್ ಮತ್ತು ಅವರ ತಾಯಿಯನ್ನು ಬಂಧಿಸಲಾಯಿತು. ಮಿಶೆಲ್ ಆ ಸಂದರ್ಭದಲ್ಲಿ ಸೋಶಿಯಲ್ ಪಾರ್ಟಿಯ ಸಕ್ರಿಯ ಕಾರ್ಯಕರ್ತೆಯಾಗಿದ್ದರು. ರಹಸ್ಯ ಜೈಲಿನಲ್ಲಿ ತಾನು ಅನುಭವಿಸಿದ ಯಾತನೆಯನ್ನು ಹೇಳಿಕೊಳ್ಳಲು ಅವರು ಬಯಸುವುದಿಲ್ಲ. ತಾನು ‘ದೈಹಿಕ ಸಂಕಷ್ಟ’ಗಳನ್ನು ಅನುಭವಿಸಿದೆ ಎಂದಷ್ಟೇ ಅವರು ತನ್ನ ಆತ್ಮಚರಿತ್ರೆಯಲ್ಲಿ ಹೇಳಿದ್ದಾರೆ.

ಕುಟುಂಬದ ರಾಜಕೀಯ ಸಂಪರ್ಕಗಳನ್ನು ಬಳಸಿಕೊಂಡು ಅವರು ಆಸ್ಟ್ರೇಲಿಯಕ್ಕೆ ಪಲಾಯನಗೈದರು. ಬಳಿಕ ಪೂರ್ವ ಜರ್ಮನಿಗೆ ತೆರಳಿದರು.

ಪೂರ್ವ ಜರ್ಮನಿಯಲ್ಲಿ ಅವರ ತನ್ನ ಸಂಗಾತಿಯನ್ನು ಮರುಭೇಟಿಯಾದರು. ಅವರ ಸಂಗಾತಿ ಜೈಮ್ ಲೊಪೆಝ್ ಸೋಶಿಯಲಿಸ್ಟ್ ಪಕ್ಷದ ನಾಯಕನಾಗಿದ್ದರು.

ಚಿಲಿಗೆ ಮರಳಿದ ಲೊಪೆಝ್‌ರನ್ನು ಸರ್ವಾಧಿಕಾರಿ ಆಡಳಿತ ಬಂಧಿಸಿತು. ಬಳಿಕ ಅವರು ‘ನಾಪತ್ತೆ’ಯಾದರು.

1979ರಲ್ಲಿ ಚಿಲಿಗೆ ಮರಳಿ ವೈದ್ಯಕೀಯ ಅಭ್ಯಾಸ ಮಾಡಿದರು.

ಅವರು 2006ರಲ್ಲಿ ಚಿಲಿಯ ಪ್ರಥಮ ಮಹಿಳಾ ಅಧ್ಯಕ್ಷರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News