ಸನಾತನ ಸಂಸ್ಥೆ ನಿಷೇಧಿಸಲು ಒತ್ತಾಯಿಸಿ ಗೌರಿ ಲಂಕೇಶ್ ಬಳಗದಿಂದ ರಾಜಭವನ ಚಲೋ

Update: 2018-09-05 12:26 GMT

ನಟ ಪ್ರಕಾಶ್ ರೈ, ಕನ್ನಯ್ಯಾ ಕುಮಾರ್ ಭಾಗಿ

ಬೆಂಗಳೂರು, ಸೆ.5: ಪ್ರಗತಿಪರ ಚಿಂತಕಿ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸೇರಿದಂತೆ ವಿಚಾರವಾದಿಗಳ ಹತ್ಯೆಯಲ್ಲಿ ಭಾಗಿಯಾಗಿರುವ ಸನಾತನ ಸಂಸ್ಥೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಲಂಕೇಶ್ ಬಳಗ ರಾಜಭವನ ಚಲೋ ಹಮ್ಮಿಕೊಂಡಿತ್ತು.

ರಾಜಭವನ ಚಲೋಗೂ ಮುನ್ನ ನಗರದ ಮೌರ್ಯ ಸರ್ಕಲ್ ವೃತ್ತದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ, ಮಾನವಹಕ್ಕು ಹೋರಾಟಗಾರ ಸ್ವಾಮಿ ಅಗ್ನಿವೇಶ್, ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಜಿ.ಕೆ.ಗೋವಿಂದ ರಾವ್, ರಹಮತ್ ತರೀಕೆರೆ, ಜೆಎನ್‌ಯು ವಿದ್ಯಾರ್ಥಿಗಳಾದ ಕನ್ನಯ್ಯ ಕುಮಾರ್, ಉಮರ್ ಖಾಲಿದ್, ಪತ್ರಕರ್ತೆ ವಿಜಯಮ್ಮ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.

ಕೋಮುವಾದಿ ಶಕ್ತಿಗಳು ಕೇವಲ ಬರಹಗಾರರ ಮೇಲೆ ಗುರಿಯಾಗಿಟ್ಟು ಹಲ್ಲೆ, ಕೊಲೆಗಳನ್ನು ನಡೆಸುತ್ತಿಲ್ಲ. ಈ ದೇಶದ ಜನಸಾಮಾನ್ಯರ ಸ್ವಾಭಿಮಾನದ ಬದುಕನ್ನೆ ನಾಶ ಮಾಡಲು ಹೊರಟಿದೆ. ವ್ಯಕ್ತಿಯೊಬ್ಬ ತಾನು ಇಷ್ಟಪಟ್ಟ ಆಹಾರವನ್ನು ತಿನ್ನಲಾರದ ಪರಿಸ್ಥಿತಿ ದೇಶದಲ್ಲಿ ತಲೆದೋರಿರುವುದು ಅಪಾಯದ ಬೆಳವಣಿಗೆ ಎಂದು ಲೇಖಕ ರಹಮತ್ ತರೀಕೆರೆ ಆತಂಕ ವ್ಯಕ್ತಪಡಿಸಿದರು.

ಸದ್ಯ ದೇಶದಲ್ಲಿ ದ್ವೇಷದ ಭಾರತ ಹಾಗೂ ಪ್ರೀತಿಯ ಭಾರತ ಕಟ್ಟುವವರ ನಡುವೆ ಸಂಘರ್ಷವೇರ್ಪಟ್ಟಿದ್ದು, ಯಾವ ಕಾರಣಕ್ಕೂ ದ್ವೇಷ ಬಿತ್ತುವವನ ಕೈಗೆ ಭಾರತ ಸಿಗದಂತೆ ಕಾಯಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಕೋಮುವಾದಿ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕಿದೆ ಎಂದು ಅವರು ಆಶಿಸಿದರು.

ದೇಶದಲ್ಲಿ ದ್ವೇಷವೆಂಬುದು ಅಂತರ್ಗತವಾಗಿದೆ. ಹೀಗಾಗಿ ದಿನನಿತ್ಯ ದಲಿತ, ಮಹಿಳೆಯರ ಹಾಗೂ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ಹಲ್ಲೆಗಳು ನಡೆಯುತ್ತಿವೆ. ಈ ಹಿಂದೆ ಇಂತಹ ದ್ವೇಷಕ್ಕೆ ಪ್ರಭುತ್ವದ ಬೆಂಬಲವಿರಲಿಲ್ಲ. ಆದರೆ, ಕಳೆದ ನಾಲ್ಕು ವರ್ಷಗಳಲ್ಲಿ ಪ್ರಭುತ್ವವೇ ನೇರವಾಗಿ ಹಲ್ಲೆಕೋರರಿಗೆ ಬೆಂಗಾವಲಾಗಿ ನಿಂತಿದೆ ಎಂದು ಅವರು ವಿಷಾದಿಸಿದರು.

