ಅನುದಾನ ರಾಜ್ಯದ್ದು, ಹೆಸರು ಕೇಂದ್ರದ್ದು: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-09-05 13:18 GMT

ಬೆಂಗಳೂರು, ಸೆ.5: ರಾಜ್ಯ ಸರಕಾರದ ಹಣದಿಂದ ನಡೆಯುತ್ತಿರುವ ಕೆಲವು ಯೋಜನೆಗಳು ಕೇಂದ್ರ ಸರಕಾರಕ್ಕೆ ಹೆಸರು ತಂದುಕೊಡುತ್ತಿದ್ದು, ಅಂತಹ ಯೋಜನೆಗಳನ್ನು ಯಾವ ರೀತಿಯಲ್ಲಿ ಅನುಷ್ಠಾನ ಮಾಡಲು ಸಾಧ್ಯವಿದೆ ಎಂಬುದನ್ನು ಚರ್ಚಿಸಿ ನಿರ್ಣಯ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಬುಧವಾರ ಉನ್ನತ ಶಿಕ್ಷಣ ಇಲಾಖೆ, ರಾಜ್ಯ ವಿಶ್ವವಿದ್ಯಾಲಯ ಹಾಗೂ ಕಾಲೇಜು ಶಿಕ್ಷಕರ ಒಕ್ಕೂಟದ ವತಿಯಿಂದ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೇಂದ್ರ ಸರಕಾರ ಜಾರಿ ಮಾಡಿರುವ ‘ಆಯುಷ್ಮಾನ್ ಭಾರತ್’ ಯೋಜನೆಗೆ ಕರ್ನಾಟಕದಲ್ಲಿ ಅನುಷ್ಠಾನ ಮಾಡಲು 280 ಕೋಟಿ ರೂ.ಗಳನ್ನು ನೀಡಿದೆ. ಆದರೆ, ಈ ಯೋಜನೆಗೆ ರಾಜ್ಯ ಸರಕಾರ ಈಗಾಗಲೇ 800 ಕೋಟಿ ನೀಡಿದೆ. ಅಲ್ಲದೆ, ಈ ಯೋಜನೆಯಲ್ಲಿ ಹಲವಾರು ಲೋಪಗಳಿದ್ದು, ಅದನ್ನು ಸರಿಪಡಿಸಬೇಕಿದೆ ಎಂದು ಹೇಳಿದರು.

ಜನರಿಗೆ ಉಪಯೋಗವಾಗುವ ರೀತಿಯಲ್ಲಿ ಯೋಜನೆ ರೂಪಿಸಬೇಕು. ಯೋಜನೆ ಆಕರ್ಷಕವಾಗಿರಲಿ ಎಂಬ ಉದ್ದೇಶದಿಂದ ಕೇಂದ್ರ ಸರಕಾರವು ಹೆಸರುಗಳನ್ನಿಡುತ್ತಿದೆ. ರಾಜ್ಯ ಮತ್ತು ಕೇಂದ್ರ ಸರಕಾರದ ಯೋಜನೆಗಳಿಗೆ ಕೇಂದ್ರ ಸರಕಾರದ ಯೋಜನೆ ಎಂದು ಹೆಸರು ಇಡಲಾಗುತ್ತಿದೆ. ಹೀಗಾಗಿ, ಶೀಘ್ರದಲ್ಲಿಯೇ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಆಯುಷ್ಮಾನ್ ಭಾರತ್ ಮಾತ್ರವಲ್ಲ, ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಮೂಲಕ ಬೇರೆ ರಾಜ್ಯದ ವಿದ್ಯಾರ್ಥಿಗಳಿಗೆ ರಾಜ್ಯದ ವೈದ್ಯಕೀಯ ಸೀಟು ನೀಡಬೇಕಿದೆ. ಪರೋಕ್ಷವಾಗಿ ರಾಜ್ಯದ ಮೇಲೆಯೇ ಹೊರೆ ಬೀಳಲಿದೆ, ಕೇಂದ್ರ ಸರಕಾರವು ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ತೆಗೆದು ರಾಷ್ಟ್ರೀಯ ಶಿಕ್ಷಣ ಆಯೋಗ ಮಾಡುತ್ತಿರುವುದೂ ಹಾಗೆಯೇ ಇದೆ ಅವರು ದೂರಿದರು.

