ತನ್ನ ಆಪ್ತರೇ ದಾಳಿ ನಡೆಸಿದ್ದರಿಂದ ಪ್ರಧಾನಿ ಮೋದಿ ಮೌನವಾಗಿದ್ದಾರೆಯೇ?: ಸ್ವಾಮಿ ಅಗ್ನಿವೇಶ್ ಪ್ರಶ್ನೆ

Update: 2018-09-05 16:26 GMT

ಬೆಂಗಳೂರು, ಸೆ.5: ರಾಷ್ಟ್ರ ನಾಯಕ ಜಯಪ್ರಕಾಶ್ ನಾರಾಯಣ್‌ರವರು ಒಂದು ಮಾತು ಹೇಳಿದ್ದರು; ‘ಸತ್ಯ ಹೇಳುವುದು ಒಂದು ವೇಳೆ ಬಂಡಾಯವಾಗುವುದಾದರೆ ನಾವು ಬಂಡಾಯಗಾರರೇ ಸರಿ’. ಇಂದು ನಾವೆಲ್ಲರೂ ಸತ್ಯಕ್ಕಾಗಿ ಬಂಡಾಯಗಾರರಾಗೋಣ ಎಂದು ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್ ಕರೆ ನೀಡಿದರು.

ಬುಧವಾರ ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗೌರಿ ಲಂಕೇಶ್ ಬಳಗ ಮತ್ತು ಗೌರಿ ಸ್ಮಾರಕ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಅಭಿವ್ಯಕ್ತಿ ಸ್ವಾತಂತ್ರ ಸಮಾವೇಶದ ‘ಕಗ್ಗತ್ತಲ ಕಾಲದ ಕೋಲ್ಮಿಂಚುಗಳು’ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಾವು ಗೌರಿಯನ್ನು ಜೀವಂತವಾಗಿಡುವ ಅಗತ್ಯವಿದೆ. ಏಕೆಂದರೆ ಆಕೆ ಶೋಷಿತ ಜನರ ದನಿಯಾಗಿದ್ದರು. ಇಂದು ಅಂತಹ ಜನರನ್ನು ದಾಳಿಗೊಳಪಡಿಸಲಾಗುತ್ತಿದೆ. ದಲಿತರಿಗಾಗಿ, ಆದಿವಾಸಿಗಳಿಗಾಗಿ, ಶೋಷಿತರಿಗಾಗಿ ದನಿಯೆತ್ತುವ ಎಲ್ಲರನ್ನೂ ಇಂದು ‘ಅರ್ಬನ್ ನಕ್ಸಲ್’(ನಗರ ನಕ್ಸಲ್) ಎಂಬ ಹಣೆಪಟ್ಟಿ ಕಟ್ಟಿ ಬಂಧಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮನ್ನೆಲ್ಲ ಬಾಯಿಮುಚ್ಚಿಸಲು ಸರಕಾರ ಇನ್ನೂ ಅದೆಷ್ಟು ಕಾನೂನುಗಳನ್ನು ತರಬಹುದು? ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ಮತ್ತು ವಕೀಲರು ಇತ್ತೀಚೆಗೆ ಮಾನವ ಹಕ್ಕು ಕಾರ್ಯಕರ್ತರು ಹಾಗೂ ವಕೀಲರುಗಳ ಬಂಧನವನ್ನು ಖಂಡಿಸುತ್ತಾ, ‘ವಿಮರ್ಶೆ ಎಂಬುದು ಪ್ರಜಾತಂತ್ರದ ಸುರಕ್ಷತೆಯ ಕಿಂಡಿ’ ಎಂದು ಹೇಳಿದ್ದನ್ನು ಅಗ್ನಿವೇಶ್ ಸ್ಮರಿಸಿದರು.