ಸಿಪಿಎಂ ನಾಯಕ ಶ್ರೀರಾಮರೆಡ್ಡಿ ಮಾತನಾಡಿ, ಕೇಂದ್ರ ಸರಕಾರದ ಕುಮ್ಮಕ್ಕಿನಿಂದ ದೇಶಾದ್ಯಂತ ಮಾನವ ಹಕ್ಕು ಹೋರಾಟಗಾರರನ್ನು ಬಂಧಿಸಲಾಗಿದೆ. ಇಂತಹ ಬೆದರಿಕೆಗಳಿಗೆ ನಾವು ಹೆದರಬಾರದು. ಕೋಮುವಾದಿ ಶಕ್ತಿಗಳಿಂದ ದೇಶವನ್ನು ಉಳಿಸಿದರೆ ಮಾತ್ರ ನಾವು ಉಳಿಯಲು ಸಾಧ್ಯವೆಂದು ಅಭಿಪ್ರಾಯಿಸಿದರು. ಕೇವಲ ವ್ಯವಸ್ಥೆಯ ಅನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗುವವರನ್ನು ಬಂಧಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೇಂದ್ರ ಸರಕಾರ ಅಪಮಾನ ಮಾಡುತ್ತಿದೆ. ನಾನು ಆರೆಸ್ಸೆಸ್, ಬಿಜೆಪಿ ಹಾಗೂ ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತೇನೆ. ನನ್ನನ್ನು ಬಂಧಿಸಲಿ ಎಂದು ಅವರು ಸವಾಲು ಹಾಕಿದರು.

ಪತ್ರಕರ್ತೆ ವಿಜಯಮ್ಮ ಮಾತನಾಡಿ, ಕೇಂದ್ರ ಸರಕಾರದ ನೇತೃತ್ವದಲ್ಲಿ ನಡೆಯುತ್ತಿರುವ ಹಲ್ಲೆ, ಕೊಲೆ, ಬಂಧನಕ್ಕೆ ಮಾನವೀಯ ಮೌಲ್ಯಗಳನ್ನು ಹೊಂದಿರುವ ಯಾರು ಜಗ್ಗುವುದಿಲ್ಲ. ಮುಂದಿನ ಚುನಾವಣೆಯಲ್ಲಿ ನರೇಂದ್ರ ಮೋದಿ ಸರಕಾರವನ್ನು ಸೋಲಿಸುವುದು ನಮ್ಮ ಏಕೈಕ ಗುರಿಯೆಂದು ತಿಳಿಸಿದರು.

ಈ ವೇಳೆ ಮಾಜಿ ಸಚಿವೆ ಲಲಿತಾ ನಾಯಕ್, ಬಿಎಸ್ಪಿ ರಾಜ್ಯಾಧ್ಯಕ್ಷ ಪ್ರೊ.ಹರಿರಾಮ್, ದಲಿತ ಮುಖಂಡರಾದ ಎನ್.ವೆಂಕಟೇಶ್, ಮೋಹನ್‌ರಾಜ್, ಗೌರಿ ಲಂಕೇಶ್ ಬಳಗದ ನರಸಿಂಹ ಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಆರೆಸ್ಸೆಸ್‌ನ ಪೂರ್ಣಾವಧಿ ಕಾರ್ಯಕರ್ತರಾಗಿದ್ದ ನರೇಂದ್ರ ಮೋದಿಯನ್ನು ಏಕಾಏಕಿ ಗುಜರಾತ್ ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಲಾಯಿತು. ಇದರಿಂದ ಗೋಧ್ರಾ ಹತ್ಯಾಕಾಂಡ ಸೇರಿದಂತೆ ಅಲ್ಪಸಂಖ್ಯಾತರ ಮೇಲೆ ಹಲ್ಲೆಗಳು, ಬೆದರಿಕೆಗಳು ನಿತ್ಯ ನಿರಂತರವಾದವು. ಹೀಗಾಗಿ ಸಂಘಪರಿವಾರ ತನ್ನ ಪೂರ್ಣಾವಧಿ ಕಾರ್ಯಕರ್ತರನ್ನು ಮುಖ್ಯಮಂತ್ರಿ, ಪ್ರಧಾನಿ ಹುದ್ದೆ ಹಾಗೂ ಸರಕಾರಿ ಇಲಾಖೆಗಳಲ್ಲಿ ಉನ್ನತ ಹುದ್ದೆಗಳಿಗೆ ನೇಮಕ ಮಾಡಿ, ಸಂಪೂರ್ಣವಾಗಿ ಕೇಸರಿಮಯ ಮಾಡಲು ಹೊಂಚು ಹಾಕಿದೆ.
-ಸ್ವಾಮಿ ಅಗ್ನಿವೇಶ್, ಮಾನವ ಹಕ್ಕು ಹೋರಾಟಗಾರ

ಹಕ್ಕೊತ್ತಾಯಗಳು
-ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಂಸ್ಥೆಗಳನ್ನು ಭಯೋತ್ಪಾದಕ ಸಂಸ್ಥೆಗಳೆಂದು ಘೋಷಿಸಬೇಕು.
-ಈ ಸಂಘಟನೆಗಳ ಹಣಕಾಸು ಮತ್ತು ರಾಜಕೀಯ ಆಶ್ರಯದಾತರ ಬಗ್ಗೆ ತನಿಖೆ ನಡೆಯಬೇಕು.
-ಕೋಮು ಪ್ರಚೋದನೆಗೆ ಕಾರಣವಾಗುವ ಸನಾತನ ಸಂಸ್ಥೆಯ ಪ್ರಚಾರ-ಅಭಿಯಾನ ಹಾಗೂ ಬಹಿರಂಗ ಸಭೆ ಕಾರ್ಯಕ್ರಮಗಳನ್ನು ನಿಷೇಧಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News