1986ರ ಶಿಕ್ಷಣ ಕಾಯ್ದೆಯಲ್ಲಿ ರಾಜ್ಯದ ಆಯವ್ಯಯ ಮತ್ತು ಜಿಡಿಪಿಯ ಶೇ.6ರಷ್ಟು ಅನುದಾನವನ್ನು ಶಿಕ್ಷಣಕ್ಕೆ ಮೀಸಲಿಡಬೇಕು ಎಂದಿದೆ. ಪ್ರಸ್ತುತ ಬಜೆಟ್‌ನಲ್ಲಿ ಶೇ.12ರಷ್ಟು ಅನುದಾನವನ್ನು ಮೀಸಲಿಡಲಾಗಿದೆ. ದೆಹಲಿಯ ಮಾದರಿ ಶಾಲೆಗಳ ಕಾರ್ಯಕ್ರಮಗಳನ್ನು ವೀಕ್ಷಿಸಲಾಗುತ್ತಿದ್ದು, ಸಾಧ್ಯವಾದರೆ ರಾಜ್ಯದಲ್ಲಿ ಅನುಷ್ಠಾನಕ್ಕೆ ಮುಂದಾಗಲಾಗುವುದು. ಅಲ್ಲದೆ, ಬೇರೆ ರಾಜ್ಯಗಳಲ್ಲಿನ ಶಿಕ್ಷಣ ಪದ್ಧತಿ ಕುರಿತು ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ರೈತರ ಸಾಲ ಮನ್ನಾ ಮಾಡಿರುವುದರಿಂದ ಸರಕಾರದಲ್ಲಿ ಹಣದ ಕೊರತೆ ಎದುರಾಗಿದೆ ಎನ್ನುವುದು ಸುಳ್ಳು. ಸರಕಾರದಲ್ಲಿ ಹಣದ ಕೊರತೆಯಿಲ್ಲ. ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಶೇ.33 ರಷ್ಟು ಆದಾಯ ಹೆಚ್ಚಾಗಿದ್ದು, ಇದೀಗ ಸರಕಾರದ ಖಾತೆಯಲ್ಲಿ ನಾಲ್ಕು ಸಾವಿರ ಕೋಟಿ ಹಣವಿದೆ. ಸಾಲ ಮನ್ನಾದ ಹೊರೆಯನ್ನು ಇಳಿಸಿಕೊಳ್ಳಲು ಬೇರೆ ಯಾವುದೇ ಯೋಜನೆಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂದ ಅವರು ಹೇಳಿದರು.

ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಮಾತನಾಡಿ, ಪ್ರಸ್ತುತ ಪದವಿ ಪೂರ್ಣಗೊಳಿಸಿ ಹೊರ ಬರುತ್ತಿರುವ ವಿದ್ಯಾರ್ಥಿಗಳ ಪೈಕಿ ಶೇ.80ರಷ್ಟು ಮಂದಿ ನಿರುದ್ಯೋಗಿಗಳಾಗುತ್ತಿದ್ದಾರೆ. ಉದ್ಯೋಗ ಸೃಷ್ಟಿಸುವ ಕೌಶಲ್ಯಾಧಾರಿತ ಕೋರ್ಸ್‌ಗಳನ್ನು ಆರಂಭಿಸುವತ್ತ ಹೆಚ್ಚಿನ ಗಮನ ಹರಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಕರ ಸಂಘಗಳ ಒಕ್ಕೂಟದ ವತಿಯಿಂದ ಹಳೆ ಪಿಂಚಣಿ ಯೋಜನೆ ಜಾರಿ, 2016 ರ ಯುಜಿಸಿ ನಿಯಮಾವಳಿ ಅನ್ವಯ ವೇತನ ಪಾವತಿ, ಪ್ರಾಂಶುಪಾಲರ ನೇಮಕ ಸೇರಿದಂತೆ ಹಲವು ಬೇಡಿಕೆಗಳ ಪಟ್ಟಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಿದರು. ಶಿಕ್ಷಕರ ಬೇಡಿಕೆಗಳನ್ನು ಬಗೆಹರಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಸಿಎಂ ಭರವಸೆ ನೀಡಿದರು. ಈ ವೇಳೆ ಶಾಸಕ ರೋಷನ್ ಬೇಗ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜುಲೈ-ಆಗಸ್ಟ್‌ರೊಳಗೆ ರೈತರ ಸಾಲ ಮನ್ನಾ ಹಣ ಪಾವತಿ

ರೈತರ ಸಾಲ ಮನ್ನಾ ಮಾಡಿರುವ ಹಣವನ್ನು ನಾಲ್ಕು ಕಂತುಗಳಲ್ಲಿ ಪಾವತಿ ಮಾಡಲಾಗುವುದು ಎಂದು ಬ್ಯಾಂಕುಗಳಿಗೆ ತಿಳಿಸಲಾಗಿದೆ. ಹೀಗಿದ್ದರೂ ಕೆಲವು ಬ್ಯಾಂಕುಗಳು ರೈತರನ್ನು ಸಾಲ ಕೇಳುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಸರಕಾರ ನಾಲ್ಕು ಕಂತಿನ ಅವಧಿವರೆಗೂ ಕಾಯ್ದು ಕುಳಿತುಕೊಳ್ಳುವುದಿಲ್ಲ. ಮುಂದಿನ ಜುಲೈ ಅಥವಾ ಆಗಸ್ಟ್‌ನೊಳಗೆ ಸಾಧ್ಯವಾದರೆ ಹಣ ಪಾವತಿ ಮಾಡಲಾಗುತ್ತದೆ.

-ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News