ತಮಿಳುನಾಡು ಸಚಿವ, ಪೊಲೀಸ್ ಮುಖ್ಯಸ್ಥರ ಮನೆ ಮೇಲೆ ಸಿಬಿಐ ದಾಳಿ

Update: 2018-09-05 06:14 GMT

ಚೆನ್ನೈ, ಸೆ.5: ಬಹುಕೋಟಿ ರೂ. ಮೊತ್ತದ ಚೆನ್ನೈ ಗುಟ್ಕಾ ಹಗರಣಕ್ಕೆ ಸಂಬಂಧಿಸಿ ಸಿಬಿಐ ಅಧಿಕಾರಿಗಳು ತಮಿಳುನಾಡು ಆರೋಗ್ಯ ಸಚಿವ ಸಿ.ವಿಜಯ ಭಾಸ್ಕರ್ ಹಾಗೂ ಪೊಲೀಸ್ ಮಹಾನಿರ್ದೇಶಕ ಟಿಕೆ ರಾಜೇಂದ್ರನ್ ಹಾಗೂ ಇತರ ಅಧಿಕಾರಿಗಳ ಮನೆ ಸಹಿತ 40 ಪ್ರದೇಶಗಳ ಮೇಲೆ ಏಕಕಾಲದಲ್ಲಿ ಬುಧವಾರ ದಾಳಿ ನಡೆಸಿದ್ದಾರೆ.

ಮದ್ರಾಸ್ ಹೈಕೋರ್ಟ್ ಬಹುಕೋಟಿ ರೂ. ಗುಟ್ಕಾ ಹಗರಣದ ಬಗ್ಗೆ ತನಿಖೆ ನಡೆಸುವಂತೆ ಸಿಬಿಐಗೆ ಆದೇಶಿಸಿದ ಮೂರು ತಿಂಗಳ ಬಳಿಕ ಈ ದಾಳಿ ನಡೆದಿದೆ.

 ಕಳೆದ ವರ್ಷ ಜುಲೈನಲ್ಲಿ ಆದಾಯ ತೆರಿಗೆ ಇಲಾಖೆಯು ತಮಿಳುನಾಡಿನ ಪಾನ್ ಮಸಾಲ ಹಾಗೂ ಗುಟ್ಕಾ ತಯಾರಕ ಕಂಪೆನಿಯ ಗೋಡೌನ್, ಕಚೇರಿಗಳು ಹಾಗೂ ನಿವಾಸಕ್ಕೆ ದಾಳಿ ನಡೆಸಿದ ಬಳಿಕ ಗುಟ್ಕಾ ಹಗರಣ ಬೆಳಕಿಗೆ ಬಂದಿತ್ತು. 250 ಕೋ ರೂ. ತೆರಿಗೆ ವಂಚನೆ ವಿಚಾರವೂ ಹೊರ ಬಿದ್ದಿತ್ತು.

ಐಟಿ ಅಧಿಕಾರಿಗಳು ವಶಪಡಿಸಿಕೊಂಡ ಡೈರಿಯಲ್ಲಿ ತಂಬಾಕು ಉದ್ಯಮಿ ಮಾಧವ್ ರಾವ್ ಅವರು ತ.ನಾಡು ಆರೋಗ್ಯ ಸಚಿವ ಭಾಸ್ಕರ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸಹಿತ ಹಲವು ರಾಜಕಾರಣಿಗಳು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಲಂಚ ನೀಡಿರುವ ವಿಚಾರ ಬೆಳಕಿಗೆ ಬಂದಿತ್ತು. . ತಮಿಳುನಾಡು ಸರಕಾರ 2013ರಲ್ಲಿ ಜಗಿಯುವ ತಂಬಾಕುಗಳ ಉತ್ಪಾದನೆ, ಶೇಖರಣೆ ಹಾಗೂ ಮಾರಾಟವನ್ನು ನಿಷೇಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News