ಆದರೆ, ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ‘ಸುರಕ್ಷತೆಯ ಕಿಂಡಿ ಸರಿ, ಆದರೆ ಆ ಕಾರಣಕ್ಕೆ ನೀವು ಸರಕಾರವನ್ನು ಟೀಕಿಸಲಾರಂಭಿಸಿದರೆ ನಾವು ಸುಮ್ಮನಿರುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಗೃಹ ಸಚಿವರು ಸಂವಿಧಾನವನ್ನು ಹೇಗೆ ಅರ್ಥೈಸಿಕೊಂಡಿದ್ದಾರೆ? ಸರಕಾರ ಎಂಬುದು ದೇಶವಲ್ಲ, ಸರಕಾರವನ್ನು ಟೀಕಿಸಿದರೆ ದೇಶವನ್ನು ವಿರೋಧಿಸಿದಂತಲ್ಲ; ಸರಕಾರ ಇದೇ ಇರಲಿ ಬದಲಾಗಲಿ, ದೇಶ ಮಾತ್ರ ಮುಂದೆಯೂ ಇದ್ದೇ ಇರುತ್ತದೆ, ಆದ್ದರಿಂದ ನಮ್ಮ ನಿಷ್ಠೆ ಈ ದೇಶಕ್ಕೇ ಹೊರತು ಕ್ಷಣಿಕವಾದ ಸರಕಾರಗಳಿಗಲ್ಲ ಎಂದು ಅವರು ತಿರುಗೇಟು ನೀಡಿದರು.

ಗೌರಿ ಇಂದು ಇಂತಹ ಒಂದು ವಿಮರ್ಶೆಗೆ ಒಂದು ಪ್ರತೀಕವಾಗಿದ್ದಾರೆ. ಇದು ಒಂದು ವೈಚಾರಿಕ ಚಳವಳಿಯ ಸ್ವರೂಪ ತಳೆದಿದೆ, ಇದು ಇಷ್ಟಕ್ಕೇ ನಿಲ್ಲಬಾರದು ರಾಜಕೀಯ ಆಂದೋಲನವೂ ಆಗಬೇಕು. ಗೌರಿಯ ಆಶಯಗಳನ್ನು ಮುಂದಕ್ಕೊಯ್ಯಲು ‘ನ್ಯಾಯಪಥ’ ಎಂಬ ಪತ್ರಿಕೆಯನ್ನು ಆರಂಭಿಸಿದ್ದೀರಿ. ಇಂತಹ ಪತ್ರಿಕೆಗಳು ಬೀದಿಬೀದಿಯಲ್ಲಿ ಗಲ್ಲಿಗಲ್ಲಿಗಳಲ್ಲಿ ಆರಂಭವಾಗಬೇಕು ಎಂದು ಅವರು ಹೇಳಿದರು.

1921ರಿಂದ ಹಿಡಿದು ಇಲ್ಲಿಯವರೆಗೆ ಅದೆಷ್ಟೋ ಎಳೆಯ ಮನಸ್ಸುಗಳಿಗೆ ಸಂಘಪರಿವಾರ ವಿಷ ತುಂಬಿಸಿರಬಹುದು. ಈಗಲೂ ಇದು ನಡೆಯುತ್ತಲೇ ಇದೆ. ಇಂತಹ ವಿಷತುಂಬಿದ ಮನಸ್ಸುಗಳಿಗೆ ಸತ್ಯವನ್ನು ತಿಳಿಸಲು ನಾವು ಮನೆ ಮನಗಳನ್ನು ತಲುಪಬೇಕು. ಇದರಿಂದೆಲ್ಲ ನಮ್ಮನ್ನು ವಿಮುಖಗೊಳಿಸಲು ಹಿಂದೂ ಮುಸ್ಲಿಂ ದ್ವೇಷದ ಅಜೆಂಡಾ ಮುಂದೆ ತರಲಾಗಿದೆ. ಇದರಿಂದೆಲ್ಲ ನಾವು ಕಂಗೆಡಬಾರದು, ಏಕೆಂದರೆ ನಮ್ಮದು ಬಡವರ ಪರವಾದ ಸತ್ಯದ ಪರವಾದ ಹೋರಾಟ ಎಂದು ಅವರು ಹೇಳಿದರು.

