22 ವರ್ಷ ಹಿಂದಿನ ಪ್ರಕರಣ: ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಪೊಲೀಸ್ ವಶಕ್ಕೆ

Update: 2018-09-05 07:31 GMT

ಅಹ್ಮದಾಬಾದ್, ಸೆ.5: ರಾಜಸ್ಥಾನ ಮೂಲದ ವಕೀಲರೊಬ್ಬರನ್ನು 1996ರಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಸಿ ಹಾಕಲಾಗಿತ್ತು ಎಂಬ ಆರೋಪದ ಮೇಲೆ ಗುಜರಾತ್ ರಾಜ್ಯದ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಪೊಲೀಸರು ಬುಧವಾರ ವಶಕ್ಕೆ ಪಡೆದುಕೊಂಡಿದ್ದಾರೆ.

 ಸುಮಾರು ಮೂರ್ನಾಲ್ಕು ತಿಂಗಳುಗಳ ಹಿಂದೆ ಈ ಪ್ರಕರಣವನ್ನು ಸಿಐಡಿ ಮೂಲಕ ತನಿಖೆ  ನಡೆಸುವಂತೆ ಗುಜರಾತ್ ಹೈಕೋರ್ಟ್ ಸೂಚಿಸಿದ ನಂತರ  ವಿಶೇಷ ತನಿಖಾ ತಂಡದ ವಿಚಾರಣೆಯ ವೇಳೆ ವಕೀಲರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿತ್ತೆಂದು ತಿಳಿದು ಬಂದಿತ್ತೆಂದು ಸಿಐಡಿ ಡಿಜಿಪಿ (ಅಪರಾಧ) ಆಶಿಷ್ ಭಾಟಿಯಾ ಹೇಳಿದ್ದಾರೆ. ನಾವು ಅವರನ್ನು ವಿಚಾರಣೆಗಾಗಿ ವಶಪಡಿಸಿಕೊಂಡಿದ್ದೇವೆ, ಒಟ್ಟು ಏಳು ಜನರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸಂಜೀವ್ ಭಟ್ ಅವರ ವಿಚಾರಣೆ ಮುಗಿದ ಬಳಿಕ ಅವರನ್ನು ಬಂಧಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಭಟ್ ಅವರು ಬಾನಸ್ಕಂತ ಜಿಲ್ಲೆಯ ಎಸ್‍ಪಿಯಾಗಿದ್ದಾಗ ವಕೀಲ ಸುಮೇರ್ ಸಿಂಗ್ ರಾಜಪುರೋಹಿತ್ ಅವರ ವಿರುದ್ಧ ಹಾಗೂ ಇನ್ನಿತರ ಕೆಲವರ ವಿರುದ್ಧ 22 ವರ್ಷಗಳ ಹಿಂದೆ ರಾಜಸ್ಥಾನದ ಪಾಲಿ ಎಂಬಲ್ಲಿ ದೂರು ದಾಖಲಿಸಿದ್ದರೆ ಅದನ್ನು ತನಿಖೆ ನಡೆಸುವಂತೆ ಗುಜರಾತ್ ಹೈಕೋರ್ಟ್ ಇತ್ತೀಚೆಗೆ ಆದೇಶಿಸಿತ್ತು.

ಗುಜರಾತಿನ ಮಾಜಿ ಹೈಕೋರ್ಟ್ ನ್ಯಾಯಾಧೀಶ ಜೈನ್ ಹಾಗೂ ಭಟ್ ಅವರ ಕಿರಿಯ ಅಧಿಕಾರಿಗಳ ಹೆಸರುಗಳನ್ನೂ ರಾಜಪುರೋಹಿತ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ತಮ್ಮನ್ನು ಅಪಹರಿಸಿ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಸಿ ತಾವು ಪಾಲಿ ನಗರದಲ್ಲಿದ್ದ  ಜಸ್ಟಿಸ್ ಜೈನ್ ಅವರ ಸೋದರಿಯ ಒಡೆತನದ ಬಾಡಿಗೆ ಮನೆಯನ್ನು ಖಾಲಿ ಮಾಡುವಂತೆ ಬಲವಂತ ಪಡಿಸಲಾಯಿತು ಎಂದು ಅವರು ದೂರಿದ್ದರು.

ಬಾನಸ್ಕಂತ ಪೊಲೀಸರು ಗುಜರಾತ್ ನ ಪಾಲನಪುರ ಎಂಬಲ್ಲಿನ ಹೋಟೆಲ್ ಒಂದರಲ್ಲಿ ಒಂದು ಕೆಜಿ ಗಾಂಜಾ ವಶಪಡಿಸಿಕೊಂಡ ನಂತರ ರಾಜಪುರೋಹಿತ್ ಅವರನ್ನು ಬಂಧಿಸಲಾಗಿತ್ತು. ತಾನು ಈ ಹೋಟೆಲ್ ರೂಂ ಪಡೆದಿರಲಿಲ್ಲ ಹಾಗೂ ಆ ಸಂದರ್ಭ ತಾನು ಪಾಲಿ ಎಂಬಲ್ಲಿದ್ದೆ ಎಂದು ಅವರು ಹೇಳಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News