ಇನ್ನು ಸಾಮಾಜಿಕ ಜಾಲತಾಣ ಪ್ರಚಾರ ಕೂಡಾ ಸುಲಭವಲ್ಲ ಏಕೆ ಗೊತ್ತೇ ?

Update: 2018-09-06 03:34 GMT

ಹೊಸದಿಲ್ಲಿ, ಸೆ. 6: ಮುಂದಿನ ಸಾರ್ವತ್ರಿಕ ಚುನಾವಣೆ ಹಾಗೂ ಮುಂಬರುವ ವಿಧಾನಸಭಾ ಚುನಾವಣೆಗಳ ವೇಳೆ ತಮ್ಮ ಪ್ಲಾಟ್‌ಫಾರಂ ಮೂಲಕ ಕಾಣಿಸಿಕೊಳ್ಳುವ ರಾಜಕೀಯ ಜಾಹೀರಾತುಗಳು ಮತ್ತು ಪ್ರಚಾರ ಸಾಮಗ್ರಿಗಳ ಮೇಲೆ ಕಣ್ಗಾವಲು ಇಡಲು ಪ್ರಮುಖ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಗೂಗಲ್ ಮತ್ತು ಟ್ವಿಟ್ಟರ್ ನಿರ್ಧರಿಸಿವೆ. ಜತೆಗೆ ಸುಳ್ಳು, ಮಾನಹಾನಿಕರ ಹಾಗೂ ಆಕ್ಷೇಪಾರ್ಹ ಅಂಶಗಳನ್ನು ತಡೆಯುವ ನಿಟ್ಟಿನಲ್ಲಿ ಕೂಡಾ ಗಂಭೀರ ಪ್ರಯತ್ನ ನಡೆಸಿವೆ.

ಕಳೆದ ಕೆಲ ತಿಂಗಳುಗಳಿಂದ ಚುನಾವಣಾ ಆಯೋಗದ ಜತೆ ನಿರಂತರ ಸಂವಾದದಲ್ಲಿ ತೊಡಗಿರುವ ಈ ಮೂರು ಇಂಟರ್‌ನೆಟ್ ಆಧರಿತ ಕಂಪನಿಗಳು, ಮತದಾನಕ್ಕೆ ಮುನ್ನ 48 ಗಂಟೆಗಳನ್ನು "ಮೌನ ಅವಧಿ"ಯಾಗಿ ಪರಿಗಣಿಸಲು ಕೂಡಾ ಒಪ್ಪಿಕೊಂಡಿವೆ. ಈ ಸಮಯದಲ್ಲಿ ಯಾವುದೇ ರಾಜಕೀಯ ಜಾಹೀರಾತುಗಳನ್ನು ಆನ್‌ಲೈನ್‌ನಲ್ಲಿ ಪ್ರಕಟಿಸುವುದಿಲ್ಲ ಎಂದು ಖಾತರಿಪಡಿಸಿವೆ.

ಯಾವುದೇ ರಾಜಕೀಯ ಪಕ್ಷ, ಮುಖಂಡ ಅಥವಾ ಅಭ್ಯರ್ಥಿಯ ಪರ ಪ್ರಕಟವಾಗುವ ಪ್ರಾಯೋಜಿತ ವಿಷಯಗಳ ಜತೆಗೆ ಪ್ರಾಯೋಜಕರ ಹೆಸರು ಮತ್ತು ಇವುಗಳನ್ನು ಫೇಸ್‌ಬುಕ್, ವಾಟ್ಸ್‌ಆ್ಯಪ್, ಗೂಗಲ್ ಅಥವಾ ಟ್ವಿಟ್ಟರ್‌ನಲ್ಲಿ ಪ್ರಕಟಿಸಲು ಮಾಡಿದ ಪಾವತಿ ಬಗ್ಗೆ ವಿವರಗಳನ್ನು ಕೂಡಾ ಜಾಹೀರಾತು ಜತೆ ಪ್ರದರ್ಶಿಸಲು ಕೂಡಾ ಈ ಸಂಸ್ಥೆಗಳು ಒಪ್ಪಿಕೊಂಡಿವೆ.

ಋಣಾತ್ಮಕ ರಾಜಕೀಯ ಜಾಹೀರಾತುಗಳನ್ನು ಸ್ಕ್ರೀನಿಂಗ್ ಮಾಡಿ ನಿಷೇಧಿಸುವ ನಿರ್ಧಾರ ಸಂಪೂರ್ಣ ಸ್ವಯಂಪ್ರೇರಿತ ಎಂದು ಸಾಮಾಜಿಕ ಜಾಲತಾಣ ಕಂಪನಿಗಳು ಹೇಳಿವೆ. ಪಕ್ಷಪಾತದ ಅಥವಾ ಋಣಾತ್ಮಕ ಪ್ರಚಾರ, ಸುಳ್ಳುಸುದ್ದಿ, ವೈಯಕ್ತಿಕ ದಾಳಿ ಮತ್ತು ದ್ವೇಷ ಹರಡುವಂಥ ಜಾಹೀರಾತುಗಳನ್ನು ತಡೆಯಲು ಸ್ವಯಂ ಸೆನ್ಸಾರ್ ವ್ಯವಸ್ಥೆ ರೂಪಿಸುವುದಾಗಿ ಚುನಾವಣಾ ಆಯೋಗಕ್ಕೆ ಭರವಸೆ ನೀಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News