ಕೆಲವರು ದೇಹದ ಮೇಲೆ ಚಿನ್ನದೆಳೆಗಳನ್ನು ಹೇರಿಕೊಂಡಿದ್ದರೆ, ಇನ್ನೊಂದಷ್ಟು ಜನರ ಮೈಮೇಲೆ ನೂಲಿನೆಳೆಯೂ ಇಲ್ಲ; ನಾವು ಏಕೆ ಬಂಡಾಯ ಎದ್ದಿದ್ದೇವೆಂದರೆ, ಈ ಅನ್ಯಾಯ ನಮಗೆ ಒಪ್ಪಿಗೆಯಿಲ್ಲ. ನನ್ನ ಮೇಲೆ ದಾಳಿ ಮಾಡಿದ್ದ ಬಗ್ಗೆ ಪ್ರಶ್ನಿಸಿದಾಗ ದಾಳಿ ಮಾಡಿದವರು ಹೇಳುವುದಿಷ್ಟೇ ಆತ ನಮ್ಮ ಧರ್ಮದ ನಂಬಿಕೆಗಳನ್ನು ಪ್ರಶ್ನಿಸುತ್ತಾನೆ. ಹೌದು ನಾನು ಪ್ರಶ್ನಿಸುತ್ತೇನೆ. ಏಕೆಂದರೆ ಸಂವಿಧಾನದ ಕಲಂ 15 ಹೇಳುತ್ತದೆ, ‘ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಿ’ ಎಂದು ಅವರು ಹೇಳಿದರು.

ವೇದಗಳು ಹೇಳುತ್ತವೆ ‘ತರ್ಕದಿಂದ ಯಾವುದು ಸಾಬೀತಾಗಿಲ್ಲವೋ ಅಂಥದ್ದನ್ನು ಒಪ್ಪಬೇಡ’ ಎಂದು. ಅದರಿಂದ ನಾನು ಪ್ರಶ್ನಿಸುತ್ತೇನೆ. ಆ ಕಾಲದಲ್ಲೇ ಪ್ಲಾಸ್ಟಿಕ್ ಸರ್ಜರಿ ಇತ್ತು, ಪ್ರನಾಳ ಶಿಶು ತಂತ್ರಜ್ಞಾನ ಎಂಬುದೆಲ್ಲ ಇತ್ತು ಎಂಬಂತಹ ಅಸಂಬದ್ಧಗಳನ್ನು ನಾವು ನಂಬಬೇಕೆ? ಪ್ರಶ್ನಿಸುವುದು ಬೇಡವೇ? ಆ ಕಾಲದಲ್ಲೇ ಪ್ಲಾಸ್ಟಿಕ್ ಸರ್ಜರಿ ಇದ್ದಿದ್ದೇ ಆಗಿದ್ದರೆ ಗಣೇಶನಿಗೆ ಆನೆಯ ಮುಖ ಜೋಡಿಸುವ ಬದಲು ಕಡಿದುರುಳಿಸಲಾಗಿದ್ದ ಮಗುವಿನ ಮುಖ ಯಾಕೆ ಜೋಡಿಸಲಿಲ್ಲ? ಎಂದು ಅವರು ಪ್ರಶ್ನಿಸಿದರು.

ನನ್ನ ಮೇಲೆ ಜಾರ್ಖಂಡ್‌ನಲ್ಲಿ ದಾಳಿಯಾಗಿ ಒಂದೂವರೆ ತಿಂಗಳಾಗಿದೆ. ಇಂದಿಗೂ ಪ್ರಧಾನ ಮಂತ್ರಿಗಳು ಬಾಯಿ ಬಿಚ್ಚಿ ಒಂದೂ ಮಾತು ಆಡಿಲ್ಲ. ಏಕೆ? ಈ ದಾಳಿಗಳನ್ನು ಮಾಡಿದವರು ಪ್ರಧಾನಿಗಳಿಗೆ ಬಹಳ ಆಪ್ತರೇ ಆಗಿರಬೇಕಲ್ಲವೇ? ಈಗ ಜಾರ್ಖಂಡ್ ದಾಳಿಯ ಭಾಗಿಗಳೆಲ್ಲ ಅಲ್ಲಿನ ಬಿಜೆಪಿ ಮುಖಂಡರೇ ಎಂಬುದು ಹೊರಬೀಳುತ್ತಿದೆ. ಆದರೆ ಈ ದಾಳಿಗಳಿಗೆ ನಾವು ಬೆದರುವುದಿಲ್ಲ ಎಂದು ಸ್ವಾಮಿ ಅಗ್ನಿವೇಶ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News