ನಕಲಿ ಎಟಿಎಂ ಕಾರ್ಡ್ ಬಳಸಿ ಹಣ ಎಗರಿಸುತ್ತಿದ್ದ ವಿದೇಶಿ ಕಳ್ಳರ ಬಂಧನ

Update: 2018-09-05 15:11 GMT

ಬೆಂಗಳೂರು, ಸೆ.5: ನಕಲಿ ಎಟಿಎಂ ಕಾರ್ಡ್‌ಗಳನ್ನು ತಯಾರಿಸಿ ಬ್ಯಾಂಕ್ ಗ್ರಾಹಕರ 25 ಲಕ್ಷಕ್ಕೂ ಹೆಚ್ಚಿನ ನಗದು ಪಡೆದಿದ್ದ ಆರೋಪದಡಿ ಇಬ್ಬರು ಉಂಗಾಡ ದೇಶದ ಪ್ರಜೆಗಳನ್ನು ಬಂಧಿಸುವಲ್ಲಿ ಕೊತ್ತನೂರು ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೊತ್ತನೂರಿನ ಎಸ್.ಆರ್.ಕೆ. ನಗರದ ಕೆಂಪೇಗೌಡನಗರದ 1ನೆ ಕ್ರಾಸ್‌ನಲ್ಲಿ ನೆಲೆಸಿದ್ದ ಬಬಲಂದಾ ಅಮುನೊನ್(25), ಎಂ.ಎಸ್.ಪಾಳ್ಯ ರಾಜೀವ್ ಗಾಂಧಿ ನಗರದ 2ನೆ ಕ್ರಾಸ್ ನಿವಾಸಿ ಒಂಡಿಗೊ ಆಂಬ್ರೋಸ್(22) ಬಂಧಿತ ಪ್ರಜೆಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧನದಿಂದ ಕೊತ್ತನೂರು ಪೊಲೀಸ್ ಠಾಣೆ ಮತ್ತು ನಗರದ ಇತರ ಠಾಣೆಗಳ ವ್ಯಾಪ್ತಿಗಳಲ್ಲಿ ನಡೆದಿದ್ದ 20ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳಿಬ್ಬರು, ಬೆಂಗಳೂರು ಮಾತ್ರವಲ್ಲದೆ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತಿತರ ಕಡೆಗಳಲ್ಲಿ ನಕಲಿ ಎಟಿಎಂ ಕಾರ್ಡ್‌ಗಳನ್ನು ಬಳಸಿ ಸಾರ್ವಜನಿಕರ ಸುಮಾರು 25 ಲಕ್ಷಕ್ಕೂ ಹೆಚ್ಚು ಹಣವನ್ನು ತೆಗೆದು ವಂಚನೆ ಮಾಡಿರುವುದಾಗಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಆರೋಪಿಗಳು ಆ.28ರಂದು ಸಂಜೆ 4:30ರ ಸುಮಾರಿಗೆ ಹೆಗಡೆ ನಗರ ವೃತ್ತದಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ಒಳಗೆ ಮೈಕ್ರೋ ಕ್ಯಾಮರಾ ಪ್ಲೇಟ್ ಅಳವಡಿಸುತ್ತಿದ್ದಾಗ ಅನುಮಾನಗೊಂಡ ಗಸ್ತಿನಲ್ಲಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಎಟಿಎಂ ರೀಡ್ ಮಾಡುವ ಸ್ಕಿಮ್ಮರ್ ಮತ್ತು ಎಟಿಎಂ ಪಿನ್ ಕಾರ್ಡ್ ರೀಡ್ ಮಾಡುವ ಚಿಪ್ ಹೊಂದಿರುವ ಮೈಕ್ರೋ ಕ್ಯಾಮರಾ ಪ್ಲೇಟ್‌ಗಳನ್ನು ಮೊದಲು ಎಟಿಎಂಗೆ ಅಳವಡಿಸುತ್ತಿದ್ದರು. ಲ್ಯಾಪ್‌ಟಾಪ್‌ನ ಸ್‌ಟಾವೇರ್ ಮೂಲಕ ಕ್ಯಾಮರಾ ಪ್ಲೇಟ್‌ನ ಡಾಟಾವನ್ನು ನಕಲಿ ಎಟಿಎಂ ಕಾರ್ಡ್‌ಗೆ ರವಾನಿಸಿ ನಂತರ ಎಟಿಎಂ ಗಳಿಗೆ ಹೋಗಿ ಗ್ರಾಹಕರ ಹಣ ತೆಗೆದುಕೊಂಡು ವಂಚಿಸುತ್ತಿದ್ದರು ಎಂಬುದನ್ನು ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾರೆ.

ಆರೋಪಿಗಳಿಂದ ಎರಡು ಲ್ಯಾಪ್‌ಟಾಪ್, ಡೇಟಾ ನಕಲಿ ಎಟಿಎಂ ಕಾರ್ಡ್‌ಗೆ ವರ್ಗಾಯಿಸುವ ಎರಡು ಯಂತ್ರ, ನಾಲ್ಕು ಎಟಿಎಂ ಕಾರ್ಡ್ ಸ್ಕಿಮ್ಮರ್ ಪ್ಲೇಟ್, ಎರಡು ಚಿಪ್, ಮೈಕ್ರೋ ಕ್ಯಾಮರಾ ಪ್ಲೇಟ್, ಬ್ಯಾಟರಿಗಳು, ಎಂಟಿಎಸ್, ಇಂಟರ್ ನೆಟ್ ಡಾಂಗಲ್, 9 ಮೊಬೈಲ್, ಪಿನ್ ಹೊಂದಿರುವ 20 ಎಟಿಎಂ ಕಾರ್ಡ್, 60 ಖಾಲಿ ಕಾರ್ಡ್, ಬಿಳಿ ಬಣ್ಣದ 100 ಎಟಿಎಂ ಕಾರ್ಡ್ ಇರುವ ಬಂಡಲ್, 60 ಸಾವಿರ ರೂ.ನಗದು, ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News